ಶ್ರೀಹರಿಕೋಟ: ಭಾರತದ ಮಹತ್ವಾಕಾಂಕ್ಷೆಯ ಸಿಬ್ಬಂದಿಸಹಿತ ಬಾಹ್ಯಾಕಾಶ ಯಾನ ಯೋಜನೆ ʼಗಗನಯಾನʼದ (Gaganyaan Mission) ಮೊದಲ ಪರೀಕ್ಷಾರ್ಥ ಉಡಾವಣೆಯನ್ನು (test launch) ಕೊನೆಯ ಕ್ಷಣದಲ್ಲಿ ಮುಂದೂಡಲಾಯಿತು.
ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC) ಬೆಳಿಗ್ಗೆ 8:45ಕ್ಕೆ ಉಡಾವಣೆ ನಿಗದಿಯಾಗಿತ್ತು. ಮೊದಲ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1 (TV-D1) ಕ್ರ್ಯೂ ಎಸ್ಕೇಪ್ ಸಿಸ್ಟಮ್ (CES) ಕಾರ್ಯಕ್ಷಮತೆಯನ್ನು ಪ್ರದರ್ಶಿಸಬೇಕಿತ್ತು. ಆದರೆ ರಾಕೆಟ್‌ನ ತಾಂತ್ರಿಕ ತೊಂದರೆಗಳ ಕಾರಣದಿಂದ ಇಂದಿನ ಪರೀಕ್ಷಾರ್ಥ ಉಡಾವಣೆಯನ್ನು ಸ್ಥಗಿತಗೊಳಿಸಿ, ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಈ ಕುರಿತ ಕ್ಲುಪ್ತ ಮಾಹಿತಿಯನ್ನು ಇಸ್ರೋ (ISRO) ಅಧ್ಯಕ್ಷ ಎಸ್. ಸೋಮನಾಥ್ (S Somanath) ಹಂಚಿಕೊಂಡರು. ನೌಕೆ ಸುರಕ್ಷಿತವಾಗಿದೆ. ಆದರೆ ತಾಂತ್ರಿಕ ತೊಂದರೆಗಳಿಂದಾಗಿ ಇಂದಿನ ಉಡಾವಣೆ ರದ್ದುಪಡಿಸಲಾಗಿದೆ. ಇಂಜಿನ್‌ನಲ್ಲಿ ಸಾಕಷ್ಟು ವೇಗದಲ್ಲಿ ಇಗ್ನಿಷನ್ ಆಗಿಲ್ಲ. ತೊಂದರೆಯೇನು ಎಂದು ಶೋಧಿಸಿದ ಬಳಿಕ ಅದನ್ನು ಸರಿಪಡಿಸಿ ಮುಂದಿನ ಪ್ರಯತ್ನ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಕ್ರೂ ಎಸ್ಕೇಪ್ ಸಿಸ್ಟಮ್ ಗಗನಯಾನ ಯೋಜನೆಯ ಬಹುದೊಡ್ಡ ಭಾಗವಾಗಿದೆ. ಡೈನಾಮಿಕ್ ಪ್ರೆಶರ್ ಹಾಗೂ ಟ್ರಾನ್ಸಾನಿಕ್ ಕಂಡಿಶನ್‌ಗಳಲ್ಲಿಯೂ ಇದು ಕಾರ್ಯನಿರ್ವಹಿಸಬೇಕು. ಇದೇ ಕಾರಣಕ್ಕೆ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಒಟ್ಟು 4 ಪರೀಕ್ಷಾರ್ಥ ಉಡಾವಣೆ ನಡೆಯಬೇಕಕಿದೆ.
ಪರೀಕ್ಷೆಯ ಉದ್ದೇಶಗಳೇನು?
- ಸುರಕ್ಷತೆಯ ಖಾತ್ರಿ: ವಿವಿಧ ಪರೀಕ್ಷೆಗಳನ್ನು ಕೈಗೊಳ್ಳುವುದರಿಂದ, ಕ್ರ್ಯೂ ಎಸ್ಕೇಪ್ ಸಿಸ್ಟಮ್ ಸೇರಿದಂತೆ ಎಲ್ಲ ವ್ಯವಸ್ಥೆಗಳು ಉದ್ದೇಶಿತ ರೀತಿಯಲ್ಲಿ ಕಾರ್ಯಾಚರಿಸುತ್ತವೆಯೇ ಅನ್ನೋದು ಖಾತ್ರಿಯಾಗಲಿದೆ.ಇದು ಗಗನಯಾತ್ರಿಗಳ ಸುರಕ್ಷತೆಯನ್ನ ಖಚಿತಪಡಿಸುತ್ತೆ.
- ತಂತ್ರಜ್ಞಾನದ ಖಚಿತತೆ : ಪರೀಕ್ಷೆಗಳನ್ನು ನಡೆಸುವ ಮೂಲಕ ಮಾನವ ಸಹಿತ ಗಗನಯಾತ್ರೆ ಕೈಗೊಳ್ಳಲು ಅವಶ್ಯಕವಾದ ಜೀವ ಬೆಂಬಲ ವ್ಯವಸ್ಥೆ ಹಾಗೂ ಬಾಹ್ಯಾಕಾಶ ಕ್ಯಾಪ್ಸೂಲ್ ಸೇರಿದಂತೆ ವಿವಿಧ ಆಧುನಿಕ ತಂತ್ರಜ್ಞಾನಗಳ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯ.
- ಅಪಾಯಗಳನ್ನ ತಗ್ಗಿಸುವುದು : ಸಮರ್ಪಕವಾಗಿ ಪರೀಕ್ಷೆಗಳನ್ನು ಕೈಗೊಳ್ಳುವುದರಿಂದ, ಸಂಭಾವ್ಯ ಸಮಸ್ಯೆಗಳು ಹಾಗೂ ಅಪಾಯಗಳನ್ನು ಗುರುತಿಸಿ, ನೈಜ ಮಾನವ ಸಹಿತ ಯೋಜನಾ ಜಾರಿಗೂ ಮುನ್ನವೇ ಅದನ್ನು ಸರಿಪಡಿಸಲು ಸಾಧ್ಯ.
- ಸಿಬ್ಬಂದಿ ತರಬೇತಿ : ಸಂಪೂರ್ಣ ಪರೀಕ್ಷೆಗಳನ್ನು ನಡೆಸುವುದರಿಂದ, ಗಗನಯಾತ್ರಿಗಳು ಮತ್ತು ಭೂ ಸಿಬ್ಬಂದಿಗಳಿಗೆ ಪರಿಪೂರ್ಣ ತರಬೇತಿ ಲಭಿಸುತ್ತದೆ. ಎಲ್ಲ ಉಪಕರಣಗಳನ್ನು, ಕಾರ್ಯಾಚರಣೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯ.
- ಯೋಜನಾ ಯಶಸ್ಸು: ಎಲ್ಲ ವ್ಯವಸ್ಥೆಗಳು ಸರಿಯಾದ ರೀತಿಯಲ್ಲಿ ಕಾರ್ಯಾಚರಿಸುತ್ತಿವೆ ಎಂದುಖಾತ್ರಿಪಡಿಸಿಕೊಳ್ಳುವುದರಿಂದ, ಯೋಜನೆಯ ಯಶಸ್ಸು ಸಾಧಿಸುವ ಸಾಧ್ಯತೆಗಳು ಹೆಚ್ಚಾಗಿ, ಗಗನಯಾನ ಯೋಜನೆಯ ಗುರಿಗಳನ್ನು ಸಾಧಿಸಲು ನೆರವು.
ಇದನ್ನೂ ಓದಿ: Gaganyaan Mission: ಶನಿವಾರ ಬೆಳಗ್ಗೆ ಗಗನಯಾನದ ‘ಅಬಾರ್ಟ್ ಟೆಸ್ಟ್ ಡೆಮೋ’! ಇಸ್ರೋ ಏನನ್ನು ಪರೀಕ್ಷಿಸಲಿದೆ?