ನವದೆಹಲಿ: ಜಿ-20 ಶೃಂಗಸಭೆಗೆ ದೆಹಲಿಯ ಭಾರತ ಮಂಟಪದಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ಜಾಗತಿಕ ನಾಯಕರನ್ನು ಸಭೆಗೆ ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ, ಮೊದಲ ಅಧಿವೇಶನ ಉದ್ದೇಶಿಸಿ ಮಾತನಾಡಿದರು. “ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಸಭೆಯು ಜಗತ್ತನ್ನು ಒಳಗೊಂಡು ನಡೆಯುತ್ತಿರುವ ಸಭೆಯಾಗಿದೆ. ಜಗತ್ತು ಒಗ್ಗೂಡುವ ಮೂಲಕ ಏಳಿಗೆ ಹೊಂದಬೇಕು ಎಂಬುದು ನಮ್ಮ ಆಶಯವಾಗಿದೆ” ಎಂದು ತಿಳಿಸಿದರು.
“ಭಾರತದಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಎಂಬ ಮಂತ್ರದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಇದೇ ಸೂತ್ರದಂತೆ ವಿಶ್ವವೂ ಮುನ್ನಡೆದರೆ ಮಾನವ ಏಳಿಗೆಯು ಸಾಧ್ಯವಾಗಲಿದೆ. ಹಾಗಾಗಿ, ಎಲ್ಲರೂ ಒಗ್ಗೂಡಿ ಮಾನವ ಕುಲವನ್ನು ಏಳಿಗೆಯತ್ತ, ಅಭಿವೃದ್ಧಿಯತ್ತ ಕೊಂಡೊಯ್ಯೋಣ. ಜಗತ್ತು ಒಂದಾದರೆ ಅಭಿವೃದ್ಧಿ, ಜಗತ್ತು ಒಂದಾದರೆ ಶಾಂತಿ ಸ್ಥಾಪನೆ ಸಾಧ್ಯವಾಗಲಿದೆ. ಇದೇ ಮನಸ್ಥಿತಿಯಲ್ಲಿ ನಾವು ಕೊರೊನಾದಂತಹ ಸಾಂಕ್ರಾಮಿಕ ಕಾಯಿಲೆಯನ್ನು ತೊಲಗಿಸಿದ್ದೇವೆ” ಎಂದು ಹೇಳಿದರು.
ನರೇಂದ್ರ ಮೋದಿ ಮಾತು
“ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಜತೆಗೆ ಸಬ್ ಕಾ ವಿಶ್ವಾಸ್ ಕೂಡ ಎಲ್ಲರ ಆದ್ಯತೆಯಾಗಿದೆ. ಜಾಗತಿಕ ಆರ್ಥಿಕತೆ, ಹವಾಮಾನ ಬದಲಾವಣೆ, ಶಾಂತಿ ಸ್ಥಾಪನೆ, ಸರ್ವ ಕ್ಷೇತ್ರಗಳ ಏಳಿಗೆಗೆ ಶ್ರಮಿಸೋಣ. ಹಾಗೆಯೇ, ಉಗ್ರವಾದದ ವಿರುದ್ಧ ಎಲ್ಲರೂ ಹೋರಾಟ ನಡೆಸುವ ಮೂಲಕ ಮಾನವ ಕುಲವನ್ನು ಶಾಂತಿಯತ್ತ ಕೊಂಡೊಯ್ಯೋಣ. ಭಾರತದಲ್ಲಿ ಜಿ 20 ಶೃಂಗಸಭೆಯು ಜನರ ಸಭೆಯಾಗಿ ಪರಿವರ್ತನೆಯಾಗಿದೆ” ಎಂದರು.
ಇದನ್ನೂ ಓದಿ: G20 Summit 2023: ಜಿ20 ಶೃಂಗಸಭೆಗೆ ಚಾಲನೆ; ಇಂದು ಏನೆಲ್ಲ ನಡೆಯಲಿದೆ?
ದೇಶದ ಜನರ ಸ್ಮರಿಸಿದ ಮೋದಿ
“ಜಿ 20 ಶೃಂಗಸಭೆಗೆ ಭಾರತದ 140 ಕೋಟಿ ಜನರು ಕೂಡ ಯೋಗದಾನ ನೀಡಿದ್ದಾರೆ. ಭಾರತದ ಪ್ರಮುಖ ನಗರಗಳಲ್ಲಿ ಸಭೆ ನಡೆದಿರುವುದು ಜನರ ಸಹಭಾಗಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ” ಎಂದು ಹೇಳಿದರು. ಇದಾದ ಬಳಿಕ ಜಿ 20 ನಾಯಕರು ಫೋಟೊ ಸೆಷನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲ ನಾಯಕರು ಒಗ್ಗೂಡಿ ಫೋಟೊ ತೆಗೆಸಿಕೊಳ್ಳುವ ಮೂಲಕ ಒಗ್ಗಟ್ಟಿನ ಸಂದೇಶ ರವಾನಿಸಲಿದ್ದಾರೆ.