ನವದೆಹಲಿ: ರಾಷ್ಟ್ರ ರಾಜಧಾನಿಯ ಭಾರತ ಮಂಟಪದಲ್ಲಿ ಜಿ 20 ಶೃಂಗಸಭೆಗೆ (G20 Summit 2023) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ. ಸಭೆಗೆ ಜಾಗತಿಕ ನಾಯಕರನ್ನು ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಭೆಯನ್ನುದ್ದೇಶಿಸಿ ಮಾತನಾಡಿದರು. ಇದೇ ವೇಳೆ ಅವರ ಮುಂದಿನ ನೇಮ್ಪ್ಲೇಟ್ನಲ್ಲಿ ಇಂಡಿಯಾ ಬದಲು “ಭಾರತ” ಎಂಬುದಾಗಿಯೇ ಇದ್ದಿದ್ದು ಗಮನ ಸೆಳೆದಿದೆ.
ಇಂಡಿಯಾ ಎಂಬ ಹೆಸರನ್ನು ಭಾರತ ಎಂಬುದಾಗಿ ಬದಲಿಸುವ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿರುವ ಮಧ್ಯೆಯೇ ನೇಮ್ಪ್ಲೇಟ್ನಲ್ಲಿ ಇಂಡಿಯಾ ಬದಲು ಭಾರತ ಎಂಬುದಾಗಿಯೇ ಬರೆಸಿರುವುದು ಅಚ್ಚರಿ ಮೂಡಿಸಿದೆ. ನರೇಂದ್ರ ಮೋದಿ ಅವರು ಇತ್ತೀಚೆಗೆ ಇಂಡೋನೇಷ್ಯಾಗೆ ತೆರಳುವ ಮೊದಲು ಹೊರಡಿಸಿದ ಅಧಿಸೂಚನೆಯಲ್ಲೂ ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ಎಂದೇ ಮುದ್ರಿಸಲಾಗಿತ್ತು. ಈಗ ಜಿ 20 ಶೃಂಗಸಭೆಯಲ್ಲೂ ಭಾರತ ಎಂಬ ನೇಮ್ಪ್ಲೇಟ್ ಇಡುವ ಮೂಲಕ ಹೆಸರು ಬದಲಾವಣೆ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.
ಭಾರತ ಹೆಸರಿನ ನೇಮ್ಪ್ಲೇಟ್
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದ ಮೋದಿ
ಜಿ 20 ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, “ಭಾರತದಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಎಂಬ ಮಂತ್ರದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಇದೇ ಸೂತ್ರದಂತೆ ವಿಶ್ವವೂ ಮುನ್ನಡೆದರೆ ಮಾನವ ಏಳಿಗೆಯು ಸಾಧ್ಯವಾಗಲಿದೆ. ಹಾಗಾಗಿ, ಎಲ್ಲರೂ ಒಗ್ಗೂಡಿ ಮಾನವ ಕುಲವನ್ನು ಏಳಿಗೆಯತ್ತ, ಅಭಿವೃದ್ಧಿಯತ್ತ ಕೊಂಡೊಯ್ಯೋಣ. ಜಗತ್ತು ಒಂದಾದರೆ ಅಭಿವೃದ್ಧಿ, ಜಗತ್ತು ಒಂದಾದರೆ ಶಾಂತಿ ಸ್ಥಾಪನೆ ಸಾಧ್ಯವಾಗಲಿದೆ. ಇದೇ ಮನಸ್ಥಿತಿಯಲ್ಲಿ ನಾವು ಕೊರೊನಾದಂತಹ ಸಾಂಕ್ರಾಮಿಕ ಕಾಯಿಲೆಯನ್ನು ತೊಲಗಿಸಿದ್ದೇವೆ” ಎಂದು ಹೇಳಿದರು.
ಇದನ್ನೂ ಓದಿ: G20 Summit 2023: ಜಿ20 ಶೃಂಗಸಭೆ ಆರಂಭ; ಮಾನವ ಕೇಂದ್ರಿತ ಸಭೆ, ವಿಶ್ವದ ಒಗ್ಗಟ್ಟಿಗೆ ಮೋದಿ ಕರೆ
“ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಜತೆಗೆ ಸಬ್ ಕಾ ವಿಶ್ವಾಸ್ ಕೂಡ ಎಲ್ಲರ ಆದ್ಯತೆಯಾಗಿದೆ. ಜಾಗತಿಕ ಆರ್ಥಿಕತೆ, ಹವಾಮಾನ ಬದಲಾವಣೆ, ಶಾಂತಿ ಸ್ಥಾಪನೆ, ಸರ್ವ ಕ್ಷೇತ್ರಗಳ ಏಳಿಗೆಗೆ ಶ್ರಮಿಸೋಣ. ಹಾಗೆಯೇ, ಉಗ್ರವಾದದ ವಿರುದ್ಧ ಎಲ್ಲರೂ ಹೋರಾಟ ನಡೆಸುವ ಮೂಲಕ ಮಾನವ ಕುಲವನ್ನು ಶಾಂತಿಯತ್ತ ಕೊಂಡೊಯ್ಯೋಣ. ಭಾರತದಲ್ಲಿ ಜಿ 20 ಶೃಂಗಸಭೆಯು ಜನರ ಸಭೆಯಾಗಿ ಪರಿವರ್ತನೆಯಾಗಿದೆ” ಎಂದರು.
“ಜಿ 20 ಶೃಂಗಸಭೆಗೆ ಭಾರತದ 140 ಕೋಟಿ ಜನರು ಕೂಡ ಯೋಗದಾನ ನೀಡಿದ್ದಾರೆ. ಭಾರತದ ಪ್ರಮುಖ ನಗರಗಳಲ್ಲಿ ಸಭೆ ನಡೆದಿರುವುದು ಜನರ ಸಹಭಾಗಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ” ಎಂದು ಹೇಳಿದರು. ಇದಾದ ಬಳಿಕ ಜಿ 20 ನಾಯಕರು ಫೋಟೊ ಸೆಷನ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲ ನಾಯಕರು ಒಗ್ಗೂಡಿ ಫೋಟೊ ತೆಗೆಸಿಕೊಳ್ಳುವ ಮೂಲಕ ಒಗ್ಗಟ್ಟಿನ ಸಂದೇಶ ರವಾನಿಸಲಿದ್ದಾರೆ.