ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎರಡು ದಿನ ವಿಜೃಂಭಣೆಯಿಂದ ನಡೆದ ಜಿ20 ಶೃಂಗಸಭೆ ಮುಕ್ತಾಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಔಪಚಾರಿಕವಾಗಿ ಬ್ರೆಜಿಲ್‌ಗೆ ಜಿ20 ಅಧ್ಯಕ್ಷತೆಯನ್ನು ಹಸ್ತಾಂತರಿಸಿದ್ದಾರೆ. ಇನ್ನು ಜಿ20 ಸಭೆಯಲ್ಲಿ ಎಲ್ಲ ರಾಷ್ಟ್ರಗಳು ಅಂಗೀಕರಿಸಿದ ‘ಡೆಲ್ಲಿ ಡೆಕ್ಲೆರೇಷನ್’ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಡೆಲ್ಲಿ ಡೆಕ್ಲೆರೇಷನ್ಅನ್ನು ಸರ್ವ ಸದಸ್ಯ ರಾಷ್ಟ್ರಗಳು ಅವಿರೋಧವಾಗಿ ಅಂಗೀಕರಿಸಿದ್ದು, ಇದರ ಹಿಂದೆ ಜಿ20 ಶೃಂಗಸಭೆ ಶೆರ್ಪಾ (ಅಧಿಕಾರಿಗಳ ತಂಡ)ದಲ್ಲಿರುವ ಇಬ್ಬರು ಅಧಿಕಾರಿಗಳ ಶ್ರಮವು ಹೆಚ್ಚು ಗಮನ ಸೆಳೆದಿದೆ.
ಹೌದು, ರಾಜತಾಂತ್ರಿಕ ಅಧಿಕಾರಿಗಳ ತಂಡದಲ್ಲಿರುವ ಈನಮ್ ಗಂಭೀರ್ ಹಾಗೂ ನಾಗರಾಜ್ ನಾಯ್ಡು ಕಕನೂರ್ ಅವರು ಡೆಲ್ಲಿ ಡೆಕ್ಲೆರೇಷನ್ ರಚಿಸುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದಾರೆ. ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್ ಅವರು ಕೂಡ ಶೆರ್ಪಾ ಅಮಿತಾಭ್ ಕಾಂತ್ ಅವರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಅಮಿತಾಭ್ ಕಾಂತ್ ಅವರು ಡೆಲ್ಲಿ ಡೆಕ್ಲೆರೇಷನ್ ರಚನೆ ಎಷ್ಟು ಕಷ್ಟವಾಗಿತ್ತು ಎಂಬುದನ್ನು ವಿವರಿಸಿದ್ದಾರೆ.
300 ದ್ವಿಪಕ್ಷೀಯ ಸಭೆ
ಈನಮ್ ಗಂಭೀರ್, ನಾಗರಾಜ್ ನಾಯ್ಡು ಕಕನೂರ್, ಅಮಿತಾಭ್ ಕಾಂತ್ ಸೇರಿ ಶೆರ್ಪಾದಲ್ಲಿರುವ ಹಲವು ಅಧಿಕಾರಿಗಳು ನಿರಂತರವಾಗಿ ಶ್ರಮಿಸಿ ಡೆಲ್ಲಿ ಡೆಕ್ಲೆರೇಷನ್ಅನ್ನು ರಚಿಸಿದ್ದಾರೆ. “ಜಿ20 ಶೃಂಗಸಭೆಯ ಜಟಿಲ ವಿಷಯ ಎಂದರೆ ಅದು ಡೆಲ್ಲಿ ಡೆಕ್ಲೆರೇಷನ್ಅನ್ನು ರಚಿಸುವುದು ಹಾಗೂ ಅದಕ್ಕೆ ಆಯಾ ರಾಷ್ಟ್ರಗಳಿಂದ ಸಮ್ಮತಿ ಪಡೆಯುವುದು. 200 ಗಂಟೆ, 300 ದ್ವಿಪಕ್ಷೀಯ ಸಭೆ, 15 ಕರಡು ರಚನೆಯ ಬಳಿಕ ಶುಕ್ರವಾರ ರಾತ್ರಿ (ಸೆಪ್ಟೆಂಬರ್ 8) ನಿರ್ಣಯಕ್ಕೆ ಎಲ್ಲ ರಾಷ್ಟ್ರಗಳು ಸಮ್ಮತಿ ಸೂಚಿಸಿವೆ” ಎಂದು ಅಮಿತಾಭ್ ಕಾಂತ್ ತಿಳಿಸಿದ್ದಾರೆ.
ಇದನ್ನೂ ಓದಿ: G20 Summit 2023: ಜಿ 20 ಶೃಂಗಸಭೆಯ 2 ದಿನದಲ್ಲಿ ಏನೇನಾಯ್ತು? ಪ್ರಮುಖ ತೀರ್ಮಾನಗಳು ಇಲ್ಲಿವೆ
ದೆಹಲಿ ನಿರ್ಣಯದಲ್ಲಿ ಉಕ್ರೇನ್ ಬಿಕ್ಕಟ್ಟು ಸೇರಿ ಸುಮಾರು 73 ವಿಷಯಗಳನ್ನು ಸೇರಿಸಲಾಗಿದೆ. ಹಾಗಾಗಿ, ನಿರ್ಣಯಕ್ಕೆ ಚೀನಾ ಹಾಗೂ ರಷ್ಯಾದಿಂದ ಅಂಗೀಕಾರ ಪಡೆಯುವುದು ಕಷ್ಟವಾಗಿರಲಿಲ್ಲ. ಇದೇ ವಿಷಯವನ್ನು ಪ್ರಸ್ತಾಪಿಸಿ ಶಶಿ ತರೂರ್ ಅವರು ಶೆರ್ಪಾ ಅಧಿಕಾರಿಗಳನ್ನು ಮೆಚ್ಚಿದ್ದಾರೆ. “ಜಿ20 ಶೃಂಗಸಭೆಯ ನಿರ್ಣಯಕ್ಕೆ ಕೊನೇ ಕ್ಷಣದವರೆಗೆ ಶ್ರಮಿಸಿ ಅಂಗೀಕಾರ ಪಡೆದಿರುವುದು ಹೆಮ್ಮೆಯ ವಿಷಯ” ಎಂದು ತರೂರ್ ಟ್ವೀಟ್ ಮಾಡಿದ್ದಾರೆ.