Site icon Vistara News

ವಿಸ್ತಾರ ಸಂಪಾದಕೀಯ: ಜಿ20 ಶೃಂಗಸಭೆ ಜಾಗತಿಕವಾಗಿ ಭಾರತದ ವರ್ಚಸ್ಸು ಹೆಚ್ಚಿಸಲಿದೆ

G20 summit

ಜಿ 20 ಶೃಂಗಸಭೆ ಆರಂಭವಾಗಿದೆ. ಸೆಪ್ಟೆಂಬರ್ 9 ಮತ್ತು 10ರಂದು ಎರಡು ದಿನಗಳ ಕಾಲ ವಿಶ್ವ ನಾಯಕರ ಸಮಾಗಮ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆಯಲಿದೆ. ಜಿ20 ಎಂಬುದು ವಿಶ್ವಸಂಸ್ಥೆಯ ಬಳಿಕ ಎರಡನೇ ಅತಿ ದೊಡ್ಡ ರಾಷ್ಟ್ರಗಳ ಒಕ್ಕೂಟವಾಗಿರುವುದರಿಂದ, ಇಲ್ಲಿ ನಡೆಯುವ ಚಿಂತನ ಮಂಥನವೂ ಜಾಗತಿಕ ಮಟ್ಟದ್ದೇ ಆಗಿರುತ್ತದೆ. ಈ ಬಾರಿ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ಶೃಂಗ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿದೆ. ಪರಸ್ಪರ ದ್ವೇಷಿಸುವ ದೇಶಗಳೂ ಇಲ್ಲಿ ಮುಖಾಮುಖಿಯಾಗುತ್ತವೆ; ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಒಮ್ಮತ ಮೂಡಿಸುವುದಕ್ಕೆ ಯತ್ನಿಸುತ್ತವೆ ಎಂಬುದು ವಿಶೇಷ. ರಷ್ಯಾ ಹಾಗೂ ಚೀನಾ ಅಧ್ಯಕ್ಷರು ಬರುತ್ತಿಲ್ಲವಾದರೂ ಅಲ್ಲಿನ ಎರಡನೇ ಮುಖ್ಯಸ್ಥರು ಆಗಮಿಸಿದ್ದಾರೆ. ಇಲ್ಲಿ ನಡೆಯಲಿರುವ ಈ ಸಭೆ ಏಕಕಾಲಕ್ಕೆ ಭಾರತಕ್ಕೂ, ವಿಶ್ವಕ್ಕೂ ಬಹು ಮುಖ್ಯವಾದುದಾಗಿದೆ. ಈ ಶೃಂಗಸಭೆಯು ಮಾನವ ಕೇಂದ್ರಿತ ಮತ್ತು ಅಂತರ್ಗತ ಅಭಿವೃದ್ಧಿಯಲ್ಲಿ ಹೊಸ ಹಾದಿಯನ್ನು ರೂಪಿಸುತ್ತದೆ ಎಂಬುದು ನನ್ನ ದೃಢವಾದ ನಂಬಿಕೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

G20 ಒಕ್ಕೂಟದ ಅಧ್ಯಕ್ಷ ಸ್ಥಾನ ಎಂಬುದೊಂದು ಪ್ರತಿಷ್ಠಿತ ಸ್ಥಾನವಾಗಿದೆ. ಈ ಶೃಂಗಸಭೆಯೊಂದಿಗೆ ಭಾರತದ ಈ ಹೊಣೆ ಮುಗಿಯಲಿದೆ. ಅದಕ್ಕೂ ಮುನ್ನ ಈ ಸಭೆ ಅರ್ಥಪೂರ್ಣವಾಗುವಂತೆ, ಇಲ್ಲಿ ಫಲಪ್ರದ ಚರ್ಚೆಗಳು ನಡೆಯುವಂತೆ ನೋಡಿಕೊಳ್ಳುವುದು ಭಾರತದ ಹೊಣೆಯಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಅಧ್ಯಕ್ಷತೆ ವಹಿಸಿಕೊಂಡ ಕ್ಷಣದಿಂದ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವರು ಮತ್ತು ಇದಕ್ಕೆ ಸಂಬಂಧಪಟ್ಟ ಹೊಣೆ ಹೊತ್ತವರು ಸಾಕಷ್ಟು ಓಡಾಡಿ, ಸದಸ್ಯ ರಾಷ್ಟ್ರಗಳು ಮಾತನಾಡಿಸಿ, ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರನ್ನು ಚರ್ಚೆಯ ನೆಲೆಗೆ ತಂದಿದ್ದಾರೆ. ಸಭೆಗೆ ಸರಿಯಾದ ಸ್ಥಳದ ವ್ಯವಸ್ಥೆಯಿಂದ ಹಿಡಿದು, ಬರುವ ಎಲ್ಲ ನಾಯಕರನ್ನು ಸುರಕ್ಷಿತವಾಗಿಯೂ ಸಮಾಧಾನಪೂರ್ವಕವಾಗಿಯೂ ಮರಳಿ ಕಳುಹಿಸುವವರೆಗೆ ಭಾರತದ ಹೊಣೆ ದೊಡ್ಡದು. ಜತೆಗೆ ಇಲ್ಲಿ ನಡೆದ ಚರ್ಚೆಗಳು ಅರ್ಥಪೂರ್ಣವಾಗಿ, ಐತಿಹಾಸಿಕವಾಗಿಯೂ ಇರಬೇಕು. ಹಿಂದೆ ಪ್ಯಾರಿಸ್‌ನಲ್ಲಿ ನಡೆದ ಹವಾಮಾನ ಶೃಂಗಸಭೆಯನ್ನು ಇಂದಿಗೂ ಜಗತ್ತು ಜ್ಞಾಪಿಸಿಕೊಳ್ಳುತ್ತದೆ; ಹಾಗೆಯೇ ಇದನ್ನೂ ಜಗತ್ತು ನೆನಪಿಟ್ಟುಕೊಳ್ಳುವಂತಾಗಬೇಕಿದೆ.

1990ರ ದಶಕದ ಕೊನೆಯಲ್ಲಿ ಏಷ್ಯಾದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾದಾಗ, ಹಲವು ದೇಶಗಳು ಸೇರಿಕೊಂಡು, ಯಾವ ದೇಶವೂ ಆರ್ಥಿಕವಾಗಿ ಮುಳುಗಿಹೋಗದಂತೆ ಪರಸ್ಪರ ವ್ಯಾಪಾರ ಸಹಾಯದ ಮೂಲಕ ಬದುಕುವುದು ಹೇಗೆ ಎಂದು ಚರ್ಚಿಸಿದವು. ಹಾಗೆ 1999ರಲ್ಲಿ ಸ್ಥಾಪನೆಯಾದುದೇ G20 ಸಂಘಟನೆ. ಇದು 20 ದೇಶಗಳ ಒಂದು ಒಕ್ಕೂಟ. ಆರಂಭದಲ್ಲಿ ಇದು ದೇಶಗಳ ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್‌ನ ಅಧ್ಯಕ್ಷರುಗಳ ಸಭೆಯಾಗಿ ಕಾರ್ಯನಿರ್ವಹಿಸಿದರೂ, 2008ರಲ್ಲಿ ಉಂಟಾದ ಇನ್ನೊಂದು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಂಡಿದೆ. ಜಾಗತಿಕ ಆರ್ಥಿಕತೆಯನ್ನು ಸ್ಥಿರವಾಗಿಟ್ಟುಕೊಳ್ಳುವುದು ಇದರ ಪ್ರಾಥಮಿಕ ಗುರಿಯಾಗಿದೆ. ಹಣಕಾಸಿನ ಸಮಸ್ಯೆಗಳನ್ನು ನಿವಾರಿಸುವುದು, ವಿಶ್ವಾದ್ಯಂತ ಆರ್ಥಿಕ ಸ್ಥಿರತೆ ಹೊಂದುವುದು, ದೇಶಗಳ ಬೆಳವಣಿಗೆಯನ್ನು ಉತ್ತೇಜಿಸುವುದು ಕೂಡ ಗುರಿಗಳಾಗಿವೆ.

ಈ ಸಲದ G20 ಶೃಂಗಸಭೆಯ ಕಾರ್ಯಸೂಚಿಯನ್ನು ನಿಗದಿಪಡಿಸುವ ಹೊಣೆಯೂ ಆತಿಥೇಯ ರಾಷ್ಟ್ರದ್ದೇ ಆಗಿರುವುದರಿಂದ, ಭಾರತವೇ ಈ ಸಲ ಚರ್ಚೆಯ ವಿಷಯಗಳನ್ನೂ ನಿಗದಿಪಡಿಸಿದೆ. ಹೀಗೆ ನಿಶ್ಚಯಿಸುವಾಗ, ಜಾಗತಿಕ ಹಿತಾಸಕ್ತಿ ಆದ್ಯತೆಗಳನ್ನು ಮತ್ತು ನಮ್ಮ ಹಿತಾಸಕ್ತಿಗಳನ್ನೂ ಆದ್ಯತೆಯನ್ನಾಗಿಟ್ಟುಕೊಳ್ಳಲಾಗಿದೆ. ಭಾರತವು ಈ ಸಲದ ಸಭೆಯ ಥೀಮ್‌ ಅನ್ನು “ವಸುಧೈವ ಕುಟುಂಬಕಂ – ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ” ಎಂದಿಟ್ಟುಕೊಂಡಿದೆ. ಇದನ್ನು ನಮ್ಮ ಉಪನಿಷತ್ತಿನಿಂದ ಪಡೆಯಲಾಗಿದೆ. ಇದು ಮಾನವ, ಪ್ರಾಣಿ, ಸಸ್ಯ ಮತ್ತು ಸೂಕ್ಷ್ಮಜೀವಿಗಳು ಎಲ್ಲರಿಗೂ ಭೂಮಿಯ ಮೇಲೆ ಇರುವ ಅಧಿಕಾರವನ್ನು ಮತ್ತು ವಿಶಾಲ ವಿಶ್ವದಲ್ಲಿ ಅವುಗಳ ಪರಸ್ಪರ ಸಂಬಂಧವನ್ನು ಸೂಚಿಸುತ್ತದೆ. ಇದಲ್ಲದೆ, ಥೀಮ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ಅನ್ನು ಸಹ ಗುರುತಿಸಲಾಗಿದೆ. ಇವೆಲ್ಲವೂ ಭಾರತೀಯ ಪರಂಪರೆ, ಜೀವನಶೈಲಿಯ ಹಿರಿಮೆಗಳೇ ಆಗಿವೆ. ಮಹಿಳಾ ಸಬಲೀಕರಣ, ಸಮಾಜದಲ್ಲಿ ಮಹಿಳೆಯರ ಪಾತ್ರವನ್ನು ಹೆಚ್ಚಿಸುವ ತಂತ್ರಗಳು ಮತ್ತು ಮಹಿಳಾ ಆರ್ಥಿಕತೆ, ಸಾಂಕ್ರಾಮಿಕ ರೋಗಗಳು ಸೇರಿದಂತೆ ಜಾಗತಿಕ ಆರೋಗ್ಯ ಸವಾಲುಗಳನ್ನು ಪರಿಹರಿಸುವುದು, ಸುಸ್ಥಿರ ಕೃಷಿ ಪದ್ಧತಿಗಳು ಮತ್ತು ಆಹಾರ ಭದ್ರತೆ, ವಿಶ್ವಾದ್ಯಂತ ಗುಣಮಟ್ಟದ ಶಿಕ್ಷಣದ ವ್ಯವಸ್ಥೆಯನ್ನು ಸುಧಾರಿಸುವುದು, ಆರ್ಥಿಕ ಚಾಲಕರಾಗಿ ಸಾಂಸ್ಕೃತಿಕ ವಿನಿಮಯ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಇವೆಲ್ಲ ಚರ್ಚೆಯ ಸಂಗತಿಗಳಾಗಿವೆ. ಇದೀಗ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಜಾಗತಿಕವಾಗಿ ಆಗಿರುವ ದುಷ್ಪರಿಣಾಮಗಳ ಕುರಿತು ಚರ್ಚೆಯನ್ನೂ ಇಟ್ಟುಕೊಂಡಿರುವುದು, ಈ ಕುರಿತು ಭಾರತದ ಕಳವಳ, ಬದ್ಧತೆ ಮತ್ತು ಧೈರ್ಯವನ್ನೂ ಪ್ರದರ್ಶಿಸುವಂತಿದೆ. ಸುಸ್ಥಿರ ಇಂಧನ ಬಳಕೆಗಾಗಿ ಮೋದಿಯವರು ತೀವ್ರತರವಾದ ಅಭಿಯಾನವನ್ನೇ ಮೊದಲಿನಿಂದ ನಡೆಸುತ್ತ ಬಂದಿದ್ದು, ಇಲ್ಲಿಯೂ ಅದನ್ನೇ ಮುಂದುವರಿಸಲಿದ್ದಾರೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ದಿಗಿಲು ಹುಟ್ಟಿಸುತ್ತಿರುವ ರಸ್ತೆ ಅಪಘಾತಗಳು, ತಪ್ಪಿತಸ್ಥ ಚಾಲಕರಿಗೆ ಕಠಿಣ ಶಿಕ್ಷೆಯಾಗಬೇಕು

ಹೀಗಾಗಿಯೇ ಇದು ಭಾರತಕ್ಕೆ ಹತ್ತರಲ್ಲಿ ಹನ್ನೊಂದು ಎಂಬಂತಹ ಸಮಾವೇಶವಾಗಿ ಉಳಿಯಲಾರದು. ಇಲ್ಲಿ ನಡೆಯಲಿರುವ ಚರ್ಚೆಗಳು ಬಹುಕಾಲ ಪರಿಣಾಮ ಬೀರುವಂಥವಾಗಿರಲಿವೆ. ಹಾಗೆಯೇ ಜತೆಜತೆಗೆ ಹಲವು ದೇಶಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಗಳು ಕೂಡ ನಡೆಯಲಿದ್ದು, ಹೊಸ ಸಂಬಂಧಗಳ ದಿಕ್ಕನ್ನು ತೆರೆಯಲಿವೆ. ವಿಭಿನ್ನ ಸಂಸ್ಕೃತಿ ಆಚರಣೆ ಭಾಷೆ ಮತ ಇತ್ಯಾದಿಗಳನ್ನು ಹೊಂದಿರುವ ಬೇರೆ ದೇಶದವರನ್ನು ನಮ್ಮಲ್ಲಿ ಬರಮಾಡಿಕೊಳ್ಳುವುದು, ವಿಶ್ವಾಸ ಬೆಳೆಸಿಕೊಳ್ಳುವುದು ಶ್ರೀಮಂತವಾದ ಅನುಭವ. ಈ ಸಭೆಯಿಂದ ಭಾರತದ ವರ್ಚಸ್ಸೂ ಬೆಳೆಯಲಿದೆ. ಇಲ್ಲಿನ ಪರಂಪರೆಯ ಶ್ರೀಮಂತಿಕೆ, ಜಾಗತಿಕ ವಿಚಾರಗಳಲ್ಲಿ ನಮ್ಮ ನಿಲುವುಗಳ ವಿವೇಕ ಘನತೆಗಳು ಪ್ರತಿಪಾದಿತವಾಗಲಿವೆ.

Exit mobile version