Site icon Vistara News

G20 Summit 2023: ಅದ್ಧೂರಿ ಜಿ 20 ಶೃಂಗಸಭೆ ಮುಕ್ತಾಯ; ವಿಶ್ವ ನಾಯಕರಿಗೆ ಮೋದಿ ಧನ್ಯವಾದ, ಭಾರತಕ್ಕೆ ಜಗತ್ತು ಮೆಚ್ಚುಗೆ

Narendra Modi Concludes G20 Summit 2023

G20 Summit‌ 2023 Concludes: PM Narendra Modi closing remarks at Bharat Mandapam

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎರಡು ದಿನ ಅದ್ಧೂರಿಯಾಗಿ ನಡೆದ ಜಿ 20 ಶೃಂಗಸಭೆಯು (G20 Summit 2023) ಭಾನುವಾರ (ಸೆಪ್ಟೆಂಬರ್‌ 10) ಮುಕ್ತಾಯಗೊಂಡಿದೆ. ಬ್ರೆಜಿಲ್‌ಗೆ ಜಿ 20 ಅಧ್ಯಕ್ಷತೆಯನ್ನು ಹಸ್ತಾಂತರಿಸಿದ ಪ್ರಧಾನಿ ನರೇಂದ್ರ ಮೋದಿ ಸಮಾರೋಪ ಭಾಷಣ ಮಾಡಿದರು. “ಭಾರತವು ನವೆಂಬರ್‌ವರೆಗೆ ಜಿ 20 ಶೃಂಗಸಭೆಯ ಅಧ್ಯಕ್ಷತೆಯನ್ನು ಹೊಂದಿರುತ್ತದೆ. ನವೆಂಬರ್‌ ಕೊನೆಯಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ಆಯೋಜಿಸಲಾಗುತ್ತದೆ. ಭಾರತದಲ್ಲಿ ಜಿ 20 ಆಯೋಜಿಸಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿದರು.

“ಭಾರತವು ಒಂದು ಭೂಮಿ, ಒಂದು ಕುಟುಂಬ ಹಾಗೂ ಒಂದು ಭವಿಷ್ಯದಲ್ಲಿ ನಂಬಿಕೆ ಇಟ್ಟುಕೊಂಡು ಜಿ 20 ಶೃಂಗಸಭೆಯನ್ನು ಆಯೋಜಿಸಿದೆ. ಭಾರತದ 140 ಕೋಟಿ ಜನ ಸಭೆ ಆಯೋಜನೆಗೆ ಯೋಗದಾನ ನೀಡಿದ್ದಾರೆ. ಹಾಗೆಯೇ, ಜಿ 20 ರಾಷ್ಟ್ರಗಳೂ ಸಭೆಯ ಯಶಸ್ಸಿಗೆ ಕೊಡುಗೆ ನೀಡಿದ್ದಾರೆ. ಇದರೊಂದಿಗೆ ಜಿ 20 ಶೃಂಗಸಭೆ ಅಂತ್ಯವಾಗಿದೆ ಎಂದು ಘೋಷಿಸುತ್ತೇನೆ. ಮುಂದಿನ ಸಭೆ ಆಯೋಜಿಸುತ್ತಿರುವ ಬ್ರೆಜಿಲ್‌ಗೆ ಶುಭವಾಗಲಿ” ಎಂದು ಹೇಳುವ ಮೂಲಕ ನರೇಂದ್ರ ಮೋದಿ ಅವರು ಸಭೆಯನ್ನು ಅಂತ್ಯಗೊಳಿಸಿದರು.

ಮೋದಿ ಸಮಾರೋಪ ಭಾಷಣ

ಬ್ರೆಜಿಲ್‌ಗೆ ಅಧ್ಯಕ್ಷತೆ ಹಸ್ತಾಂತರಿಸಿದ ಮೋದಿ

ಜಿ 20 ಶೃಂಗಸಭೆ ಮುಗಿಸುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಬ್ರೆಜಿಲ್‌ಗೆ ಜಿ 20 ಅಧ್ಯಕ್ಷತೆಯನ್ನು ಹಸ್ತಾಂತರಿಸಿದರು. ಅಧ್ಯಕ್ಷತೆ ಸ್ವೀಕರಿಸಿದ ಬಳಿಕ ಮಾತನಾಡಿದ ಬ್ರೆಜಿಲ್‌ ಅಧ್ಯಕ್ಷ ಲುಯಿಜ್‌ ಇನಾಸಿಯೋ ಲುಲಾ ಡ ಸಿಲ್ವಾ ಅವರು ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಶಸ್ವಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿ, ಎಲ್ಲರೂ ಒಪ್ಪುವ ನಿರ್ಣಯ ಮಂಡಿಸಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: G20 Summit 2023: ರಾಷ್ಟ್ರಪತಿ ನೀಡಿದ್ದ ಔತಣಕೂಟದ ಮೆನು ಫುಲ್ ವೈರಲ್!

ಭಾರತವು ಯಶಸ್ವಿಯಾಗಿ ಜಿ 20 ಶೃಂಗಸಭೆಯನ್ನು ಆಯೋಜಿಸಿದ್ದಕ್ಕೆ ಜಗತ್ತಿನ ಹಲವು ನಾಯಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ವರ್ಷ ಬ್ರೆಜಿಲ್‌ನಲ್ಲಿ ಶೃಂಗಸಭೆ ನಡೆಯಲಿದೆ. ಆದರೂ ಭಾರತವು ನವೆಂಬರ್‌ವರೆಗೆ ಜಿ 20ಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ. ಎರಡು ದಿನಗಳ ಸಭೆಯಲ್ಲಿ ಹವಾಮಾನ ಬದಲಾವಣೆ, ಆರ್ಥಿಕ ಏಳಿಗೆ, ಪರಿಸರ ರಕ್ಷಣೆ, ಭಯೋತ್ಪಾದನೆ ವಿರುದ್ಧ ಹೋರಾಟ, ಜಿ 20 ಶೃಂಗಸಭೆಯ ನಿರ್ಣಯದ ಅಂಗೀಕಾರ ಸೇರಿ ಹಲವು ವಿಷಯಗಳ ಕುರಿತು ಚರ್ಚೆ, ಸಂವಾದ, ಒಪ್ಪಂದಗಳು ನಡೆದವು.

Exit mobile version