Site icon Vistara News

Justin Trudeau: ಜಿ20 ಮುಗಿಸಿ ಹೊರಡಬೇಕಿದ್ದ ವಿಮಾನದಲ್ಲಿ ದೋಷ; ದೆಹಲಿಯಲ್ಲೇ ಉಳಿದ ಕೆನಡಾ ಪ್ರಧಾನಿ

justin trudeau and narendra modi

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಎರಡು ದಿನ ನಡೆದ ಜಿ20 ಶೃಂಗಸಭೆ (G20 Summit 2023) ಮುಗಿಸಿ ತಮ್ಮ ದೇಶಕ್ಕೆ ತೆರಳಬೇಕಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ಅವರು ಮತ್ತೊಂದು ರಾತ್ರಿಯನ್ನು ದೆಹಲಿಯಲ್ಲಿಯೇ ಕಳೆದಿದ್ದಾರೆ. ಜಸ್ಟಿನ್‌ ಟ್ರುಡೋ ಸಂಚರಿಸಬೇಕಾದ ವಿಮಾನದಲ್ಲಿ ಕೊನೆಯ ಘಳಿಗೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಜಸ್ಟಿನ್‌ ಟ್ರುಡೋ ಅವರು ಭಾನುವಾರ ರಾತ್ರಿ ಕೆನಡಾಗೆ ತೆರಳಲು ಸಾಧ್ಯವಾಗದೆ ಭಾರತದಲ್ಲಿಯೇ ಉಳಿದಿದ್ದಾರೆ.

ಜಸ್ಟಿನ್‌ ಟ್ರುಡೋ ಅವರು ಜಿ20 ಶೃಂಗಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆ ನಡೆಸಿದರು. ಇದಾದ ಬಳಿಕ ಅವರು ಭಾನುವಾರ ರಾತ್ರಿ ತಮ್ಮ ದೇಶಕ್ಕೆ ತೆರಳಬೇಕಿತ್ತು. ವಿಮಾನವೂ ಸಿದ್ಧವಾಗಿತ್ತು. ಇನ್ನೇನು ಜಸ್ಟಿನ್‌ ಟ್ರುಡೋ ಅವರು ಪ್ರಯಾಣ ಆರಂಭಿಸಬೇಕು ಎನ್ನುವಷ್ಟರಲ್ಲಿಯೇ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹಾಗೆಯೇ, ರಾತ್ರೋರಾತ್ರಿ ತಾಂತ್ರಿಕ ದೋಷ ಸರಿಪಡಿಸಲು ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ ಕಾರಣ ಜಸ್ಟಿನ್‌ ಟ್ರುಡೋ ಹಾಗೂ ಅವರ ನಿಯೋಗವು ದೆಹಲಿಯಲ್ಲಿಯೇ ಉಳಿದಿದೆ.

ಜಸ್ಟಿನ್‌ ಟ್ರುಡೋ ಪ್ರಯಾಣಿಸಬೇಕಿದ್ದ ವಾಹನ.

ಜಸ್ಟಿನ್‌ ಟ್ರುಡೋ ಹಾಗೂ ಅವರ ನಿಯೋಗವು ದೆಹಲಿಯಲ್ಲಿಯೇ ಮತ್ತೊಂದು ರಾತ್ರಿ ಕಳೆಯಲು ಕೇಂದ್ರ ಸರ್ಕಾರ ಸಕಲ ರೀತಿಯ ವ್ಯವಸ್ಥೆ ಮಾಡಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ವಿಮಾನದಲ್ಲಿ ಉಂಟಾದ ತಾಂತ್ರಿಕ ದೋಷದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: G20 Summit 2023: ಪಾಕಿಸ್ತಾನಕ್ಕೆ ಟರ್ಕಿ ಶಾಕ್! ವಿಶ್ವಸಂಸ್ಥೆ ಭದ್ರತಾ ಸಮಿತಿಯ ಭಾರತದ ಬೇಡಿಕೆಗೆ ಬೆಂಬಲ

ಖಲಿಸ್ತಾನ ವಿಚಾರ ಪ್ರಸ್ತಾಪಿಸಿದ ಮೋದಿ

ಜಸ್ಟಿನ್‌ ಟ್ರುಡೋ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೆನಡಾದಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ದಾಳಿ, ಖಲಿಸ್ತಾನಿ ಉಗ್ರರ ಕೃತ್ಯಗಳು, ಭಾರತ ವಿರೋಧ ಚಟುವಟಿಕೆಗಳನ್ನು ನಿಯಂತ್ರಿಸಬೇಕು ಎಂಬುದಾಗಿ ಕೋರಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ, ಭಾರತ-ಕೆನಡಾ ಸಂಬಂಧ ವೃದ್ಧಿ, ವ್ಯಾಪಾರ ಒಪ್ಪಂದ ಸೇರಿ ಹಲವು ವಿಷಯಗಳ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದರು ಎಂದು ತಿಳಿದುಬಂದಿದೆ. ಜಿ20 ಶೃಂಗಸಭೆ ಬಳಿಕ ಮೋದಿ ಜತೆ ಟ್ರುಡೋ ಅವರು ಊಟ ಮಾಡಿದರು. ಇದಾದ ಬಳಿಕ ಮಾತುಕತೆ ನಡೆಸಿದರು. ಮಹಾತ್ಮ ಗಾಂಧೀಜಿ ಸ್ಮಾರಕಕ್ಕೂ ಟ್ರುಡೋ ಭೇಟಿ ನೀಡಿದ್ದರು.

Exit mobile version