Site icon Vistara News

Gaganayaan Mission: ಬಾಹ್ಯಾಕಾಶಕ್ಕೆ ತೆರಳಲಿದೆ ‘ವ್ಯೋಮಿತ್ರ’ ಲೇಡಿ ರೋಬೋಟ್, ಇದು ಗಗನಯಾನ ಮಿಷನ್ ವಿಶೇಷ!

Vyommitra robot

ನವದೆಹಲಿ: ಚಂದ್ರಯಾನ 3 ಮಿಷನ್ (Chandrayaan Mission 3) ಯಶಸ್ವಿಯಾದ ಬೆನ್ನಲ್ಲೇ ಇಸ್ರೋ (ISRO)ಇನ್ನೂ ಅನೇಕ ಮಿಷನ್‌ಗಳನ್ನು ಕೈಗೆತ್ತಿಕೊಳ್ಳಲಿದೆ. ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಗಗನಯಾನ ಮಿಷನ್ ಪ್ರಯೋಗ ಆರಂಭವಾಗಲಿದೆ. ಈ ವಿಷಯವನ್ನು ಖಚಿತಪಡಿಸಿರುವ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು(Union minister Jitendra Singh), ಗಗನಯಾನ ಮಿಷನ್ ಎರಡನೇ ಹಂತದಲ್ಲಿ ‘ವ್ಯೋಮಿತ್ರ’ (Vyommitra Robot – ಬಾಹ್ಯಾಕಾಶ-ವಿಹಾರ ಮಾಡುವ ಹುಮನಾಯ್ಡ್ ರೋಬೋಟ್) ಅನ್ನು ಬಾಹ್ಯಾಕಾಶಕ್ಕೆ (Space Mission) ಕಳುಹಿಸಲಾಗುವುದು ಎಂದು ಅವರು ಹೇಳಿದರು.

ಈ ಎರಡು ಹಂತಗಳ ನಂತರ, ಗಗನಯಾನ ಯೋಜನೆಯ ಮಾನವಸಹಿತ ಮಿಷನ್‌ನ ಭಾಗವಾಗಿ ಕನಿಷ್ಠ ಒಂದರಿಂದ ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಬಹುಶಃ ಈ ಯೋಜನೆಯು 2024ರ ವೇಳೆಗೆ ಪ್ರಾರಂಭವಾಗಬಹುದು ಎಂದು ನಾನು ಭಾವಿಸುತ್ತೇನೆ. ಗಗನಯಾ ಮಿಷನ್ ಇಷ್ಟೊತ್ತಿಗೆ ಮುಗಿಯಬೇಕಾಗಿತ್ತು. ಆದರೆ, ಕೋವಿಡ್ ಕಾರಣಕ್ಕಾಗಿ ಮುಂದೂಡಲ್ಪಟ್ಟಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಹೇಳಿದ್ದಾರೆ.

ಬಾಹ್ಯಾಕಾಶದಲ್ಲಿ ಮಾನವರು ಹೇಗೆ ವರ್ತಿಸುತ್ತಾರೆ ಎಂಬುದನ್ನು ನಿರ್ಣಯಿಸಲು ಕೆಲವು ಕಾರ್ಯಗಳನ್ನು ನಿರ್ವಹಿಸಲು ವ್ಯೋಮಿತ್ರವನ್ನು ವಿನ್ಯಾಸಗೊಳಿಸಲಾಗಿದೆ. ಅಂತಹ ಕಾರ್ಯಾಚರಣೆಗಾಗಿ, ಗಗನಯಾತ್ರಿಗಳಿಗೆ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಮುಂಚಿತವಾಗಿ ಯೋಜನೆ ಅಗತ್ಯವಿದೆ. ವ್ಯೋಮಿತ್ರವು ಗಗನಯಾತ್ರಿಗಳು ನಿರ್ವಹಿಸುವ ಎಲ್ಲಾ ಚಟುವಟಿಕೆಗಳನ್ನು ಅನುಕರಿಸುತ್ತದೆ ಎಂದು ಸಚಿವರು ತಿಳಿಸಿದರು.

ಸೆಪ್ಟೆಂಬರ್‌ನಲ್ಲಿ ಆದಿತ್ಯ ಎಲ್ 1 ಉಡಾವಣೆ

ಚಂದ್ರಯಾನ 3 ಮಿಷನ್ ಯಶಸ್ಸಿನ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಂದಿನ 14 ದಿನಗಳಲ್ಲಿ ದೇಶದ ಮೊದಲ ಸೂರ್ಯ ಮಿಷನ್ ಆದಿತ್ಯ ಎಲ್ 1 ಉಡಾವಣೆಗೆ ಸಿದ್ಧತೆ ನಡೆಸುತ್ತಿದೆ. ಸೆಪ್ಟೆಂಬರ್ 2ರಂದು ಉಡಾವಣೆಯಾಗಬಹುದು ಎಂದು ಅಹಮದಾಬಾದ್​ನ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ (ಎಸ್ಎಸಿ) ನಿರ್ದೇಶಕ ನಿಲೇಶ್ ಎಂ ದೇಸಾಯಿ ಶನಿವಾರ ಹೇಳಿದ್ದಾರೆ.

ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದಲ್ಲಿ (ಯುಆರ್ ಎಸ್ ಸಿ) ಸಿದ್ಧಗೊಂಡಿರುವ ನೌಕೆಯು ಆಂಧ್ರಪ್ರದೇಶದ ಶ್ರೀಹರಿಕೋಟಾದ ಎಸ್ ಡಿಎಸ್ ಸಿ-ಶಾರ್ ಗೆ ಆಗಮಿಸಿದೆ ಮತ್ತು ಉಡಾವಣಾ ಪ್ಯಾಡ್ ನಲ್ಲಿ ಇರಿಸಲಾಗಿದೆ. ಸೂರ್ಯನನ್ನು ಅಧ್ಯಯನ ಮಾಡಲು, ನಾವು ಆದಿತ್ಯ-ಎಲ್ 1 ಮಿಷನ್ ಅನ್ನು ಯೋಜಿಸಿದ್ದೇವೆ. ಅದು ಸಿದ್ಧವಾಗಿದೆ ಮತ್ತು ಉಡಾವಣಾ ಪ್ಯಾಡ್ ನಲ್ಲಿ ಇರಿಸಲಾಗಿದೆ. ಇದನ್ನು ಸೆಪ್ಟೆಂಬರ್ 2 ರಂದು ಉಡಾಯಿಸುವ ಸಾಧ್ಯತೆಯಿದೆ ಎಂದು ದೇಸಾಯಿ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದರು.

ಉಡಾವಣೆಯ ನಂತರ ಆ ಬಾಹ್ಯಾಕಾಶ ನೌಕೆಯನ್ನು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ ದೂರದಲ್ಲಿರುವ ಸೂರ್ಯ-ಭೂಮಿ ವ್ಯವಸ್ಥೆಯ ಲ್ಯಾಗ್ರೇಂಜ್ ಪಾಯಿಂಟ್ 1 (ಎಲ್ 1) ಸುತ್ತಲೂ ಹ್ಯಾಲೋ ಕಕ್ಷೆಯಲ್ಲಿ ಇರಿಸಲಾಗುವುದು ಎಂದು ಇಸ್ರೋ ತಿಳಿಸಿದೆ. ಸೂರ್ಯನ ಮೇಲೆ ನಿಗಾ ಇಡಲು ಸ್ಥಳ ಆಯ್ಕೆ ಪ್ರಮುಖವಾಗಿದೆ ಎಂದು ಇಸ್ರೋ ವಿವರಿಸಿದೆ.

ಈ ಸುದ್ದಿಯನ್ನೂ ಓದಿ: Yadgiri News: ಚಂದ್ರಯಾನ-3 ಯಶಸ್ವಿ; ಯಾದಗಿರಿಯಲ್ಲಿ ಇಬ್ಬರು ಮಕ್ಕಳಿಗೆ ವಿಕ್ರಮ್‌, ಪ್ರಜ್ಞಾನ್‌ ಹೆಸರು ನಾಮಕರಣ

ಬಾಹ್ಯಾಕಾಶ ಹವಾಮಾನದ ಮೇಲೆ ಸೌರ ಚಟುವಟಿಕೆಗಳ ಪರಿಣಾಮವನ್ನು ಮೇಲ್ವಿಚಾರಣೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಈ ಮಿಷನ್ ಮೂಲಕ, ಕರೋನಲ್ ತಾಪನ, ಕರೋನಲ್ ಮಾಸ್ ಎಜೆಕ್ಷನ್, ಪ್ರಿ-ಫ್ಲೇರ್ ಮತ್ತು ಜ್ವಾಲೆ ಚಟುವಟಿಕೆಗಳು ಮತ್ತು ಅವುಗಳ ಗುಣಲಕ್ಷಣಗಳು, ಬಾಹ್ಯಾಕಾಶ ಹವಾಮಾನದ ಡೈನಾಮಿಕ್ಸ್, ಕಣಗಳು ಮತ್ತು ಕ್ಷೇತ್ರಗಳ ಪ್ರಸರಣ ಇತ್ಯಾದಿ ವಿಷಯಗಳನ್ನು ಇಸ್ರೊ ಅಧ್ಯಯನ ಮಾಡಲಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version