Site icon Vistara News

G20 Summit 2023: ಜಿ 20 ಶೃಂಗಸಭೆಯ 2 ದಿನದಲ್ಲಿ ಏನೇನಾಯ್ತು? ಪ್ರಮುಖ ತೀರ್ಮಾನಗಳು ಇಲ್ಲಿವೆ

Narendra Modi At G20 Summit

G20 Summit 2023 Concludes; Here are key decisions Of the Summit

ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯ ಭಾರತ ಮಂಟಪದಲ್ಲಿ ಎರಡು ದಿನ ನಡೆದ ಜಿ 20 ಶೃಂಗಸಭೆಯು ಮುಕ್ತಾಯಗೊಂಡಿದೆ. ಅದ್ಧೂರಿ ಕಾರ್ಯಕ್ರಮ, ಭರಪೂರ ಭೋಜನ, ಸಾಲು ಸಾಲು ಸಭೆ, ಚರ್ಚೆ, ನಿರ್ಣಯಗಳು, ದ್ವಿಪಕ್ಷೀಯ ಸಭೆಗಳು ಸಭೆಗೆ ಮೆರುಗು ತಂದವು. ವಸುದೈವ ಕುಟುಂಬಕಂ ಘೋಷಣೆ ಆಧಾರದ ಮೇಲೆ ಸಭೆಯನ್ನು ಭಾರತ ಆಯೋಜಿಸಿತು. ಹಾಗಾದರೆ, ಎರಡು ದಿನಗಳ (G20 Summit 2023) ಸಭೆ ಹೇಗಿತ್ತು? ಯಾವ ಪ್ರಮುಖ ನಿರ್ಣಯ, ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಭಾರತದ ನಿರ್ಣಯಕ್ಕೆ ಸಭೆಯ ಸಮ್ಮತಿ

ಜಿ 20 ಶೃಂಗಸಭೆಯ ಮೊದಲ ದಿನವಾದ ಶನಿವಾರ (ಸೆಪ್ಟೆಂಬರ್‌ 9) ಪ್ರಧಾನಿ ನರೇಂದ್ರ ಮೋದಿ ಅವರು 70ಕ್ಕೂ ಅಧಿಕ ವಿಷಯಗಳಿರುವ ನಿರ್ಣಯಕ್ಕೆ ಸಭೆಯು ಒಕ್ಕೊರಲಿನಿಂದ ಸಮ್ಮತಿ ಸೂಚಿಸಿತು. ಇಂಡಿಯಾ-ಮಿಡಲ್‌ ಈಸ್ಟ್-ಯುರೋಪ್‌ ಎಕನಾಮಿಕ್‌ ಕಾರಿಡಾರ್‌, ಜಿ 20 ಸ್ಯಾಟಲೈಟ್‌ ಮಿಷನ್‌, ಉಕ್ರೇನ್‌ ಬಿಕ್ಕಟ್ಟು ಶಮನ, ಪರಿಸರ, ಜಲ ಸಂರಕ್ಷಣೆ, ಶಾಂತಿಸ್ಥಾಪನೆ ಸೇರಿ ಪ್ರಮುಖ ವಿಷಯಗಳುಳ್ಳ ನಿರ್ಣಯಕ್ಕೆ ಅಂಗೀಕಾರ ದೊರೆಯಿತು.

ಜಿ 20 ಗುಂಪಿಗೆ ಆಫ್ರಿಕಾ ಒಕ್ಕೂಟ ಸೇರ್ಪಡೆ

ಜಗತ್ತಿನ ಜಿಡಿಪಿಗೆ ಶೇ.80ರಷ್ಟು ಕೊಡುಗೆ ನೀಡುವ ಜಿ 20 ರಾಷ್ಟ್ರಗಳ ಗುಂಪಿಗೆ ಆಫ್ರಿಕಾ ಒಕ್ಕೂಟವನ್ನು ಸೇರಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಸ್ತಾಪವನ್ನು ಜಿ 20 ಸಭೆಯು ಒಪ್ಪಿತು. ಇದರೊಂದಿಗೆ ಆಫ್ರಿಕಾ ಒಕ್ಕೂಟವು ಜಿ 20 ಗುಂಪಿಗೆ ಸೇರಿಸಿತು. ಇದರ ದಿಸೆಯಲ್ಲಿ ಮಹತ್ವದ ಪ್ರಯತ್ನ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಫ್ರಿಕಾ ಒಕ್ಕೂಟ ಧನ್ಯವಾದ ತಿಳಿಸಿತು.

ಗ್ರೀನ್‌ ಕ್ಲೈಮೇಟ್‌ ನಿಧಿಗೆ ಬ್ರಿಟನ್‌ 2 ಶತಕೋಟಿ ಡಾಲರ್‌

ಹವಾಮಾನ ಬದಲಾವಣೆ ಕುರಿತು ಜಿ 20 ಶೃಂಗಸಭೆಯಲ್ಲಿ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು. ಪರಿಸರದ ಉಳಿವಿಗಾಗಿ ಜಿ 20 ಸ್ಯಾಟಲೈಟ್‌ ಮಿಷನ್‌ ಕೈಗೊಳ್ಳೋಣ ಎಂಬ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಕ್ಕೆ ಸಭೆಯ ಎಲ್ಲ ನಾಯಕರು ಅನುಮೋದನೆ ಸೂಚಿಸಿದರು. ಹಾಗೆಯೇ, ಗ್ರೀನ್‌ ಕ್ಲೈಮೇಟ್‌ ಫಂಡ್‌ಗೆ 2 ಶತಕೋಟಿ ಡಾಲರ್‌ ನೀಡುವುದಾಗಿ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಘೋಷಣೆ ಮಾಡಿದರು. ಹಾಗೆಯೇ, ಜೈವಿಕ ಇಂಧನ ಅಲಯನ್ಸ್‌ ಕೂಡ ಸಭೆಯ ಪ್ರಮುಖ ತೀರ್ಮಾನ ಎನಿಸಿತು.

ಜಿ 20 ನಾಯಕರಿಗೆ ಭಾರತ ದರ್ಶನ

ಕೇಂದ್ರ ಸರ್ಕಾರವು ಯಶಸ್ವಿಯಾಗಿ ಕಾರ್ಯಕ್ರಮವನ್ನು ಆಯೋಜಿಸುವ ಜತೆಗೆ ಜಿ 20 ನಾಯಕರಿಗೆ ಭಾರತ ದರ್ಶನವನ್ನು ಮಾಡಿಸಿತು. ಭಾರತ ಮಂಟಪದಲ್ಲಿ ಒಡಿಶಾದ ಕೊನಾರ್ಕ್‌ ಚಕ್ರದ ಪ್ರತಿಕೃತಿ ಅಳವಡಿಕೆಯಿಂದ ಹಿಡಿದು ಭೋಜನಕೂಟದಲ್ಲಿ ಸಿರಿಧಾನ್ಯಗಳ ತಿನಿಸುಗಳವರೆಗೆ ಕೇಂದ್ರ ಸರ್ಕಾರ ದೇಶೀಯತೆಗೆ ಆದ್ಯತೆ ನೀಡಿತು. ಜಿ 20 ನಾಯಕರ ಪತ್ನಿಯರಿಗೆ ಭಾರತದ ಕೃಷಿ, ಆಹಾರ ಪದ್ಧತಿ ಪರಿಚಯ, ಜಿ 20 ನಾಯಕರಿಗೆ ದೇಶದ ಸಂಗೀತ, ಆಹಾರ, ಕಲೆ, ವಾಸ್ತುಶಿಲ್ಪದ ಪರಿಚಯ ಮಾಡಿಕೊಡುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಯಿತು.

ಇದನ್ನೂ ಓದಿ:

2024ರ ಜಿ20 ಸಭೆ ಎಲ್ಲಿ?

2024ರ ಜಿ20 ಶೃಂಗಸಭೆಯು ಬ್ರೆಜಿಲ್‌ನಲ್ಲಿ ನಡೆಯಲಿದೆ. 2024ರ ಜುಲೈ 12ರಿಂದ 14ರವರೆಗೆ ಬ್ರೆಜಿಲ್‌ನಲ್ಲಿ ಶೃಂಗಸಭೆ ನಡೆಯಲಿದೆ. ರಿಯೋ ಡಿ ಜನೈರೋದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಲು ಬ್ರೆಜಿಲ್‌ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

Exit mobile version