Site icon Vistara News

G20 Summit 2023: ಜಿ20 ಶೃಂಗಸಭೆಗೆ ಬರುವವರಿಗೆ ದಿಲ್ಲಿಯ ಹೊಟೇಲುಗಳಲ್ಲಿ ಸ್ಪೆಶಲ್‌ ಹಬ್ಬದಡುಗೆ!

g20 special foods

ಬಾರೀ ನಿರೀಕ್ಷೆಯ, ನವದೆಹಲಿಯಲ್ಲಿ ನಡೆಯುತ್ತಿರುವ ಜಿ 20 ಶೃಂಗಸಬೆಯ (G20 Summit 2023) ಪ್ರಯುಕ್ತ ಮಹಾನಗರವು ಎಲ್ಲ ಆಯಾಮಗಳಲ್ಲೂ ಸಜ್ಜುಗೊಳ್ಳುತ್ತಿದೆ. ಇದೇ ಸೆಪ್ಟೆಂಬರ್‌ 9-10ರಂದು ನಡೆಯುತ್ತಿರುವ ಈ ಶೃಂಗಸಭೆಯ ಪ್ರಯುಕ್ತ ನವದೆಹಲಿಯ ಪ್ರಮುಖ ಐಷಾರಾಮಿ ಹೊಟೇಲುಗಳಲ್ಲಿ ಮೊದಲೇ ಬುಕ್ಕಿಂಗ್‌ ಕೂಡಾ ಆಗಿದೆ. ಈ ಹೊಟೇಲುಗಳು ಈಗಾಗಲೇ ಬಗೆಬಗೆಯ ಖಾದ್ಯಗಳ ಪಟ್ಟಿಯನ್ನು ತಯಾರಿಸಿವೆ. ಭಾರತದ ಸಮಗ್ರ ಆಹಾರ ಶೈಲಿಯ ವಿಶೇಷ ಪರಿಚಯವನ್ನು ಸಂಕ್ಷಿಪ್ತವಾಗಿ ನೀಡಲು ಈ ಹೊಟೇಲುಗಳು ಎಲ್ಲ ರೀತಿಯಲ್ಲೂ ತಯಾರಿ ನಡೆಸಿದ್ದು, ವಿದೇಶದಿಂದ ಬರುವ ಮಂದಿಗೆ ನಮ್ಮ ದೇಶದ ವಿಶಿಷ್ಟ ಆಹಾರ ಸಂಸ್ಕೃತಿಯನ್ನು ಪರಿಚಯಿಸಿ, ಆ ಮೂಲಕ ಭಾರತದ ಆಹಾರ ಪ್ರವಾಸೋದ್ಯಮ ವಿಸ್ತರಣೆಗೂ ಅಡಿಪಾಯ ಹಾಕಿದೆ.

ಯುಎಸ್‌ ಅಧ್ಯಕ್ಷ ಜೋ ಬೈಡನ್‌ ಅವರಿಂದ ಮೊದಲ್ಗೊಂಡು ಯುಕೆ ಪ್ರಧಾನಿ ರಿಶಿ ಸುನಕ್‌ವರೆಗೆ ವಿದೇಶದಿಂದ ಬಂದಿಳಿದಿರುವ, ಬರಲಿರುವ ನಾಯಕರಿಗೆ ದೆಹಲಿಯ ಪ್ರಮುಖ ಸ್ಟಾರ್‌ ಹೊಟೇಲುಗಳಲ್ಲಿ ತಯಾರಾಗುತ್ತಿರುವ ಬಗೆಬಗೆಯ ಭಾರತೀಯ ತಿನಿಸುಗಳ ಪಟ್ಟಿ ನೋಡಿದರೆ, ಭಾರತದ ಸಂಕ್ಷಿಪ್ತ ಪರಿಚಯವನ್ನು ಆಹಾರದ ಮೂಲಕವೂ ಮಾಡಿಕೊಡುವ ಅದ್ಭುತ ತಯಾರಿ ಎಲ್ಲೆಡೆ ಕಾಣುತ್ತಿದೆ. ಕಾಶ್ಮೀರ ಹಾಗೂ ಹಿಮಾಚಲದಿಂದ ಹಿಡಿದು, ತಮಿಳುನಾಡು, ಕೇರಳದವರೆಗಿನ ಸಂಪ್ರಾದಾಯಿಕ ತಿನಿಸುಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಬಹುತೇಕ ಎಲ್ಲ ಹೊಟೇಲುಗಳು ಇದೀಗ ತಮ್ಮ ಮೆನು ತಯಾರು ಮಾಡಿಕೊಂಡು ವಿಶೇಷ ಪರಿಣತರ ಮೂಲಕ ಆಹಾರ ತಯಾರಿಯ ಮೇಲೆ ವಿಶೇಷ ಗಮನ ಹರಿಸುತ್ತಿವೆ.

ಭಾರತದ ಆಹಾರದ ವಿಶೇಷ ರುಚಿಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ಅದ್ಭುತ ಅವಕಾಶ ಇದಾಗಿದ್ದು, ಈ ಅವಕಾಶವನ್ನು ಭಾಗ್ಯದ ಬಾಗಿಲಾಗಿ ತೆರೆಸುವ ಎಲ್ಲ ಅಡಿಪಾಯವನ್ನೂ ನವದೆಹಲಿಯ ಹೊಟೇಲುಗಳು ಹಾಕಿ ಸಜ್ಜುಗೊಂಡಿವೆ. ದೆಹಲಿ ಹಾಗೂ ಎನ್‌ಸಿಆರ್‌ನ ಎಲ್ಲ ಐದು ಹಾಗೂ ಏಳು ಸ್ಟಾರ್‌ ಹೊಟೇಲುಗಳು ತಮ್ಮ ಮೆನುವಿನಲ್ಲಿ ಮಾಡಿಕೊಂಡಿರುವ ಹಬ್ಬದಡುಗೆಯ ಪರಿಚಯ ಮಾಡಿಕೊಳ್ಳೋಣ ಬನ್ನಿ.

ಸಿರಿಧಾನ್ಯಗಳ ತಿನಿಸುಗಳು: ಈ ಬಾರಿ ಸಿರಿಧಾನ್ಯಗಳು ಈ ಪಟ್ಟಿಯಲ್ಲಿ ಮುಖ್ಯ ಸ್ಥಾನ ಪಡೆದುಕೊಂಡಿರುವುದು ವಿಶೇಷ. ಈ ವರ್ಷ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೂ ಆಗಿರುವುದರಿಂದ, ಬಹಳಷ್ಟು ಸಿರಿಧಾನ್ಯಗಳ ತಿಂಡಿಗಳು ಹೊಟೇಲುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಕೃಷಿಯೇ ಬೆನ್ನೆಲುಬಾಗಿರುವ ಗ್ರಾಮೀಣ ಭಾರತದ ಪ್ರಾಚೀನ ಆಹಾರಗಳ ಪೈಕಿ ಬಹುಮುಖ್ಯವಾದ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸಿರಿಧಾನ್ಯಗಳು ಭಾರತದ ಆಹಾರ ಪರಂಪರೆಯನ್ನೂ ವಿದೇಶೀಯರಿಗೆ ಈ ಮೂಲಕ ಪರಿಚಯ ಮಾಡಿಕೊಡಲಿವೆ.

ತುಪ್ಕಾ: ಹಿಮಾಲಯ ಪ್ರಾಂತ್ಯದ ಬಹುಮುಖ್ಯ ಆಹಾರಗಳಲ್ಲಿ ಒಂದಾದ ನೂಡಲ್‌ ಸೂಪ್‌ ತುಪ್ಕಾ ಕೂಡಾ ಈ ಬಾರಿಯ ಮುಖ್ಯ ಆಹಾರಗಳಲ್ಲಿ ಇರಲಿದೆ. ಬಹು ಸುಲಭವಾಗಿ ಜೀರ್ಣವಾಗುವ, ಟಿಬೆಟ್‌, ಭೂತಾನ್‌, ನೇಪಾಳ ಹಾಗೂ ಭಾರತದ ಹಿಮಾಲಯನ್‌ ಪ್ರಾಂತ್ಯದ ಪ್ರದೇಶಗಳ ಆಹಾರವೂ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಕುಖುರಾ ಕೋ ಮಸು: ನೇಪಾಳಿ ಶೈಲಿಯ ಕುಖುರಾ ಕೋ ಮಸು ಎಂಬ ವಿಶೇಷ ಚಿಕನ್‌ ಕರಿ ಕೂಡಾ ಈ ಹೊಟೇಲುಗಳ ಮೆನುವಿನಲ್ಲಿ ಸ್ಥಾನ ಪಡೆದಿದೆ.

ಭಾರತೀಯ ಥಾಲಿ: ಭಾರತೀಯ ಸಾಂಪ್ರದಾಯಿಕ ಅಡುಗೆಯನ್ನು ಒಳಗೊಂಡಿರುವ ಭಾರತೀಯ ಥಾಲಿ ಕೂಡಾ ಬಹುತೇಕರು ತಮ್ಮ ಪಟ್ಟಿಯಲ್ಲಿ ವಿಶೇಷವಾಗಿ ಸೇರಿಸಿಕೊಂಡಿದ್ದಾರೆ.

ಸಿರಿಧಾನ್ಯಗಳ ಖೀರು: ಖೀರು ಅಥವಾ ಪಾಯಸದ ಪಟ್ಟಿಯಲ್ಲಿ ಸಿರಿಧಾನ್ಯಗಳನ್ನು ಬಳಸಿ ಮಾಡುವ ಖೀರುಗಳಿಗೆ ಈ ಬಾರಿ ವಿಶೇಷ ಆಧ್ಯತೆ ನೀಡಲಾಗಿದೆ.

ಮ್ಯಾಂಗೋ ಟ್ರಫಲ್:‌ ಭಾರತದ ಹಣ್ಣುಗಳ ರಾಜನೇ ಆಗಿರುವ ಮಾವಿನ ಹಣ್ಣನ್ನೇ ಆಹಾಋದಿಂದ ಬಿಟ್ಟರೆ ಹೇಗೆ ಹೇಳಿ. ಈ ಹಿನ್ನೆಲೆಯಲ್ಲಿ ಬಾಯಲ್ಲಿಟ್ಟರೆ ಕರಗಿ ನೀರಾಗುವ ಮಾವಿನ ಹಣ್ಣಿನ ಟ್ರಫಲ್‌ ಸೇರಿದಂತೆ ಮಾವಿನ ಹಣ್ಣಿನ ಕೆಲವು ಸಿಹಿತಿನಿಸುಗಳೂ ಕೂಡಾ ಪ್ರಮುಖ ಆಕರ್ಷಣೆಗಳಲ್ಲೊಂದು.

ಚಹಾ: ಭಾರತದ ಚಹಾಕ್ಕೆ ವಿಶ್ವದಲ್ಲಿ ಒಳ್ಳೆಯ ಹೆಸರಿದೆ. ಹಲವು ರಾಜ್ಯಗಳ ಬಗೆಬಗೆಯ ಚಹಾಗಳೂ ನಮ್ಮಲ್ಲಿರುವಾಗ, ಚಹಾಕ್ಕೆ ವಿಶೇಷ ಗಮನ ನೀಡದಿದ್ದರೆ ಹೇಗೆ ಹೇಳಿ. ಹಾಗಾಗಿ ವಿಶೇಷ ರುಚಿಯ ಚಹಾ ಕೂಡಾ ವಿದೇಶೀಯರಿಗೆ ಪರಿಚಯಿಸುವ ಪ್ರಯತ್ನವನ್ನೂ ಹಲವು ಹೊಟೇಲುಗಳು ಮಾಡಲಿವೆ.

ಇಷ್ಟೇ ಅಲ್ಲ, ಎಲ್ಲ ಹೊಟೇಲುಗಳೂ ಕೂಡಾ, ಭಾರತದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಶೈಲಿಯ ಭಾರತೀಯ ಆಹಾರ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಪಡೆದ ಬಗೆಬಗೆಯ ತಿನಿಸುಗಳ ಪಟ್ಟಿಯನ್ನು ವಿಶೇಷವಾಗಿ ತಯಾರಿಸಿದ್ದು, ಆ ಮೂಲಕ ಜಿ ೨೦ಗೆ ಎಲ್ಲ ತಯಾರಿಯನ್ನೂ ಮಾಡಿಕೊಂಡಿವೆ.

ಇದನ್ನೂ ಓದಿ: G20 Summit 2023: ಜಿ20 ಶೃಂಗಸಭೆಯ ʼಭಾರತ ಮಂಟಪʼ ಎಷ್ಟು ಅದ್ಭುತವಾಗಿದೆ ನೋಡಿ! ಇದಕ್ಕಿದೆ ಕರ್ನಾಟಕದ ಲಿಂಕ್!

Exit mobile version