Site icon Vistara News

G20 Summit 2023: ಜಿ20 ಶೃಂಗಸಭೆ; ನಾಯಕರ ನಿರ್ಣಯ ಅಂಗೀಕರಿಸಿದ ಮೋದಿ, ಮಹತ್ವದ ಘಟ್ಟದತ್ತ ಸಭೆ

PM PVTG Development Mission Will be launched on 15th november

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಭಾರತ ಮಂಟಪದಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯು ಮಹತ್ವದ ಘಟ್ಟ ತಲುಪಿದೆ. ಮಧ್ಯಾಹ್ನ ಊಟದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ, ಜಿ 20 ಶೃಂಗಸಭೆಯ ನಾಯಕರ ನಿರ್ಣಯವನ್ನು ಅಂಗೀಕರಿಸಿದರು. “ಜಿ 20 ಸಭೆಯ ಎಲ್ಲ ನಾಯಕರು ಸಮ್ಮತಿಯಿಂದ ನಿರ್ಣಯ ತೆಗೆದುಕೊಳ್ಳಲಾಗಿದೆ” ಎಂದು ಘೋಷಿಸಿದರು.

“ನಮ್ಮ ಅಧಿಕಾರಿಗಳ ಪರಿಶ್ರಮ ಹಾಗೂ ಜಿ 20 ನಾಯಕರ ಸಹಕಾರದಿಂದಾಗಿ ಜಿ 20 ನಾಯಕರ ನಿರ್ಣಯವನ್ನು ಅಂಗೀಕರಿಸಲಾಗುತ್ತಿದೆ. ನಿರ್ಣಯ ಅಳವಡಿಸಿಕೊಂಡ ಕುರಿತು ನಾನು ಘೋಷಿಸಲು ಖುಷಿಯಾಗುತ್ತಿದೆ. ಇದಕ್ಕಾಗಿ ಎಲ್ಲರಿಗೂ ಅಭಿನಂದನೆಗಳು” ಎಂದು ಮೋದಿ ಹೇಳಿದರು. ಜಿ 20 ಶೃಂಗಸಭೆಯ ಎರಡನೇ ಅಧಿವೇಶನವು ‘ಒಂದು ಕುಟುಂಬ’ (One Family) ವಿಷಯದ ಆಧಾರದ ಮೇಲೆ ನಡೆಯುತ್ತಿದೆ.

ನಿರ್ಣಯದ ಅಳವಡಿಕೆ ಕುರಿತು ಮೋದಿ ಘೋಷಣೆ

ಉಕ್ರೇನ್‌ ಬಿಕ್ಕಟ್ಟಿನ ವಿಷಯದ ಕುರಿತು ಪ್ರಸ್ತಾಪ

ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಆಕ್ರಮಣಕ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಜಿ 20 ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಉಕ್ರೇನ್‌ನಲ್ಲಿ ಶಾಂತಿಸ್ಥಾಪನೆ ಕುರಿತು ಗ್ರೂಪ್‌ನ ಎಲ್ಲ ರಾಷ್ಟ್ರಗಳು ಒಂದೇ ಅಭಿಪ್ರಾಯ ಮಂಡಿಸಿವೆ ಎಂದು ತಿಳಿದುಬಂದಿದೆ. ನಿರ್ಣಯದ ಕುರಿತು ಕೆಲವೇ ಕ್ಷಣಗಳಲ್ಲಿ ಪ್ರಕಟಣೆ ಹೊರಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಮೋದಿ-ರಿಷಿ ದ್ವಿಪಕ್ಷೀಯ ಸಭೆ

ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್‌ ಸೇರಿ ಹಲವು ರಾಷ್ಟ್ರಗಳ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಬ್ರಿಟನ್‌ ಪ್ರಧಾನಿ ರಿಷಿ ಸುನಕ್, ಜಪಾನ್‌ ಪ್ರಧಾನಿ ಫುಮಿಯೋ ಕಿಶಿದಾ ಸೇರಿ ಐದು ರಾಷ್ಟ್ರಗಳ ನಾಯಕರ ಜತೆ ಮೋದಿ ಮಹತ್ವದ ವಿಷಯಗಳನ್ನು ಚರ್ಚಿಸಿದ್ದಾರೆ. ಉಭಯ ದೇಶಗಳ ಸಂಬಂಧ ವೃದ್ಧಿ, ವ್ಯಾಪಾರ-ಒಪ್ಪಂದ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ತಿಳಿದುಬಂದಿದೆ.

ಇದನ್ನೂ ಓದಿ: G20 Summit 2023: ಜಿ20 ಶೃಂಗಸಭೆಯೂ ‘ಭಾರತ’ಮಯ; ಮೋದಿ ಮುಂದಿನ ನೇಮ್‌ಪ್ಲೇಟ್‌ನಲ್ಲಿ ‘ಭಾರತ’

ಇದಕ್ಕೂ ಮೊದಲು ರಿಷಿ ಸುನಕ್‌ ಅವರು ಜಿ 20 ಸಭೆಯ ನಾಯಕತ್ವದ ಬಗ್ಗೆ ಟ್ವೀಟ್‌ ಮಾಡಿದ್ದರು. “ಜಾಗತಿಕ ಆರ್ಥಿಕ ಬಿಕ್ಕಟ್ಟು ನಿವಾರಣೆಗಾಗಿ 15 ವರ್ಷಗಳ ಹಿಂದೆ ಜಿ20 ನಾಯಕರು ಒಟ್ಟಾಗಿ ಬಂದಿದ್ದರು. ಈಗಲೂ ಜಗತ್ತು ಜಿ20ಯ ನಾಯಕತ್ವಕ್ಕಾಗಿ ಹಂಬಲಿಸುತ್ತಿದೆ. ಎಲ್ಲರೂ ಒಗ್ಗೂಡಿ ಸವಾಲುಗಳನ್ನು ಹಿಮ್ಮೆಟ್ಟಿಸೋಣ” ಎಂದು ರಿಷಿ ಸುನಕ್ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದರು.

Exit mobile version