Site icon Vistara News

Kartavyapath | ಹೊಸ ಸಂಸತ್ ಭವನದಲ್ಲಿ ಶ್ರಮಿಕರ ಗ್ಯಾಲರಿ: ಪ್ರಧಾನಿ ನರೇಂದ್ರ ಮೋದಿ

Mo

ನವ ದೆಹಲಿ: ಕರ್ತವ್ಯಪಥ (Kartavyapath) ನಿರ್ಮಾಣದಲ್ಲಿ ಶ್ರಮಿಕರ ಯೋಗದಾನವು ಅತ್ಯಮೂಲ್ಯವಾಗಿದೆ. ಅವರು ಕೇವಲ ಕರ್ತವ್ಯಪಥ ನಿರ್ಮಾಣಕ್ಕೆ ಕೊಡುಗೆ ನೀಡಿಲ್ಲ, ಬದಲಿಗೆ ದೇಶಕ್ಕೆ ಕರ್ತವ್ಯಪಥವನ್ನು ತೋರಿಸಿದ್ದಾರೆ. ನಾನು ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಆ ಅನುಭವ ನನಗಾಯಿತು. ಈ ಹಿನ್ನೆಲೆಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಸಂಸತ್ ಭವನದಲ್ಲಿ ಶ್ರಮಿಕರಿಗಾಗಿಯೇ ಪ್ರತ್ಯೇಕ ಗ್ಯಾಲರಿ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ನವದೆಹಲಿಯಲ್ಲಿ ಗುರುವಾರ ಸಂಜೆ ಮರುಅಭಿವೃದ್ದಿಯಾದ ರಾಜಪಥ(ಈಗ ಕರ್ತವ್ಯಪಥ ಎಂದು ಮರುನಾಮಕರಣ ಮಾಡಲಾಗಿದೆ)ವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, “ಈ ದೇಶದ ಬಡವರು, ಕಾರ್ಮಿಕರು, ಸಾಮಾನ್ಯರಲ್ಲಿ ಭವಿಷ್ಯದ ಭಾರತದ ಬಗ್ಗೆ ಕನಸುಗಳಿವೆ. ಅವರು ತಮ್ಮ ಕನಸುಗಳನ್ನು ಬಲಿಗೊಟ್ಟು, ದೇಶದ ಕನಸನ್ನು ಜೀವಂತ ಮಾಡುತ್ತಿದ್ದಾರೆ. ಆ ಎಲ್ಲ ಶ್ರಮಿಕರಿಗೆ ದೇಶದ ಪರವಾಗಿ ನಾನು ಧನ್ಯವಾದ ಸಲ್ಲಿಸುತ್ತೇನೆ, ಅಭಿನಂದಿಸುತ್ತೇನೆ” ಎಂದರು.

“ಶ್ರಮಿಕರು ಈ ದೇಶದ ಅಭಿವೃದ್ಧಿಗೆ ಗತಿ ನೀಡಿದ್ದಾರೆ. ಕರ್ತವ್ಯಪಥಕ್ಕಾಗಿ ಕೆಲಸ ಮಾಡಿದ ಶ್ರಮಿಕರು ಮತ್ತು ಅವರ ಕುಟುಂಬದ ಸದಸ್ಯರು ಜನವರಿ 26ರ ಗಣ್ಯರಾಜ್ಯೋತ್ಸವ ವೇಳೆ ತನ್ನ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವೇಳೆ ತಿಳಿಸಿದರು.

“ಹೊಸ ಭಾರತದಲ್ಲಿ ಶ್ರಮ ಮತ್ತು ಶ್ರಮಜೀವಿಗಳಿಗೆ ಗೌರವ ನೀಡುವುದು ನಮ್ಮ ಸಂಸ್ಕೃತಿಯ ಭಾಗವಾಗಿ ಮಾರ್ಪಾಡುತ್ತಿದೆ. ನೀತಿಗಳಲ್ಲಿ ಸಂವೇದನಾಶೀಲತೆ ಇದ್ದರೆ, ಅದು ನಿರ್ಣಯಗಳಲ್ಲಿ ಪ್ರತಿಫಲನವಾಗುತ್ತದೆ. ಶ್ರಮದಿಂದಲೇ ಜಯ ಎಂಬುದು ಮಂತ್ರವಾಗುತ್ತದೆ. ಇದಕ್ಕೆ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ದೇಗುಲ ಲೋಕಾರ್ಪಣೆ, ಕುಂಭ ಮೇಳದಲ್ಲಿ ಶ್ರಮಿಕರಿಗೆ ನೀಡಲಾಗುವ ಗೌರವವೇ ಸಾಕ್ಷಿ. ಇತ್ತೀಚೆಗಷ್ಟೇ ಲೋಕಾರ್ಪಣೆಯಾದ ಐಎನ್ಎಸ್ ವಿಕ್ರಾಂತ್ ನಿರ್ಮಾಣದಲ್ಲಿ ಯೋಗದಾನ ನೀಡಿದ ಕಾರ್ಮಿಕರನ್ನು ಹಾಗೂ ಅವರ ಕುುಟಂಬಸ್ಥರನ್ನು ನಾನು ಭೇಟಿ ಮಾಡುವ ಅವಕಾಶ ದೊರೆಯಿತು. ಇದೆಲ್ಲವೂ ಶ್ರಮಿಕರನ್ನು ಗೌರವಿಸುವ ಪರಂಪರೆಯನ್ನು ಸೂಚಿಸುತ್ತದೆ” ಎಂದು ಮೋದಿ ತಿಳಿಸಿದರು.

ಇದನ್ನೂ ಓದಿ | Kartavyapath | ಕರ್ತವ್ಯಪಥ ಭಾರತದ ಪ್ರಜಾಪ್ರಭುತ್ವದ ಜೀವಂತ ಆದರ್ಶ ಮಾರ್ಗ: ಮೋದಿ

Exit mobile version