ಹೊಸದಿಲ್ಲಿ: ಬ್ರಿಟನ್ ಪ್ರಧಾನಿ ರಿಷಿ ಸುನಕ್ (UK PM Rishi Sunak) ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ (Akshata Murthy) ಅವರ ಜೋಡಿ ಹೊಸದಿಲ್ಲಿಗೆ ಜಿ20 ಶೃಂಗಸಭೆಗೆ (G20 Summit 2023) ಬಂದು ಇಳಿದಾಗಿನಿಂದಲೂ ಸುದ್ದಿಯಲ್ಲಿದೆ. ಇಂದು ಮುಂಜಾನೆ ಸಭೆಗೂ ಮುನ್ನವೇ ಇಬ್ಬರೂ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿ, ಪ್ರದಕ್ಷಿಣೆ ಹಾಕಿ, ಪೂಜೆ ಸಲ್ಲಿಸಿದ ಫೋಟೋಗಳು ವೈರಲ್ ಆದವು.
ಇದರ ನಡುವೆ ಈ ಜೋಡಿ ನಡೆದುಕೊಳ್ಳುತ್ತಿರುವ ರೀತಿ ಭಾರತೀಯ ದಂಪತಿಗಳಿಗೂ ಮಾದರಿಯಾಗಿದೆ ಎಂದು ಭಾರತೀಯ ನೆಟಿಜನ್ ಸೋಶಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆಯಿಂದ ಶೇರ್ ಮಾಡಿಕೊಂಡಿದ್ದಾರೆ.
ಮುಂಜಾನೆ ಅಕ್ಷರಧಾಮಕ್ಕೆ ಭೇಟಿ ನೀಡಿದ ದಂಪತಿ ಹನಿ ಮಳೆಯಲ್ಲಿಯೇ ದೇವಾಲಯಕ್ಕೆ ಪ್ರದಕ್ಷಿಣೆ ಬಂದರು. ಈ ಸಂದರ್ಭದಲ್ಲಿ ರಿಷಿ ಸುನಕ್ ಅವರು ತಮ್ಮ ಪತ್ನಿಗೆ ಕೊಡೆ ಹಿಡಿದರು. ನಂತರ ಮಂದಿರದೊಳಗೆ ಅವರು ಆರತಿ ಮಾಡಿದರು. ಅಭಿಷೇಕ ನೆರವೇರಿಸಿದರು.
“ಇಂದು ಬೆಳಿಗ್ಗೆ ದರ್ಶನ ಮತ್ತು ಪೂಜೆಗಾಗಿ ಸ್ವಾಮಿನಾರಾಯಣ ಅಕ್ಷರಧಾಮಕ್ಕೆ ಭೇಟಿ ನೀಡಿ ನನ್ನ ಹೆಂಡತಿ ಮತ್ತು ನಾನು ಸಂತೋಷಪಟ್ಟೆವು. ಈ ದೇವಾಲಯದ ಸೌಂದರ್ಯ ಮತ್ತು ಶಾಂತಿ, ಸೌಹಾರ್ದತೆ ಮತ್ತು ಉತ್ತಮ ಮಾನವನಾಗುವ ಅದರ ಸಾರ್ವತ್ರಿಕ ಸಂದೇಶದಿಂದ ನಾವು ಬೆರಗಾದೆವು. ಇದು ಕೇವಲ ಆರಾಧನೆಯ ಸ್ಥಳವಲ್ಲ. ಭಾರತದ ಮೌಲ್ಯಗಳು, ಸಂಸ್ಕೃತಿ ಮತ್ತು ಜಗತ್ತಿಗೆ ನೀಡಿದ ಕೊಡುಗೆಗಳನ್ನು ಚಿತ್ರಿಸುವ ಹೆಗ್ಗುರುತಾಗಿದೆ” ಎಂದು ಸುನಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ರಿಷಿ ಹಾಗೂ ಅಕ್ಷತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಫೋಟೋಗಳನ್ನು ಅಕ್ಷತಾ ಅವರು ತಮ್ಮ ಪತಿಯ ಟೈಯನ್ನು ಸರಿಪಡಿಸುತ್ತಿರುವುದನ್ನು ಕಾಣಬಹುದಾಗಿದೆ. ಇವರ ಈ ಫೋಟೋಗಳು ಎಲ್ಲ ನೆಟಿಜೆನ್‌ಗಳ ಮೆಚ್ಚುಗೆಯನ್ನು ಗಳಿಸಿದೆ.
ಒಬ್ಬ ʼಎಕ್ಸ್ʼ (ಟ್ವಿಟರ್) ಬಳಕೆದಾರರು ಶಾರುಖ್ ಖಾನ್ ಅವರ ಕುಛ್ ಕುಛ್ ಹೋತಾ ಹೈ ಫಿಲಂನ ಒಂದು ಡಯಲಾಗ್ ಅನ್ನು ನೆನಪಿಸಿಕೊಂಡಿದ್ದಾರೆ. ʼʼಲಂಡನ್‌ನಲ್ಲಿ ಇದ್ದ ಮಾತ್ರಕ್ಕೆ, ಅಲ್ಲಿ ಓದಿ ಬೆಳೆದ ಮಾತ್ರಕ್ಕೆ, ನಾನು ನನ್ನ ಸಂಸ್ಕಾರ ಮರೆಯುವುದಿಲ್ಲ. ಇದು ನಿನಗೆ ನೆನಪಿರಬೇಕು..ʼʼ ಎಂಬ ಡಯಲಾಗ್ ಅದು.
ಇನ್ನೊಬ್ಬರು ʼಸನಾತನ ಧರ್ಮʼ ವಿವಾದದ ಅಂಶವನ್ನು ಇದರಲ್ಲಿ ಕಂಡಿದ್ದಾರೆ. ʼʼಭಾರತದ ಕೆಲವು ಭ್ರಷ್ಟ ರಾಜಕಾರಣಿಗಳು ಸನಾತನ ಧರ್ಮವನ್ನು ಕೊನೆಗೊಳಿಸಲು ಯತ್ನಿಸುತ್ತಿದ್ದಾರೆ. ಆದರೆ ಇಡೀ ಜಗತ್ತು ಸನಾತನ ಧರ್ಮವನ್ನು ಅಪ್ಪಿಕೊಳ್ಳುತ್ತಿದೆʼʼ ಎಂದು ಹೇಳಿದ್ದಾರೆ.
ಇನ್ನೊಂದು ವೈರಲ್ ಆಗಿರುವ ಚಿತ್ರದಲ್ಲಿ ಅಕ್ಷತಾ ಮೂರ್ತಿ ಅವರು ಗಂಡನ ಟೈಯನ್ನು ಸರಿಪಡಿಸುತ್ತಿದ್ದಾರೆ. ಇದು ಜೋಡಿ ವಿಮಾನದಿಂದ ಕೆಳಗಿಳಿಯುವ ಮೊದಲು ಸಿದ್ಧವಾಗುತ್ತಿರುವ ಕ್ಯಾಂಡಿಡ್ ಚಿತ್ರವಾಗಿದೆ. ಈ ಚಿತ್ರ ಕೂಡ ವೈರಲ್ ಆಗಿದೆ.
ಇದನ್ನೂ ಓದಿ: Rishi Sunak: ಜಿ20 ಸಭೆ ಮಧ್ಯೆಯೇ ಅಕ್ಷರಧಾಮ ದೇಗುಲಕ್ಕೆ ರಿಷಿ ಸುನಕ್, ಅಕ್ಷತಾ ಮೂರ್ತಿ ಭೇಟಿ, ಪ್ರಾರ್ಥನೆ