Site icon Vistara News

G20 summit 2023: ಇದರಲ್ಲೂ ರಾಜಕೀಯ ಮಾಡಬಾರದಿತ್ತು ಎಂದ ಮಲ್ಲಿಕಾರ್ಜುನ ಖರ್ಗೆ

Mallikarjun kharge

ಹೊಸದಿಲ್ಲಿ: G20 ಶೃಂಗಸಭೆ (G20 summit 2023) ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು (President Draupadi Murmu) ಇಂದು ರಾತ್ರಿ ಆಯೋಜಿಸಿರುವ ಔತಣಕೂಟಕ್ಕೆ ತಮಗೆ ಆಹ್ವಾನ ನೀಡದ ನಡೆಯ ಬಗ್ಗೆ ವಿಪಕ್ಷ ನಾಯಕ, ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕೊನೆಗೂ ತುಟಿ ಬಿಚ್ಚಿದ್ದಾರೆ. ʼʼಕೇಂದ್ರ ಸರ್ಕಾರ ಈ ವಿಚಾರದಲ್ಲಿ ರಾಜಕೀಯ ಮಾಡಬಾರದಿತ್ತುʼʼ ಎಂದಿದ್ದಾರೆ.

ವಿಪಕ್ಷ ನಾಯಕರಲ್ಲಿ ಪ್ರಮುಖರಾಗಿರುವ ಹಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಮಂತ್ರಣ ಹೋಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರ ಸಿಎಂ ನಿತೀಶ್‌ ಕುಮಾರ್‌, ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೇನ್‌ ಅವರುಗಳಿಗೆ ಆಹ್ವಾನ ಹೋಗಿದ್ದು, ತಮ್ಮ ಬರುವಿಕೆ ಖಚಿತಪಡಿಸಿದ್ದಾರೆ. ಆದರೆ ಖರ್ಗೆಯವರಿಗೆ ಆಹ್ವಾನವೇ ಬಂದಿಲ್ಲ.

ಸಿಎಂ ಸಿದ್ದರಾಮಯ್ಯ (CM Siddaramiah) ಅವರಿಗೆ ಔತಣಕೂಟಕ್ಕೆ ಆಹ್ವಾನ ಬಂದಿದ್ದು, ಅವರು ತಾವು ಭಾಗವಹಿಸುತ್ತಿಲ್ಲ ಎಂದು ಖಚಿತಪಡಿಸಿದ್ದಾರೆ. ಖರ್ಗೆಯವರಿಗೆ ಆಮಂತ್ರಣ ಇಲ್ಲದಿರುವುದನ್ನು ಸಿದ್ದರಾಮಯ್ಯ ಅವರೂ ಖಂಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಅಧಿಕೃತವಾಗಿ ರಾಜ್ಯಸಭೆಯ ವಿರೋಧಪಕ್ಷದ ನಾಯಕರಾಗಿದ್ದು, ಅವರನ್ನು ಜಿ20 ಸಭೆ ಆಹ್ವಾನಿಸದಿರುವುದು ತಪ್ಪು ಎಂದಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಕೂಡ ಈ ಬಗ್ಗೆ ಮಾತನಾಡಿದ್ದು, ಇದು ಸರ್ಕಾರ ಚಿಂತಿಸುತ್ತಿರುವ ವಿಧಾನವಾಗಿದೆ. ಭಾರತದ 60% ಜನತೆಯನ್ನು ಪ್ರತಿನಿಧಿಸುತ್ತಿರುವ ನಾಯಕನನ್ನು ಮೋದಿ ಸರ್ಕಾರ ಗೌರವಿಸಿಲ್ಲ ಎಂದಿದ್ದಾರೆ.

ಜಿ20ಗೆ ಸಿಎಂ ಸಿದ್ದರಾಮಯ್ಯ ಗೈರಾಗುತ್ತಿರುವ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕ ಅಶ್ವತ್ಥ್‌ನಾರಾಯಣ್‌ ಅವರು ಕಿಡಿ ಕಾರಿದ್ದಾರೆ. ʼʼಇಡೀ ವಿಶ್ವಮಟ್ಟದ ನಾಯಕರು ಬಂದಾಗ ಒಂದೇ ದೇಶ, ಒಂದೇ ಭೂಮಿ ಅಂತ ಮಾತನಾಡಬೇಕಿತ್ತು. ಇದು ಸಿದ್ದರಾಮಯ್ಯನವರ ವೈಯಕ್ತಿಕ ವಿಚಾರ ಅಲ್ಲ. ಸಾರ್ವಜನಿಕ ಪ್ರತಿನಿಧಿಯಾಗಿ ರಾಜ್ಯದ ಹಿತ ಕಾಪಾಡೋಕೆ ಕೆಲಸ ಮಾಡಬೇಕು. ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ವೈಯಕ್ತಿಕ ಪ್ರತಿಷ್ಠೆ ತೋರಿಸಿ ರಾಜಕೀಯ ಬೆರೆಸುತ್ತಿದ್ದಾರೆʼʼ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: G20 Summit LIVE Updates: ಜಿ20 ಶೃಂಗಸಭೆ; ಮೊದಲ ಅಧಿವೇಶನ ಫಲಪ್ರದ ಎಂದ ಮೋದಿ; ಖರ್ಗೆಗೆ ಆಹ್ವಾನ ನೀಡದಿರುವುದಕ್ಕೆ ಸಿದ್ದರಾಮಯ್ಯ ಅಸಮಾಧಾನ

Exit mobile version