Site icon Vistara News

Electoral Bonds: ʼಚುನಾವಣೆ ಬಾಂಡ್‌ ಕುರಿತು ಕೋರ್ಟ್‌ ತೀರ್ಪು ಬಗ್ಗೆ ಗೌರವವಿದೆ, ಆದರೆ…ʼ ಅಮಿತ್‌ ಶಾ

amith shah

ಹೊಸದಿಲ್ಲಿ: ಚುನಾವಣಾ ಬಾಂಡ್‌ಗಳ (Electoral Bonds) ಕುರಿತು ಸುಪ್ರೀಂ ಕೋರ್ಟ್‌ನ (Supreme Court) ಆದೇಶವನ್ನು ಸಂಪೂರ್ಣವಾಗಿ ಗೌರವಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Home minister Amit Shah) ಹೇಳಿದ್ದಾರೆ. ಆದರೆ, ರಾಜಕೀಯದಲ್ಲಿ ಕಪ್ಪುಹಣವನ್ನು (Black Money) ಕೊನೆಗೊಳಿಸಲು ಪರಿಚಯಿಸಲಾಗಿದ್ದ ಈ ಯೋಜನೆಯನ್ನು ರದ್ದುಗೊಳಿಸುವ ಬದಲು ಸುಧಾರಿಸಬೇಕಿತ್ತು ಎಂದು ಹೇಳಿದ್ದಾರೆ.

“ಭಾರತೀಯ ರಾಜಕೀಯದಲ್ಲಿ ಕಪ್ಪುಹಣದ ಪ್ರಭಾವವನ್ನು ಕೊನೆಗೊಳಿಸಲು ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಲಾಗಿತ್ತು. ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ನಾನು ಸುಪ್ರೀಂ ಕೋರ್ಟ್ ತೀರ್ಪನ್ನು ಸಂಪೂರ್ಣವಾಗಿ ಗೌರವಿಸುತ್ತೇನೆ. ಆದರೆ ಚುನಾವಣಾ ಬಾಂಡ್‌ಗಳನ್ನು ಸಂಪೂರ್ಣವಾಗಿ ರದ್ದುಪಡಿಸುವ ಬದಲು ಸುಧಾರಿಸುವ ಕೆಲಸ ಮಾಡಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಅವರು ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ನಡೆದ ಸಂವಾದದಲ್ಲಿ ಹೇಳಿದರು.

ಕಾಂಗ್ರೆಸ್ ಪಕ್ಷದ ನಾಯಕರು ರಾಜಕೀಯ ದೇಣಿಗೆಯನ್ನು ನಗದು ರೂಪದಲ್ಲಿ ತೆಗೆದುಕೊಳ್ಳುತ್ತಿದ್ದರು. ಅವರು ₹1,100 ದೇಣಿಗೆಯಲ್ಲಿ ₹100 ಅನ್ನು ಪಕ್ಷದ ಹೆಸರಿನಲ್ಲಿ ಠೇವಣಿ ಇಡುತ್ತಿದ್ದರು ಮತ್ತು ₹1,000 ಅನ್ನು ತಮ್ಮಲ್ಲಿ ಇಟ್ಟುಕೊಳ್ಳುತ್ತಿದ್ದರು. ಕಾಂಗ್ರೆಸ್ ಪಕ್ಷವು ಈ ವ್ಯವಸ್ಥೆಯನ್ನು ವರ್ಷಗಳಿಂದ ನಡೆಸುತ್ತಿದೆ ಎಂದು ಶಾ ಟೀಕಿಸಿದರು.

“ಚುನಾವಣಾ ಬಾಂಡ್‌ಗಳು ಬಿಜೆಪಿಗೆ ಲಾಭ ತಂದುಕೊಟ್ಟಿವೆ ಎಂದು ಹೇಳಲಾಗಿದೆ. ರಾಹುಲ್ ಗಾಂಧಿ ಇದು ಅತಿದೊಡ್ಡ ಸುಲಿಗೆ ಎಂದು ಹೇಳಿಕೆ ನೀಡಿದ್ದಾರೆ. ನಾನು ಈ ಬಗ್ಗೆ ನನ್ನ ನಿಲುವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಒಟ್ಟು ₹20,000 ಕೋಟಿ ಚುನಾವಣಾ ಬಾಂಡ್‌ಗಳಲ್ಲಿ ಬಿಜೆಪಿಗೆ ಅಂದಾಜು ₹6,000 ಕೋಟಿ ಸಿಕ್ಕಿದೆ. ಉಳಿದ ಬಾಂಡ್‌ಗಳು ಎಲ್ಲಿ ಹೋದವು? ಟಿಎಂಸಿ ₹1,600 ಕೋಟಿ, ಕಾಂಗ್ರೆಸ್‌ಗೆ ₹1,400 ಕೋಟಿ ಸಿಕ್ಕಿದೆ. ಬಿಆರ್‌ಎಸ್‌ಗೆ ₹1,200 ಕೋಟಿ, ಬಿಜೆಡಿಗೆ ₹750 ಕೋಟಿ ಮತ್ತು ಡಿಎಂಕೆ ₹639 ಕೋಟಿ ಪಡೆದುಕೊಂಡಿವೆ. ನಾವು 303 ಸಂಸದರನ್ನು ಹೊಂದಿದ್ದರೂ ₹6,000 ಕೋಟಿ ಪಡೆದಿದ್ದೇವೆ ಮತ್ತು ಉಳಿದವರು 242 ಸಂಸದರಿಗೆ ₹14,000 ಕೋಟಿ ಪಡೆದಿದ್ದೇವೆ. ಇದರ ಹುನ್ನಾರ ಏನು? ಒಮ್ಮೆ ಖಾತೆಗಳ ವಿವರ ಇತ್ಯರ್ಥಪಡಿಸಿದರೆ ಅವರು ನಿಮ್ಮೆಲ್ಲರ ಪ್ರಶ್ನೆಗಳನ್ನು ಎದುರಿಸಲು ಸಾಧ್ಯವಿಲ್ಲ” ಎಂದು ಅಮಿತ್‌ ಶಾ ಉತ್ತರಿಸಿದರು.

ಒಂದು ರಾಷ್ಟ್ರ, ಒಂದು ಚುನಾವಣಾ ಪ್ರಸ್ತಾಪವನ್ನು ಉಲ್ಲೇಖಿಸಿದ ಶಾ, ದೇಶಾದ್ಯಂತ ಅನೇಕ ಬಾರಿ ಚುನಾವಣೆಗಳು ನಡೆಯುವುದರಿಂದ, ಚುನಾವಣೆ ನಡೆಸಲು ಹೆಚ್ಚಿನ ಪ್ರಮಾಣದ ಹಣವನ್ನು ಖರ್ಚು ಮಾಡಲಾಗುತ್ತದೆ ಎಂದು ಹೇಳಿದರು. “ಒಂದು ರಾಷ್ಟ್ರ, ಒಂದು ಚುನಾವಣೆ ಎಂಬುದು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆಯಾಗಿದೆ. ಕಾರ್ಯಗತಗೊಂಡಾ ಅದು ತ್ವರಿತ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ. ಮರುಕಳಿಸುವ ವೆಚ್ಚಗಳನ್ನು ಕೊನೆಗೊಳಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ನಿರಂತರ ಮಾದರಿ ನೀತಿ ಸಂಹಿತೆ ಜಾರಿಯಿಂದ ಸರ್ಕಾರದ ಉಪಕ್ರಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುವುದು ತಪ್ಪುತ್ತದೆ” ಎಂದರು.

ಬಿಹಾರದಲ್ಲಿ ಸೀಟು ಹಂಚಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಮುಂದಿನ ವಾರದಲ್ಲಿ ಎಲ್ಲವೂ ಇತ್ಯರ್ಥವಾಗಲಿದೆ. ಬಿಹಾರದಲ್ಲಿ ಎನ್‌ಡಿಎಯಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದು, ಈ ಬಾರಿ ಭಾರತೀಯ ಜನತಾ ಪಕ್ಷದ ನಾಯಕತ್ವದಲ್ಲಿ ಬಿಹಾರದಲ್ಲಿ ಎನ್‌ಡಿಎ ಎಲ್ಲಾ ಸ್ಥಾನಗಳನ್ನು ಗೆಲ್ಲಲಿದೆ ಎಂದರು.

ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಕೈಜೋಡಿಸಿ ಚುನಾವಣೆ ಎದುರಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಳೆದ ಎರಡು ಲೋಕಸಭೆ ಚುನಾವಣೆಯಲ್ಲಿ ದೆಹಲಿಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಶೇ. 50ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದೆ ಮತ್ತು ತನ್ನ ಮತಗಳ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಹೇಳಿದರು.

ಬಿಜೆಪಿ ಸಂಸತ್ತಿನಲ್ಲಿ 370ಕ್ಕೂ ಹೆಚ್ಚು ಸ್ಥಾನಗಳನ್ನು ಮತ್ತು ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂಬ ಪ್ರಧಾನಿ ಮೋದಿಯವರ ಹೇಳಿಕೆಯನ್ನು ಶಾ ಪುನರುಚ್ಚರಿಸಿದರು. ನಾವು 10 ವರ್ಷಗಳ ದಾಖಲೆ ಹೊಂದಿದ್ದೇವೆ. ಮುಂದಿನ 25 ವರ್ಷಗಳ ಕಾರ್ಯಸೂಚಿಯನ್ನು ಹೊಂದಿದ್ದೇವೆ. ಇದು ಭವ್ಯ ಭಾರತವನ್ನು ರಚಿಸುವ ಕಾರ್ಯಸೂಚಿಯಾಗಿದೆ. ಆದ್ದರಿಂದ ಸಾರ್ವಜನಿಕರು ನಮ್ಮ ಮೇಲೆ ನಂಬಿಕೆ ಇಡುತ್ತಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: Electoral Bonds: ಚುನಾವಣಾ ಬಾಂಡ್‌ ಗಳಿಕೆಯಲ್ಲಿ ಕಾಂಗ್ರೆಸ್ ಅನ್ನೂ ಹಿಂದಿಕ್ಕಿದ ಟಿಎಂಸಿ! ಬಿಜೆಪಿ ಪಡೆದದ್ದೆಷ್ಟು?

Exit mobile version