ಗಾಂಧಿ ಜಯಂತಿಯ ದಿನ (Gandhi Jayanti 2022) ನಾವು ಅವರನ್ನು ಸ್ಮರಿಸುತ್ತೇವೆ, ಪೂಜಿಸುತ್ತೇವೆ. ಸ್ವಾತಂತ್ರಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿ 1908ರಲ್ಲಿಯೇ ಭಾರತಕ್ಕೆ ಎಂತಹ ಸ್ವರಾಜ್ಯ ಬೇಕು ಎಂಬುದನ್ನು ವಿವರಿಸಲು “ಹಿಂದ್ ಸ್ವರಾಜ್ʼʼ ಎಂಬ ಕೃತಿ ಬರೆದಿದ್ದರು. ಲಂಡನ್‌ನಿಂದ ಹಿಂದಿರುಗುವಾಗ ಹಡಗಿನಲ್ಲಿ ಬರೆದ ಕೃತಿ ಇದು. ಎಲ್ಲರಿಂದಲೂ ಮೆಚ್ಚುಗೆ ಪಡೆದ ಪ್ರಶ್ನೋತ್ತರ ಮಾದರಿಯ (ಓದುಗ-ಸಂಪಾದಕ) ಈ ಕೃತಿ ಮೂಲತಃ ಗುಜರಾತಿ ಭಾಷೆಯಲ್ಲಿದೆ. ಆ ನಂತರ ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡಿತು. ಸುಮಾರು 30 ಸಾವಿರ ಪದಗಳನ್ನು ಒಳಗೊಂಡ ಈ ಕೃತಿ ದ್ವೇಷದ ಬದಲು ಪ್ರೀತಿಯನ್ನು ಬೋಧಿಸುತ್ತದೆ. ಹಿಂಸೆಗೆ ಬದಲು ಅತ್ಮತ್ಯಾಗವನ್ನು ಕಲಿಸುತ್ತದೆ. ಪಶುಬಲಕ್ಕೆ ವಿರುದ್ಧವಾಗಿ ಆತ್ಮಬಲವನ್ನು ಇದಿರು ನಿಲ್ಲಿಸುತ್ತದೆ.
ಈ ಕೃತಿಯ 13ನೇ ಅಧ್ಯಾಯದಲ್ಲಿ “ನಿಜವಾದ ಸಭ್ಯತೆ ಎಂಥದು?ʼʼ ಎಂದು ಗಾಂಧೀಜಿಯವರು ವಿವರಿಸಿದ್ದಾರೆ. ಭಾರತೀಯರೆಲ್ಲರೂ ಓದಲೇಬೇಕಾದ ಅಧ್ಯಾಯ ಇದು. ಈ ಅಧ್ಯಾಯವನ್ನು ಇಲ್ಲಿ ನೀಡಲಾಗಿದೆ.
ಓದುಗ: ರೈಲಿನ, ವೈದ್ಯರ, ವಕೀಲರ ಟೀಕೆಯಾಯಿತು. ಸರಿ, ಯಂತ್ರಗಳೇ ಬೇಡ ಎನ್ನುತ್ತೀರಿ ನೀವು. ಹಾಗಾದರೆ ಸಭ್ಯತೆಯೆಂದರೇನು?
ಸಂಪಾದಕ: ಅದಕ್ಕೆ ಉತ್ತರ ಕಷ್ಟವಲ್ಲ. ನಾನು ಭಾರತೀಯ ಸಭ್ಯತೆಗಿಂತ ಹೆಚ್ಚಿನದು ಯಾವುದೂ ಇಲ್ಲವೆಂದು ನಂಬಿದ್ದೇನೆ. ನಮ್ಮ ಪೂರ್ವಜರು ಬಿತ್ತಿದ ಬೀಜಕ್ಕೆ ಸಾಟಿಯಾದುದು ಯಾವುದೂ ಇಲ್ಲ, ರೋಂ ಮಣ್ಣುಗೂಡಿತು, ಗ್ರೀಸೂ ಅಷ್ಟೇ. ಈಜಿಪ್ಟಿನ ಫರೋಹಾ ಸಾಮ್ರಾಜ್ಯ ನಾಶವಾಯಿತು; ಜಪಾನ್ ಪಶ್ಚಿಮದ ವೇಷ ತೊಟ್ಟಿತು; ಚೀನಾದ ಬಗ್ಗೆ ಹೇಳುವಂತಿಲ್ಲ. ಆದರೆ ಹಿಂದೂಸ್ಥಾನ ಮಾತ್ರ ಏಳುತ್ತ ಬೀಳುತ್ತ ಇನ್ನೂ ಭದ್ರವಾಗಿಯೇ ಇದೆ, ಬುಡದಲ್ಲಿ, ರೋಂ ಗ್ರೀಸುಗಳ ವೈಭವ ಈಗಿಲ್ಲ. ಆದರೂ ಯೂರೋಪಿನ ಜನರು ರೋಂ ಗ್ರೀಸುಗಳ ಪಾಠವನ್ನ ಕಲಿಯುತ್ತ ಅವರು, ಮಾಡಿದ ತಪ್ಪುಗಳನ್ನು ನಾವು ಬಿಡೋಣ ಎಂದು ಆಶಿಸುತ್ತಾರೆ.
ಹೀಗಿದೆ ಅವರ ದಯನೀಯ ಸ್ಥಿತಿ. ಇಂಥದರಲ್ಲಿಯೂ ಹಿಂದೂಸ್ಥಾನ ಮಾತ್ರ ಅಚಲವಾಗಿದೆ. ಇದೇ ಅದರ ಶೋಭೆ. ಇಲ್ಲಿನ ಜನರು ಅನಾಗರಿಕರು, ಅಜ್ಞಾನಿಗಳು,ಸೋಮಾರಿಗಳು; ಏನು ಬದಲಾವಣೆ ಮಾಡಬೇಕೆಂದರೂ ಅವರನ್ನು ತಿದ್ದುವುದು ಕಷ್ಟ ಎಂದು ಹಿಂದೂಸ್ಥಾನದ ಮೇಲೆ ಆರೋಪವಿದೆ. ಆದರೆ ಇದು ನಮ್ಮ ದೋಷವಲ್ಲ, ಗುಣ, ಅನುಭವದ ಒರೆಗಲ್ಲಿಗೆ ತಿಕ್ಕಿ ಸರಿಯೆಂದು ಕಂಡು ಕೊಂಡದನ್ನು ಬದಲಿಸೋಣವೆ? ಹಿಂದೂಸ್ಥಾನಕ್ಕೆ ಬುದ್ಧಿ ಹೇಳುವವರು ಬಹಳ ಜನ. ಆದರೂ ಹಿಂದೂಸ್ಥಾನ ಅವಿಚಲಿತವಾಗಿ ಇದೆ. ಇದೇ ಅದರ ಸೊಬಗು; ಇದೇ ನಮ್ಮ ಆಶಾಕಿರಣ.
ಮನುಷ್ಯನಿಗೆ ಕರ್ತವ್ಯ ತೋರಿಸುವ ಆಚಾರ ವ್ಯವಹಾರವೇ ಸಭ್ಯತೆ, ಕರ್ತವ್ಯ ಪಾಲನೆ ನೀತಿಪಾಲನೆಯೆ. ಅದಕ್ಕೇ ಇನ್ನೊಂದು ಹೆಸರು ಇದು, ನೀತಿಪಾಲನೆ ಯೆಂದರೆ ಇಂದ್ರಿಯನಿಗ್ರಹ, ರಾಗದ್ವೇಷಗಳ ಸಂಯಮ. ಹಾಗೆ ನಡೆದರೆ ನಮ್ಮನ್ನು ನಾವು ಅರಿತುಕೊಳ್ಳುತ್ತೇವೆ. ಸಭ್ಯತೆ ಎಂದರೆ ಒಳ್ಳೆಯ ನಡತೆ, ಈ ವ್ಯಾಖ್ಯೆ ಸರಿಯೆಂದರೆ, ಅನೇಕ ಲೇಖಕರು ಹೇಳಿರುವಂತೆ ಹಿಂದೂಸ್ಥಾನ ಯಾರಿಂದಲೂ ಏನೂ ಕಲಿಯಬೇಕಾಗಿಲ್ಲ. ಅದು ಸರಿ. ಮನುಷ್ಯನ ಮನಸ್ಸು ಅತಿ ಚಂಚಲವೆಂಬುದು ನಮಗೆ ಗೊತ್ತು. ಕೊಟ್ಟಷ್ಟೂ ಬೇಕು ಎನ್ನುತ್ತದೆ, ಸಾಲದು ಎನ್ನುತ್ತದೆ. ಇಂದ್ರಿಯಗಳನ್ನು ಎಷ್ಟು ಸಡಿಲಬಿಟ್ಟರೆ ಅಷ್ಟು ಭೋಗಲಾಲಸೆ ಹೆಚ್ಚುತ್ತದೆ.
ಆದುದರಿಂದಲೇ ನಮ್ಮ ಪೂರ್ವಜರು ಅದಕ್ಕೆ ಮಿತಿ ಮೇರೆ ಕಲ್ಪಿಸಿದ್ದರು. ಸುಖ ಎಂಬುದು ನಮ್ಮ ಮನಸ್ಸಿನದೇ ಒಂದು ಸೃಷ್ಟಿ ಎಂಬುದನ್ನು ಅವರು ಅರಿತಿದ್ದರು. ಸಿರಿವಂತನಾದುದರಿಂದ ಒಬ್ಬನು ಸುಖಿಯಲ್ಲ. ಬಡವನಾದುದರಿಂದ ಒಬ್ಬನು ದುಃಖಿಯಲ್ಲ. ಎಷ್ಟೋ ಸಂದರ್ಭಗಳಲ್ಲಿ ಸಿರಿವಂತನೇ ದುಃಖಿ, ಬಡವನೇ ಸುಖಿ ಆಗಿರುವುದು ಕಾಣಬರುತ್ತದೆ. ಜನಸ್ತೋಮ ಯಾವಾಗಲೂ ಬಡವರಾಗಿಯೇ ಇರುತ್ತಾರೆ. ಇದನ್ನೆಲ್ಲ ನೋಡಿ ತಿಳಿದೇ ನಮ್ಮ ಹಿರಿಯರು ಭೋಗವಿಲಾಸಕ್ಕೆ ಬಲಿಯಾಗಬೇಡಿ ಎಂದು ನಮಗೆ ಹೇಳಿದ್ದಾರೆ.
ಸಾವಿರಾರು ವರ್ಷಗಳಿಂದ ಅದೇ ನೇಗಿಲನ್ನೇ ನಾವು ಬಳಸುತ್ತಿದ್ದೇವೆ. ಸಾವಿರಾರು ವರ್ಷಗಳ ಹಿಂದೆ ಇದ್ದಂಥ ಗುಡಿಸಲೇ ಈಗಲೂ ಇದೆ. ನಮ್ಮ ದೇಶೀಶಿಕ್ಷಣ ಮೊದಲಿನ ಹಾಗೆಯೇ ಇದೆ. ನಮ್ಮಲ್ಲಿ ಈ ಸರ್ವನಾಶಕ ಸ್ಪರ್ಧೆಯಿರಲಿಲ್ಲ. ಪ್ರತಿಯೊಬ್ಬನೂ ತನ್ನ ತನ್ನ ಕಸಬನ್ನು ನಡೆಸಿಕೊಂಡು ಹೋಗುತ್ತಿದ್ದ, ನಿಯಮಿತವಾದ ಪ್ರತಿಫಲ ಪಡೆಯುತ್ತಿದ್ದ. ಯಂತ್ರಗಳನ್ನು ಮಾಡುವುದು ನಮಗೆ ಗೊತ್ತಿರಲಿಲ್ಲವೆಂದಲ್ಲ. ಆದರೆ ಯಂತ್ರದ ಮಾಯೆಗೆ ಸಿಲುಕಿದರೆ ಮನುಷ್ಯ ಅದರ ದಾಸನಾಗಿ ಅನೀತಿಯ ಪಾಲಾಗುತ್ತಾನೆ ಎಂಬುದನ್ನು ನಮ್ಮ ಹಿರಿಯರು ಕಂಡಿದ್ದರು. ಆದುದರಿಂದ ದೀರ್ಘ ಚಿಂತನೆ ಮಾಡಿ, ನಮ್ಮ ಕೈಕಾಲುಗಳಿಂದ ಎಷ್ಟು ಸಾಧ್ಯವೋ ಏನು ಸಾಧ್ಯವೋ ಅದನ್ನೇ ಮಾಡಬೇಕು ಎಂದು ನಿರ್ಣಯಿ ಸಿದರು. ನಮ್ಮ ಕೈಕಾಲುಗಳನ್ನು ಸರಿಯಾಗಿ ಉಪಯೋಗಿಸುವುದೇ ಆಯುರಾರೋಗ್ಯ ಸುಖಸಂತೋಷಗಳಿಗೆ ದಾರಿ ಎಂದು ಅವರು ಅರಿತಿದ್ದರು. ದೊಡ್ಡ ದೊಡ್ಡ ಪಟ್ಟಣಗಳು ಬರೀ ಜಂಜಾಟ, ವ್ಯರ್ಥ ಮಾಯಾಜಾಲ; ಅದರಲ್ಲಿನ ಜನಕ್ಕೆ ಸುಖವಿಲ್ಲ ಎಂದು ಅವರು ತೀರ್ಮಾನಿಸಿದರು.
ಆ ಮಾಯಾ ಬಜಾರುಗಳಲ್ಲಿ ದುರಾಚಾರ, ದುರ್ನಿತಿ, ಸೂಳೆಗಾರಿಕೆ, ಜೂಜು ಹೆಚ್ಚಾಗಿ ಬೆಳೆದು, ಕಳ್ಳಕಾಕರಿಗೆ ದರೋಡೆಗಾರರ ತಂಡಗಳಿಗೆ ಅವು ನೆಲೆವೀಡಾಗುತ್ತವೆ. ಬಡವರನ್ನು ಭಾಗ್ಯವಂತರು ಸುಲಿಯುತ್ತಾರೆ ಎಂಬುದನ್ನೂ ಅರಿತುಕೊಂಡಿದ್ದರು. ಅದರಿಂದ ಚಿಕ್ಕ ಚಿಕ್ಕ ಹಳ್ಳಿಗಳೇ ಅವರಿಗೆ ತೃಪ್ತಿದಾಯಕ ವಾಗಿದ್ದವು. ರಾಜರು, ರಾಜದಂಡ, ಅವರ ಖಡ್ಗ ಎಲ್ಲವೂ ನೈತಿಕ ಬಲಕ್ಕೆ ಸಮನಲ್ಲ ಎಂಬುದು ಅವರಿಗೆ ತಿಳಿದಿತ್ತು. ಹೀಗಾಗಿ ರಾಜಧಿರಾಜರಿಗಿಂತ ಋಷಿಮುನಿಗಳು ಸಾಧುಶರಣರು ಹೆಚ್ಚು ಎಂದು ಅವರ ಅಭಿಪ್ರಾಯವಾಗಿತ್ತು, ಇಂಥ ರಚನೆಯುಳ್ಳ ರಾಷ್ಟ್ರ ಯಾರಿಂದ ಏನು ಕಲಿಯಬೇಕು? ಇತರರಿಗೆ ಕಲಿಸುವ ರಾಷ್ಟ್ರ ಇದು. ಈ ರಾಷ್ಟ್ರದಲ್ಲಿಯೂ ವೈದ್ಯರು, ವಕೀಲರು, ಕೋರ್ಟು ಕಚೇರಿ ಎಲ್ಲವೂ ಇತ್ತು. ಎಲ್ಲಕ್ಕೂ ಒಂದು ಮಿತಿಯಿತ್ತು. ಈ ವೃತ್ತಿ ಯಾವುದೂ ಉಳಿದುದಕ್ಕಿಂತ ಶ್ರೇಷ್ಠ ಎಂದು ಯಾರೂ ತಿಳಿದಿರಲಿಲ್ಲ. ಅಲ್ಲದೆ ಆ ವಕೀಲರು, ವೈದ್ಯರು ಜನರನ್ನು ಕೊಳ್ಳೆ ಹೊಡೆಯುತ್ತಿರಲಿಲ್ಲ; ಜನತೆಯ ಆಶ್ರಿತರು ಅವರು, ಆಶ್ರಯದಾತರಲ್ಲ ಎಂದು ಎಲ್ಲರೂ ತಿಳಿದಿದ್ದರು. ನ್ಯಾಯ ತೃಪ್ತಿಕರವಾಗಿತ್ತು.
ಸಾಧಾರಣವಾಗಿ ಯಾರೂ ನ್ಯಾಯಾಲಕ್ಕೆ ಹೋಗುತ್ತಿರಲಿಲ್ಲ. ಕೋರ್ಟುಗಳಿಗೆ ಜನರನ್ನು ಸೆಳೆಯಲು ದಳ್ಳಾಳಿಗಳು ಯಾರೂ ಇರಲಿಲ್ಲ. ಅಂಥದೇನಾದರೂ ಇದ್ದರೆ, ರಾಜಧಾನಿಗಳಲ್ಲಿ ಮಾತ್ರ ಸಾಮಾನ್ಯ ಜನತೆ ತಮ್ಮ ಬೇಸಾಯ ಮಾಡುತ್ತ ಸ್ವತಂತ್ರವಾಗಿದ್ದರು. ಅವರದು ನಿಜವಾಗಿಯೂ ಸ್ವರಾಜ್ಯ ಈಗಲೂ ಈ ದುಷ್ಟ ಆಧುನಿಕ ನಾಗರಿಕತೆ ಎಲ್ಲಿ ವ್ಯಾಪಿಸಿಲ್ಲವೋ ಅಲ್ಲಿ ಹಿಂದೂಸ್ಥಾನ ಮೊದಲಿನಂತೆಯೇ ಇದೆ. ಆ ಪ್ರದೇಶಗಳ ಜನತೆ ನಿಮ್ಮ ಹೊರ ಆಡಂಬರವನ್ನು ನೋಡಿ ನಗುತ್ತಾರೆ. ಇಂಗ್ಲಿಷರು ಅವರನ್ನು ಅಳುತ್ತಿಲ್ಲ. ನೀವೂ ಎಂದಿಗೂ ಅವರನ್ನು ಆಳಲಾರಿರಿ. ನಾನು ಯಾರ ಮಾತನ್ನಾಡುತ್ತಿದ್ದೇವೋ ಅವರು ನಮ್ಮನ್ನು ಅರಿಯರು, ನಾವು ಅವರನ್ನು ಅರಿಯೆವು, ದೇಶ ಪ್ರೇಮವಿರುವ ನಿಮ್ಮಂಥವರು ನಮ್ಮ ದೇಶದಲ್ಲಿ ರೈಲಿಗೆ ಇನ್ನೂ ಎಟುಕದ ಪ್ರದೇಶಗಳಿಗೆ ಹೋಗಿ ಆರು ತಿಂಗಳು ವಾಸಮಾಡಿ ಎಂದು ನಾನು ಸಲಹೆ ಕೊಡುತ್ತೇನೆ. ಆಮೇಲೆ ನೀವು ನಿಜವಾದ ದೇಶಭಕ್ತಿ ಕಲಿತೀರಿ; ಆಗ ಸ್ವರಾಜ್ಯದ ಮಾತನ್ನು ಆಡಿ.
ಯಾವುದನ್ನು ನಾನು ನಿಜವಾದ ಸಭ್ಯತೆ ಎನ್ನುತ್ತೇನೋ ತಿಳಿಯಿತಲ್ಲ. ಈ ಪರಿಸ್ಥಿತಿಯನ್ನೆಲ್ಲ ಬದಲಿಸಬೇಕೆನ್ನುವವರು ಹಿಂದೂಸ್ಥಾನದ ಶತ್ರುಗಳು.
ಓದುಗ: ನೀವು ಹೇಳಿದ ಹಾಗೆ ಹಿಂದೂಸ್ತಾನ ಇದ್ದಿದ್ದರೆ ಸರಿ, ಆದರೆ ಈ ನೂರಾರು ಬಾಲವಿಧವೆಯರು, ಎರಡು ವರ್ಷಕ್ಕೆ ಮದುವೆಯಾದ ಮಕ್ಕಳು, ಹನ್ನೆರಡು ವರ್ಷಕ್ಕೆ ಮಕ್ಕಳನ್ನು ಹೆತ್ತ ಬಾಲಮಾತೃ ಗೃಹಿಣಿಯರು, ಬಹುಪತಿಗಳುಳ್ಳ ಸತಿಯರು, ನಿಯೋಗ ಪದ್ಧತಿ, ಧರ್ಮ ಹೆಸರಿನಲ್ಲಿ ಕುರಿ ಮೇಕೆಗಳ ಪ್ರಾಣಿ ಬಲಿ, ಇದೆಲ್ಲವೂ ಇದೆಯಲ್ಲ ಹಿಂದೂಸ್ಥಾನದಲ್ಲಿ? ಇವು ನೀವು ವರ್ಣಿಸಿದ ಸಭ್ಯತೆಯ ಲಕ್ಷಣಗಳೇನು?
ಸಂಪಾದಕ: ನೀವು ತಪ್ಪು ಮಾಡುತ್ತಿದ್ದೀರಿ. ನೀವು ತೋರಿಸಿದ ದೋಷಗಳೆಲ್ಲವೂ ದೋಷಗಳೇ. ಇವು ಪುರಾತನ ಸಭ್ಯತೆ ಎಂದು ಯಾರೂ ತಿಳಿದಿಲ್ಲ. ಆ ಸಭ್ಯತೆಗೂ ಮೀರಿ ಈ ದೋಷ ನಿಂತಿದೆ. ಇದನ್ನು ನಿವಾರಿಸಲು ಸದಾ ಪ್ರಯತ್ನ ನಡೆದಿದೆ. ಮುಂದೆಯೂ ನಡೆಯುತ್ತದೆ. ಈ ದೋಷಗಳನ್ನು ತೊಳೆಯಲು ನಮ್ಮೊಳಗೆ ಈಗ ಆಗಿರುವ ಹೊಸ ಜಾಗೃತಿಯನ್ನು ಉಪಯೋಗಿಸಬಹುದು. ಆದರೆ ಆಧುನಿಕ ನಾಗರಿಕತೆಯ ಲಕ್ಷಣಗಳೆಂದು ನಾನು ತೋರಿಸಿದುದನ್ನೆಲ್ಲ ಹಾಗೆಂದು ಅದರ ಭಕ್ತರೇ ಒಪ್ಪಿದ್ದಾರೆ. ಭಾರತೀಯ ಸಭ್ಯತೆಯನ್ನು ಅದರ ಭಕ್ತರು ಹೀಗೆ ವರ್ಣಿಸಿದ್ದಾರೆ. ಯಾವ ಸಭ್ಯತೆಯಿಂದಲೂ ಯಾವ ದೇಶದಲ್ಲಿಯೂ ಸಮಸ್ತರೂ ಪೂರ್ಣತೆ ಪಡೆದಿಲ್ಲ. ಆದರೆ, ಭಾರತೀಯ ಸಭ್ಯತೆಯ ಪ್ರವೃತ್ತಿ ನೈತಿಕ ವಿಕಾಸಕ್ಕೆ ಪಶ್ಚಿಮದ ನಾಗರಿಕತೆಯ ಪ್ರವೃತ್ತಿ ಅನೈತಿಕತೆಗೆ, ಪ್ರೋತ್ಸಾಹ. ಪಶ್ಚಿಮದ ನಾಗರಿಕತೆ ನಾಸ್ತಿಕವಾದುದು, ಭಾರತೀಯ ಸಭ್ಯತೆ ಆಸ್ತಿಕವಾದುದು, ಇದನ್ನು ತಿಳಿದು ಹಿಂದೂಸ್ಥಾನದ ಹಿತೈಷಿಗಳು ಪ್ರಾಚೀನ ಭಾರತೀಯ ಸಭ್ಯತೆ ಯನ್ನು, ಮಗು ತಾಯಿಯ ಎದೆಯನ್ನು ಅವಚಿಕೊಳ್ಳುವಂತೆ, ಅಷ್ಟು ಶ್ರದ್ಧೆಯಿಂದ ಅಪ್ಪಿಕೊಳ್ಳಬೇಕು.
ಇದನ್ನೂ ಓದಿ | Amrit Mahotsav | ಗಾಂಧೀಜಿ ಪ್ರೇರಣೆಯಾದರೂ ಕ್ರಾಂತಿಕಾರಿಯಾಗಿದ್ದ ಅಣ್ಣು ಗುರೂಜಿ!