ನವದೆಹಲಿ: ದೇಶೀಯವಾಗಿ ಉತ್ಪಾದಿಸುವ ನೈಸರ್ಗಿಕ ಅನಿಲದ ಬಹುಪಾಲು ಹೊಸ ಬೆಲೆ ಕಾರ್ಯವಿಧಾನ(APM)ವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ (CNG PNG Price) ದೇಶಾದ್ಯಂತ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಮತ್ತು ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG) ಬೆಲೆಯು ಒಂದು ಕೆ.ಜಿಗೆ ಏಳು ರೂಪಾಯಿವರೆಗೆ ಇಳಿಕೆಯಾಗಿದೆ. ಭಾನುವಾರ ಗೇಲ್ ಗ್ಯಾಸ್ ಲಿಮಿಟೆಡ್ ಕಂಪನಿಯು ಸಿಎನ್‌ಜಿ ಹಾಗೂ ಪಿಎನ್‌ಜಿ ಬೆಲೆಯನ್ನು ಇಳಿಕೆ ಮಾಡಿದೆ. ಇದರಿಂದಾಗಿ ಸಿಎನ್‌ಜಿ ವಾಹನಗಳು ಹಾಗೂ ಪಿಎನ್‌ಜಿ ಸೌಲಭ್ಯ ಇರುವ ಗ್ರಾಹಕರಿಗೆ ಭಾರಿ ಅನುಕೂಲವಾಗಲಿದೆ.
ಗೇಲ್ ಗ್ಯಾಸ್ ಲಿಮಿಟೆಡ್ ನಿರ್ಧಾರದಿಂದಾಗಿ ಕರ್ನಾಟಕದಲ್ಲಿ ಸಿಎನ್‌ಜಿ ಬೆಲೆಯು ಏಳು ರೂಪಾಯಿ ಇಳಿಕೆಯಾಗಿದ್ದು, ಈಗ ಒಂದು ಕೆಜಿ ಸಿಎನ್‌ಜಿ ಬೆಲೆ 82.50 ರೂಪಾಯಿ ಆಗಿದೆ. ಬೇರೆ ರಾಜ್ಯಗಳಲ್ಲಿ ಆರು ರೂಪಾಯಿ ಕಡಿಮೆಯಾಗಿದೆ. ಹಾಗೆಯೇ, ಪಿಎನ್‌ಜಿ ಬೆಲೆಯೂ ಕರ್ನಾಟಕದಲ್ಲಿ ಏಳು ರೂಪಾಯಿ ಕಡಿಮೆಯಾಗಿದೆ. ಎಪಿಎಂ (administered price mechanism) ಗ್ಯಾಸ್‌ನಲ್ಲಿನ ಬೆಲೆ ಕಡಿತದ ತಾತ್ಕಾಲಿಕ ಪರಿಣಾಮವು ಪಿಎನ್‌ಜಿ ಮತ್ತು ಸಿಎನ್‌ಜಿ ಗ್ರಾಹಕರಿಗೆ ನೆರವು ಒದಗಿಸುತ್ತಿದೆ.
ಭಾರತದ ಕಚ್ಚಾ ತೈಲದ ಮಾಸಿಕ ಸರಾಸರಿ ಆಮದು ಬೆಲೆಯ ಶೇ.10ರಷ್ಟು ಪ್ರತಿ ಯೂನಿಟ್‌ಗೆ 4 ಡಾಲರ್ ಇದ್ದು, ಮತ್ತು ಅದನ್ನು 6.5 ಡಾಲರ್‌ಗೆ ಮಿತಿಗೊಳಿಸಲಾಗಿದೆ. ಈ ಕ್ರಮವು ಅಡುಗೆಮನೆಗಳಿಗೆ ಸರಬರಾಜು ಮಾಡುವ ಪೈಪ್ಡ್ ನೈಸರ್ಗಿಕ ಅನಿಲ ಮತ್ತು ವಾಹನಗಳಿಗೆ ಪೂರೈಸಲಾಗುವ ಕಂಪ್ರೆಸ್ಡ್ ನೈಸರ್ಗಿಕ ಅನಿಲ ವೆಚ್ಚದಲ್ಲಿ ಶೇ.11ರಷ್ಟು ಕಡಿಮೆಯಾಗಲಿದೆ. ಹಾಗಾಗಿ, ಬೆಲೆಯು ಇಳಿಕೆಯಾಗಿದೆ.
ಕಳೆದ ಬಾರಿಯ ಸಚಿವ ಸಂಪುಟ ಸಭೆಯಲ್ಲಿ ನೈಸರ್ಗಿಕ ಅನಿಲದ ಬೆಲೆಯನ್ನು ಇಳಿಕೆ ಮಾಡುವ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ. ಅದರಂತೆ, ದೇಶಾದ್ಯಂತ ನೈಸರ್ಗಿಕ ಅನಿಲದ ಬೆಲೆಯು ಇಳಿಕೆಯಾಗಿದೆ. ಪಿಎನ್‌ಜಿ ಬೆಲೆಯ ಇಳಿಕೆಯಿಂದ ಈಗ ಒಂದು ಕೆ.ಜಿಗೆ 52.50 ರೂ. ಆಗಿದೆ. ಬೆಂಗಳೂರು ಹಾಗೂ ದಕ್ಷಿಣ ಕನ್ನಡದಲ್ಲಿ 51.50 ರೂಪಾಯಿ ಆಗಿದೆ. ಪಿಎನ್‌ಜಿ ಸೌಲಭ್ಯವು ಕರ್ನಾಟಕದ ಪ್ರತಿಯೊಂದು ಭಾಗದಲ್ಲಿ ಇರದಿದ್ದರೂ, ನಗರಗಳಲ್ಲಿ ವಾಸಿಸುತ್ತಿರುವ ಜನರಿಗೆ ಇದರಿಂದ ಅನುಕೂಲವಾಗಲಿದೆ. ಹಾಗಾಗಿ, ಕೇಂದ್ರ ಸರ್ಕಾರದ ಕ್ರಮವು ಮಹತ್ವ ಪಡೆದಿದೆ. ಭಾನುವಾರದಿಂದ ಹೊಸ ದರವು ಜಾರಿಗೆ ಬಂದಿರುವುದರಿಂದ ಗ್ರಾಹಕರಿಗೆ ಹಣದ ಉಳಿತಾಯವಾಗಲಿದೆ.
ಇದನ್ನೂ ಓದಿ: Tata Punch CNG | ಸಿಎನ್‌ಜಿ ಇಂಧನದ ಪಂಚ್ ಕಾರು ಅನಾವರಣ ಮಾಡಿದ ಟಾಟಾ; ಎನಿದರ ವಿಶೇಷತೆ?