Site icon Vistara News

Petrol Price: ಚುನಾವಣೆಗೂ ಮೊದಲು ಪೆಟ್ರೋಲ್‌ ಬೆಲೆ ಇಳಿಕೆಯಾಗಲಿದೆಯೇ? ಕೇಂದ್ರ ಸಚಿವ ನೀಡಿದ ಸ್ಪಷ್ಟನೆ ಇದು

Hardeep Singh Puri On Petrol Price

Fuel prices to reduce before Lok Sabha polls? What Union Minister Hardeep Puri Said?

ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌ ಸೇರಿ ಸಕಲ ಪಕ್ಷಗಳು ಸಿದ್ಧವಾಗುತ್ತಿವೆ. ಪ್ರತಿಪಕ್ಷಗಳೆಲ್ಲ ಒಗ್ಗೂಡಿವೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಎಲ್‌ಪಿಜಿ ಸಿಲಿಂಡರ್‌, ಪೆಟ್ರೋಲ್‌, ಡೀಸೆಲ್‌ ಬೆಲೆ (Petrol Price) ಇಳಿಕೆ ಮಾಡುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಪೆಟ್ರೋಲ್‌ ಬೆಲೆ ಇಳಿಕೆ ಕುರಿತು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್‌ ಸಿಂಗ್‌ ಪುರಿ (Hardeep Singh Puri) ಸ್ಪಷ್ಟಪಡಿಸಿದ್ದಾರೆ. “ಪೆಟ್ರೋಲ್‌ ಬೆಲೆ ಇಳಿಕೆ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿರುವುದು ನಿಜವಲ್ಲ” ಎಂದು ಹೇಳಿದ್ದಾರೆ.

“ಪೆಟ್ರೋಲ್‌ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆ, ಸಾಗಣೆ ವೆಚ್ಚ, ಸಂಸ್ಕರಣಾ ವೆಚ್ಚ ಹಾಗೂ ಸುಂಕಗಳ ಆಧಾರದ ಮೇಲೆ ನಿಗದಿಯಾಗುತ್ತದೆ. ಹಾಗಾಗಿ, ಪೆಟ್ರೋಲ್‌ ಬೆಲೆ ಇಳಿಕೆಯಾಗುತ್ತದೆ ಎಂಬ ಕುರಿತು ವರದಿಯಾಗಿರುವುದು ತಪ್ಪು ಕಲ್ಪನೆಯಾಗಿದೆ. ಹೀಗೆ ಏಕಾಏಕಿ ಪೆಟ್ರೋಲ್‌ ಬೆಲೆಯನ್ನು ಇಳಿಸಲು ಆಗುವುದಿಲ್ಲ. ಅದು ಹಲವು ಅಂಶಗಳ ಮೇಲೆ ನಿರ್ಧಾರವಾಗುತ್ತದೆ” ಎಂದು ಆಜ್‌ ತಕ್‌ಗೆ ಹರ್ದೀಪ್‌ ಸಿಂಗ್‌ ಪುರಿ ತಿಳಿಸಿದರು.

2022ರಲ್ಲಿ ಕೊರೊನಾ ಬಿಕ್ಕಟ್ಟಿನ ಬಳಿಕ ತೈಲ ಬೆಲೆಯಲ್ಲಿ ಭಾರಿ ಏರಿಕೆಯಾಯಿತು. ಆದರೆ, ಕೇಂದ್ರ ಸರ್ಕಾರವು ತೈಲ ಪೂರೈಕೆದಾರರಿಗೆ ಬೆಲೆ ಇಳಿಕೆ ಮಾಡಿ ಎಂದು ಮನವಿ ಮಾಡಲಿಲ್ಲ. ಅದರ ಬದಲಾಗಿ, ಜನರಿಗೆ ಹೊರೆಯಾಗಬಾರದು ಎಂದು ಮೌಲ್ಯವರ್ಧಿತ ತೆರಿಗೆಯನ್ನು ಕಡಿತಗೊಳಿಸಲಾಯಿತು. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮೌಲ್ಯವರ್ಧಿತ ತೆರಿಗೆಯನ್ನು 8ರಿಂದ 11 ರೂ.ವರೆಗೆ ಇಳಿಕೆಯಾಯಿತು” ಎಂದು ಹೇಳಿದರು.

ಇದನ್ನೂ ಓದಿ: Lok Sabha Election 2024: ಎಲ್‌ಪಿಜಿ ಬೆಲೆ ಇಳಿಕೆ‌, ಕಿಸಾನ್‌ ಸಮ್ಮಾನ್‌ ನಿಧಿ ಹೆಚ್ಚಳ; ಚುನಾವಣೆ ಮುನ್ನ ಮೋದಿ ಗುಡ್‌ ನ್ಯೂಸ್

ಬೆಲೆ ಇಳಿಕೆ ಕುರಿತು ಚರ್ಚೆ

ದೇಶದಲ್ಲಿ ಬೆಲೆ ಇಳಿಕೆ ಕುರಿತು ಭಾರಿ ಚರ್ಚೆಯಾಗುತ್ತಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಡುತ್ತದೆ ಎನ್ನಲಾಗುತ್ತಿದೆ. ಪೆಟ್ರೋಲ್‌ ಮಾತ್ರವಲ್ಲ ಅಡುಗೆ ಅನಿಲ ಸಿಲಿಂಡರ್‌ ಬೆಲೆಯೂ ಇಳಿಯಲಿದೆ. ಎಲ್‌ಪಿಜಿ ಬೆಲೆ ಕಳೆದ ಮೂರು ವರ್ಷಗಳಲ್ಲಿ ಡಬಲ್‌ ಆಗಿದೆ. ಸಿಲಿಂಡರ್‌ ಬೆಲೆ ಈಗ 1,100 ರೂ. ಆಗಿದ್ದು, ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೆಟ್ರೋಲ್‌ ಬೆಲೆಯೂ 100 ರೂ. ಇದೆ. ಹಾಗಾಗಿ, ಕೇಂದ್ರ ಸರ್ಕಾರವು ಮೊದಲು ಅಡುಗೆ ಅನಿಲ ಸಿಲಿಂಡರ್‌ ಬೆಲೆ ಇಳಿಸಲಿದೆ. ಇದಾದ ಬಳಿಕ ಪೆಟ್ರೋಲ್‌ ಬೆಲೆಯನ್ನೂ ಕಡಿತಗೊಳಿಸಲಿದೆ. ಅಷ್ಟೇ ಅಲ್ಲ, 2024ರ ಲೋಕಸಭೆ ಚುನಾವಣೆ ವೇಳೆ ಹರ್‌ ಘರ್‌ ಜಲ್‌ ಯೋಜನೆ ಅಡಿಯಲ್ಲಿ ನಲ್ಲಿ ಸಂಪರ್ಕ, ನೀರ ಪೂರೈಕೆಯಲ್ಲಿ ಶೇ.100ರಷ್ಟು ಸಾಧನೆ ಮಾಡುವುದು ಸರ್ಕಾರದ ಗುರಿಯಾಗಿದೆ. ಕಿಸಾನ್‌ ಸಮ್ಮಾನ್‌ ನಿಧಿಯ ಮೊತ್ತವನ್ನೂ ಏರಿಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

Exit mobile version