ನವದೆಹಲಿ: ಜಿ 20 ಶೃಂಗಸಭೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ದೆಹಲಿಯಲ್ಲಿ ನಡೆಯು ಅದ್ಧೂರಿ ಕಾರ್ಯಕ್ರಮಕ್ಕೆ ಭದ್ರತೆ, ವಿದೇಶಿಯರಿಗೆ ವಿಶೇಷ ಆತಿಥ್ಯದಿಂದ ಹಿಡಿದು, ಅವರಿಗೆ ಬಡಿಸುವ ತಿನಿಸುಗಳ ಪಟ್ಟಿವರೆಗೆ ಎಲ್ಲ ಸಿದ್ಧವಾಗಿದೆ. ಅದರಲ್ಲೂ, ಜಿ 20 (G20 Summit 2023) ನಾಯಕರು, ಗಣ್ಯರಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿದೆ. ಭಾರತದ ವೈವಿಧ್ಯತೆಯನ್ನು ಸಾರುವ, ದೇಶೀಯತೆಯನ್ನು ಬಿಂಬಿಸುವ ತಿನಿಸುಗಳನ್ನು ಅತಿಥಿಗಳಿಗೆ ಬಡಿಸಲಾಗುತ್ತದೆ.
ಸೆಪ್ಟೆಂಬರ್ 9 ಹಾಗೂ 10ರಂದು ಜಿ 20 ಸಭೆ ನಡೆಯಲಿದ್ದು, ಕೇವಲ ಸಸ್ಯಾಹಾರದ ಮೆನು ತಯಾರಾಗಿದೆ. ರಾಗಿ ಸೇರಿ ಸಿರಿಧಾನ್ಯಗಳ ತಿನಿಸಿನಿಂದ ಹಿಡಿದು ಪಾನಿ ಪುರಿಯಂತಹ ಸ್ಟ್ರೀಟ್ ಫುಡ್‌ಗೂ ಆದ್ಯತೆ ನೀಡಲಾಗಿದೆ. ರಾಗಿ ದೋಸೆ, ರಾಗಿ ಲಾಡು, ಸಿರಿಧಾನ್ಯಗಳ ವಿಶೇಷ ಥಾಲಿ, ಪಲಾವ್, ಇಡ್ಲಿ ಸೇರಿ ಹತ್ತಾರು ಬಗೆಯ ತಿನಿಸುಗಳನ್ನು ಬಡಿಸಲಾಗುತ್ತದೆ. ದೆಹಲಿಯಲ್ಲಿರುವ ಜೈಪುರ ಹೌಸ್‌ನಲ್ಲಿ ಗಣ್ಯರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ಜಿ 20 ಸಭೆಗೆ ಸಕಲ ಸಿದ್ಧತೆ
ರಾಜ್ಯಗಳ ವಿಶೇಷ ತಿನಿಸಿಗೂ ಆದ್ಯತೆ
ಕೆಲವು ರಾಜ್ಯಗಳ ವಿಶೇಷ ತಿನಿಸುಗಳನ್ನು ಕೂಡ ಜಿ 20 ಶೃಂಗಸಭೆಯ ನಾಯಕರಿಗೆ ಉಣಬಡಿಸಲಾಗುತ್ತಿದೆ. ರಾಜಸ್ಥಾನದ ದಾಲ್ ಬಾಟಿ ಚುರ್ಮಾ, ಬೆಂಗಾಲಿ ರಸಗುಲ್ಲ, ದಕ್ಷಿಣ ಭಾರತದ ವಿಶೇಷ ಮಸಾಲ ದೋಸೆ, ಬಿಹಾರದ ಲಿಟ್ಟಿ ಚೋಖಾ ಸೇರಿ ಹಲವು ತಿನಿಸುಗಳನ್ನು ವಿವಿಧ ಸಂದರ್ಭಗಳಲ್ಲಿ ಬಡಿಸಲಾಗುತ್ತದೆ.
ಸ್ಟ್ರೀಟ್ ಫುಡ್ ಕೂಡ ಇರಲಿದೆ
ಭಾರತದಲ್ಲಿ ಸ್ಟ್ರೀಟ್‌ಫುಡ್‌ಗಳಿಗೇನೂ ಕಡಿಮೆ ಇಲ್ಲ. ಒಂದೊಂದು ಭಾಗದಲ್ಲಿ ಒಂದೊಂದು ಸ್ಟ್ರೀಟ್‌ಫುಡ್ ಫೇಮಸ್ ಆಗಿದೆ. ಹಾಗಾಗಿ, ಜಿ 20 ಶೃಂಗಸಭೆಯ ನಾಯಕರಿಗೂ ಭಾರತದ ಪ್ರಮುಖ ಬೀದಿಬದಿ ತಿನಿಸುಗಳಾದ ಪಾನಿ ಪುರಿ, ಚಾಟ್ಪಟಿ ಚಾಟ್, ದಹಿ ಭಲ್ಲಾ, ಸಮೋಸ ಸೇರಿ ಹಲವು ತಿನಿಸುಗಳನ್ನು ನೀಡಲಾಗುತ್ತದೆ.