ನವದೆಹಲಿ: ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ ಜಿ 20 ಶೃಂಗಸಭೆ (G20 in India) ನಡೆಯಲಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೆ.9-10ರಂದು ನಡೆಯಲಿರುವ ಸಭೆಗೆ ಅಮೆರಿಕ, ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳ ಒಟ್ಟು 29 ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಈ ಸಭೆಗೆಂದು ದೇಶವು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ನವದೆಹಲಿಯ ಬಹುತೇಕ ಐಷಾರಾಮಿ ಹೋಟೆಲ್‌ಗಳನ್ನು ಗಣ್ಯರ ವಾಸಕ್ಕೆಂದು ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತಿದೆ.
ನವದೆಹಲಿಯಲ್ಲಿರುವ ಐಟಿಸಿ ಮೌರ್ಯ, ತಾಜ್ ಪ್ಯಾಲೇಸ್, ದಿ ಒಬೆರಾಯ್, ದಿ ಲೋಧಿ, ದಿ ಇಂಪೀರಿಯಲ್ ಮತ್ತು ಲಿ ಮೆರಿಡಿಯನ್ ಸೇರಿದಂತೆ ಅನೇಕ ಐಷಾರಾಮಿ ಹೋಟೆಲ್‌ಗಳಲ್ಲಿ ನೂರಾರು ರೂಮುಗಳನ್ನು ಗಣ್ಯರಿಗಾಗಿ ಕಾಯ್ದಿರಿಸಲಾಗಿದೆ ಎಂದು ವರದಿಯಿದೆ. ಅಮೆರಿಕದ ಅಧ್ಯಕ್ಷರಾಗಿರುವ ಜೋ ಬೈಡೆನ್ ಮತ್ತು ಅವರ ಕುಟುಂಬಕ್ಕಾಗಿ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ 400 ರೂಮ್‌ಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಈ ಹೋಟೆಲ್‌ನಲ್ಲಿ ಈ ಹಿಂದೆ ಅಮೆರಿಕದ ಅಧ್ಯಕ್ಷರುಗಳಾಗಿದ್ದ ಜಾರ್ಜ್ ಡಬ್ಲ್ಯೂ ಬುಷ್, ಬಿಲ್ ಕ್ಲಿಂಟನ್, ಬರಾಕ್ ಒಬಾಮಾ ಹಾಗೂ ಬೇರೆ ಬೇರೆ ರಾಷ್ಟ್ರಗಳ ಪ್ರಮುಖರು ವಾಸ ಮಾಡಿದ್ದರು. ಬೈಡೆನ್ ಆಗಮನಕ್ಕೂ ಮೊದಲು ಅವರ ರಹಸ್ಯ ತಂಡವು ಹೋಟೆಲ್ ಆವರಣದಲ್ಲಿ ಪರಿಶೀಲನೆ ನಡೆಸಲಿದೆ ಎಂದು ವರದಿಯಿದೆ.
ಇದನ್ನೂ ಓದಿ: Viral video: ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ಬೆಂಕಿ ಎಸೆದು ಕೋಲಾಹಲ ಸೃಷ್ಟಿಸಿದ ಮಹಿಳೆ!
ಹಾಗೆಯೇ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ದೆಹಲಿಯ ತಾಜ್ ಹೋಟೆಲ್‌ನಲ್ಲಿ ಉಳಿಸುವ ಸಾಧ್ಯತೆಯಿದೆ. ಹಾಗೆಯೇ ಶಾಂಗ್ರಿ ಲಾ ಹೋಟೆಲ್‌ನಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಮತ್ತು ಜರ್ಮನಿಯ ಅಧಿಕಾರಿಗಳಿಗೆ ಬುಕ್ಕಿಂಗ್ ಮಾಡಲಾಗಿದೆ ಎನ್ನಲಾಗಿದೆ. ಫ್ರಾನ್ಸ್‌ನ ಅಧ್ಯಕ್ಷರಾಗಿರುವ ಎಮ್ಯಾನುಯೆಲ್ ಮ್ಯಾಕ್ರಾನ್ ಅವರು ಕ್ಲಾರಿಡ್ಜಸ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ದೆಹಲಿಯ ಇಂಪೀರಿಯಲ್ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದ್ದಾರೆ.
ಈ ಸಭೆಯ ಪ್ರಯುಕ್ತ ಕೇಂದ್ರಾಡಳಿತ ಪ್ರದೇಶವಾದ ನವದೆಹಲಿಯಲ್ಲಿ ಸೆಪ್ಟೆಂಬರ್ 8ರಿಂದ 10ರವರೆಗೆ ಎಲ್ಲ ಕಚೇರಿಗಳು, ವಾಣಿಜ್ಯ ಸಂಸ್ಥೆಗಳು, ಬ್ಯಾಂಕ್‌ಗಳು, ಶಾಲಾ ಕಾಲೇಜುಗಳನ್ನು ಮುಚ್ಚಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಕಟಣೆಯನ್ನು ಹೊರಡಿಸಿದ್ದಾರೆ.