Site icon Vistara News

Gandhi Jayanti 2024: `ಗಾಂಧಿ ಕ್ಲಾಸ್‌’ ಹೆಸರು ಬಂದಿದ್ದು ಹೇಗೆ?

Mahatma Gandhi How did the name Gandhi Class come about

ಇಂದು ಗಾಂಧಿ ಜಯಂತಿ. ಮಹಾತ್ಮಾ ಗಾಂಧಿ ಯವರ (Mahatma Gandhi) 155ನೆಯ ಹುಟ್ಟುಹಬ್ಬ. ಗುಜರಾತಿನ ಪೋರಬಂದರಿನಲ್ಲಿ ಹುಟ್ಟಿದ ಒಬ್ಬ ಸಾಮಾನ್ಯ ವ್ಯಕ್ತಿ ಇಡೀ ಜಗತ್ತನ್ನು ಪ್ರಭಾವಿಸಿದ್ದು, ಸಾಮಾನ್ಯ ಸಂಗತಿ ಅಲ್ಲ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ (Fight for Indian Independence) 33 ಕೋಟಿ ಭಾರತೀಯರು ಗಾಂಧಿಯವರ ಮಾತುಗಳನ್ನು ಆಲಿಸುತ್ತಿದ್ದರು ಅಂದರೆ ಅದೂ ಆಶ್ಚರ್ಯವೇ. ಅದರ ಬೆಳಕಿನಲ್ಲಿ ಗಾಂಧಿಯವರ ಬದುಕಿನ ಕೆಲವು ರೋಚಕ ಸಂಗತಿಗಳು ಇಲ್ಲಿವೆ.

1. ಗಾಂಧೀಜಿ ಹುಟ್ಟು ಹಬ್ಬವನ್ನು ವಿಶ್ವ ಅಹಿಂಸಾ ದಿನವಾಗಿ (World Non violence day) ಜಗತ್ತು ಆಚರಿಸುತ್ತದೆ. 2007ರಿಂದ ವಿಶ್ವ ಸಂಸ್ಥೆಯು ಗಾಂಧಿಗೆ ಕೊಟ್ಟ ಗೌರವ ಇದು.

2. ಜಗತ್ತಿನ ಅತೀ ಹೆಚ್ಚು ದೇಶಗಳು ಗಾಂಧಿಯವರ ಫೋಟೊ ಇರುವ ಸ್ಟಾಂಪ್ ಬಿಡುಗಡೆ ಮಾಡಿವೆ. ಈ ದಾಖಲೆಯಲ್ಲಿ ಕೂಡ ಗಾಂಧಿ ಎಲ್ಲರಿಗಿಂತ ಮುಂದೆ ಇದ್ದಾರೆ.

3. ಗಾಂಧಿಯವರನ್ನು ಬ್ರಿಟಿಷರು ‘ಅರೆ ನಗ್ನ ಫಕೀರ’ ಎಂದು ಕರೆದರು. ಗಾಂಧಿಯವರ ಡ್ರೆಸ್ ಕೋಡ್ ಹಾಗೆಯೇ ಇತ್ತು. ಅದೇ ಡ್ರೆಸ್ಸಲ್ಲಿ ಗಾಂಧಿ ಇಂಗ್ಲೆಂಡಿಗೆ ದುಂಡು ಮೇಜಿನ ಪರಿಷತ್ತಿಗೆ ಹೋಗಿ ಬಂದರು.

4. ಗಾಂಧಿ ಜೊತೆ ಒಂದೇ ಟೇಬಲ್ ಮೇಲೆ ಊಟ ಮಾಡಲು ಇಂಗ್ಲೆಂಡ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ (Winston Churchil) ಒಪ್ಪಲಿಲ್ಲ. ಗಾಂಧೀಜಿ ಇದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.

5. ಅಹಿಂಸೆ ಮತ್ತು ಸತ್ಯಾಗ್ರಹ (Nonviolence and Satyagrah) ಎಂಬ ಎರಡು ಅಸ್ತ್ರಗಳನ್ನು ಗಾಂಧೀಜಿ ಸ್ವಾತಂತ್ರ್ಯ ಹೋರಾಟದಲ್ಲಿ ಬಳಸಿದರು. ಅದರಲ್ಲಿಯೂ ಸತ್ಯಾಗ್ರಹ ಎಂಬ ಹೋರಾಟವು ಜಗತ್ತಿನ ಹಲವು ಮಹಾ ನಾಯಕರ ಗಮನ ಸೆಳೆಯಿತು. ಮುಂದೆ ಹಲವು ದೇಶಗಳ ಸ್ವಾತಂತ್ರ್ಯ ಹೋರಾಟಕ್ಕೆ ಸತ್ಯಾಗ್ರಹವು ಪ್ರೇರಣೆ ಕೊಟ್ಟಿತು.

6. ಮಾರ್ಟಿನ್ ಲೂಥರ್ ಕಿಂಗ್ ಅವರು ಗಾಂಧೀಜಿಯವರನ್ನು ತನ್ನ ಐಕಾನ್ ಆಗಿ ಆರಿಸಿಕೊಂಡಿದ್ದರು. ಅವರ ಕಚೇರಿಯಲ್ಲಿ ಅವರ ಎದುರಿನ ಗೋಡೆಯಲ್ಲಿ ಗಾಂಧಿಯ ಫೋಟೊ ಇತ್ತು.

7. ಯಾವ ದಕ್ಷಿಣ ಆಫ್ರಿಕ ಗಾಂಧಿ ಅವರನ್ನು ಕರಿಯ (ಬ್ಲಾಕ್) ಎಂಬ ಕಾರಣಕ್ಕೆ ಟ್ರೈನಿಂದ ಹೊರಗೆ ದೂಡಿ ಅಪಮಾನ ಮಾಡಿತ್ತಾ, ಅದೇ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮುಂದೆ ಗಾಂಧಿ ಪ್ರೇರಣೆ ಕೊಟ್ಟರು.

8. ಗಾಂಧಿಯವರು ಮದ್ಯಪಾನ ನಿಷೇಧ ಮತ್ತು ಗೋಹತ್ಯೆ ನಿಷೇಧಗಳ ಪರವಾಗಿ ಬಲವಾಗಿ ನಿಂತಿದ್ದರು.

9. ಜಗತ್ತಿನ ಅತ್ಯಂತ ಜನಪ್ರಿಯ ಪತ್ರಿಕೆ ‘ಟೈಮ್ಸ್ ಮ್ಯಾಗಜೀನ್’ ಗಾಂಧಿಯವರನ್ನು ‘ವರ್ಷದ ವ್ಯಕ್ತಿ ಪ್ರಶಸ್ತಿ’ (Times man of the year) ಮೂಲಕ ಗೌರವಿಸಿತು. ಆ ಗೌರವ ಪಡೆದ ಮೊದಲ ಮತ್ತು ಏಕೈಕ ಭಾರತೀಯ ಅಂದರೆ ಅದು ಗಾಂಧಿ.

10. ವಿದೇಶಗಳಲ್ಲಿ ಗಾಂಧಿ ಹೆಸರಿನ 48 ರಸ್ತೆಗಳು ಇವೆ. ಭಾರತದಲ್ಲಿ 53 ದೊಡ್ಡ ರಸ್ತೆಗಳು ಗಾಂಧಿ ಅವರ ಹೆಸರು ಪಡೆದಿವೆ. ಇನ್ನು ಗಾಂಧಿ ಭವನ್, ಗಾಂಧಿ ಪ್ರತಿಮೆ, ಗಾಂಧಿ ಮೈದಾನ, ಗಾಂಧಿ ಚೌಕ….ಇವುಗಳನ್ನು ಲೆಕ್ಕ ಮಾಡಲು ಸಾಧ್ಯವೇ ಇಲ್ಲ!

11. ಗಾಂಧಿಯವರ ಹೆಸರು ನೊಬೆಲ್ ಶಾಂತಿ ಪುರಸ್ಕಾರಕ್ಕೆ (Nobel Peace Award) ಐದು ಬಾರಿ ಶಿಫಾರಸು ಆಗಿತ್ತು. ಆದರೆ ಅದರದ್ದೇ ಒಂದು ಕಾರಣಕ್ಕೆ ಅದು ನಿರಾಕರಣೆ ಆಯ್ತು.

12. ಜಾಗತಿಕ ಅತೀ ದೊಡ್ಡ ಫೌಂಡೇಶನ್ ಆದ ‘ಹೆನ್ರಿ ಫೋರ್ಡ್ ಫೌಂಡೇಶನ್’ ಗಾಂಧಿಯವರನ್ನು ತನ್ನ ಆದರ್ಶವಾಗಿ ತೆಗೆದುಕೊಂಡಿದೆ. ಆ ಫೌಂಡೇಶನ್ ಪ್ರಕಾರ ಗಾಂಧಿಯವರು ‘ಜಾಗತಿಕ ಐಕಾನ್’ (Universal Icon).

13. ಗಾಂಧಿಯವರನ್ನು ಮೊದಲ ಬಾರಿಗೆ ‘ಮಹಾತ್ಮ’ ಎಂದು ಕರೆದದ್ದು ರಾಷ್ಟ್ರಕವಿ ರವೀಂದ್ರನಾಥ್ ಠಾಗೋರ್ ಅವರು.

14. ಗಾಂಧಿಯವರ ಇಂಗ್ಲಿಷ್ ಭಾಷಣದಲ್ಲಿ ಐರಿಷ್ ಅಸೆಂಟ್ ಇತ್ತು. ಅದಕ್ಕೆ ಕಾರಣ ಅವರ ಮೊದಲ ಇಂಗ್ಲಿಷ್ ಟೀಚರ್ ಒಬ್ಬರು ಐರಿಷ್ ಆಗಿದ್ದರು.

15. ಗಾಂಧಿಯವರು ಒಳ್ಳೆಯ ಭಾಷಣಕಾರ ಆಗಿರಲಿಲ್ಲ. ಅವರ ಧ್ವನಿಯೂ ಕೀರಲು ಇತ್ತು. ಆದರೆ ಆ ಭಾಷಣವು ಹೆಚ್ಚು ಪ್ರಭಾವಶಾಲಿ ಆಗಿತ್ತು. ಗಾಂಧಿ ತಮ್ಮ ಭಾಷಣದಲ್ಲಿ ಏನಾದರೂ ಕರೆಕೊಟ್ಟರೆ ಸೇರುತ್ತಿದ್ದ ಸಾವಿರಾರು ಜನರು ಅದನ್ನು ಪ್ರಶ್ನಾತೀತವಾಗಿ ಪಾಲನೆ ಮಾಡುತ್ತಿದ್ದರು. ಗಾಂಧಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುತ್ತಾರೆ ಎಂದು ಆಗ ಬಹುಪಾಲು ಭಾರತೀಯರು ನಂಬಿದ್ದರು.

16. ಮುಂದೆ ಬಾಂಗ್ಲಾ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೋಬೆಲ್ ಪ್ರಶಸ್ತಿ ಪಡೆದ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ ಆರಿಸಿಕೊಂಡದ್ದು ಅಹಿಂಸಾ ಮಾರ್ಗವನ್ನು. ಅದಕ್ಕೆ ಪ್ರೇರಣೆ ಗಾಂಧಿ.

17. ಗಾಂಧಿ ಕರ್ನಾಟಕವನ್ನು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ 18 ಬಾರಿ ಭೇಟಿ ಕೊಟ್ಟಿದ್ದರು. ಅದರಲ್ಲಿ ಉಡುಪಿಗೆ ಬಂದದ್ದು ಒಂದು ಬಾರಿ (ಫೆಬ್ರುವರಿ 25, 1934). ಆಗ ಕೃಷ್ಣ ಮಠದ ಬೀದಿಯಲ್ಲಿ ಗಾಂಧಿ ನಡೆದುಕೊಂಡು ಹೋದರೂ ಕೃಷ್ಣ ಮಠದ ಒಳಗೆ ಅವರು ಬರಲಿಲ್ಲ. ಅಜ್ಜರಕಾಡು ಮೈದಾನದಲ್ಲಿ ಗಾಂಧಿಯವರ ಭಾಷಣವನ್ನು 3000 ಮಂದಿ ಸೇರಿ ಕೇಳಿದ್ದರು. ಆ ಕಾರ್ಯಕ್ರಮದ ವ್ಯವಸ್ಥೆ ಮಾಡಿದ್ದು ಕಾರ್ಪೋರೇಶನ್ ಬ್ಯಾಂಕ್ ಸ್ಥಾಪನೆ ಮಾಡಿದ್ದ ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲ ಸಾಹೇಬರು. ಕಾಡಬೆಟ್ಟು ಎಂಬಲ್ಲಿ ಗಾಂಧೀಜಿ ಒಂದು ಖಾದಿ ಭಂಡಾರವನ್ನು ಉದ್ಘಾಟನೆ ಮಾಡಿದ್ದರು.

18. ಗಾಂಧಿ ಅದೇ ಅವಧಿಯಲ್ಲಿ ಮಂಗಳೂರಿಗೆ ಮೂರು ಬಾರಿ ಭೇಟಿ ನೀಡಿದ್ದರು. 1920, 1927, 1934 ಹೀಗೆ ಮೂರು ಭೇಟಿಗಳು. ಗಾಂಧಿಯವರ 1934ರ ಭೇಟಿಯಲ್ಲಿ 10,000 ಮಂದಿ ಸೇರಿದ್ದರು. ಆಗ ಅವರು ಕೆನರಾ ಶಾಲೆಯಲ್ಲಿ ಕೃಷ್ಣ ಮಂದಿರ ಉದ್ಘಾಟನೆ ಮಾಡಿದ್ದರು. ಅವರ ಮಂಗಳೂರು ಸಭೆಗಳನ್ನು ವ್ಯವಸ್ಥೆ ಮಾಡಿದ್ದು ಕಾರ್ನಾಡ್ ಸದಾಶಿವ ರಾಯರು ಮತ್ತು ಆಗಿನ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಿದ್ದ ಎಂ.ಡಿ ಅಧಿಕಾರಿಯವರು. ಅವರು ನನ್ನ ಕಾರ್ಕಳ ತಾಲೂಕಿನವರು.

19. ಗಾಂಧೀಜಿಯವರು ಸಾಮೂಹಿಕ ಪ್ರಾರ್ಥನೆಯನ್ನು ಮತ್ತು ಶ್ರೀ ರಾಮನ ಭಜನೆಗಳನ್ನು ಪ್ರಬಲವಾಗಿ ಪ್ರತಿಪಾದನೆ ಮಾಡಿದರು ಮತ್ತು ಆಚರಣೆ ಮಾಡಿದರು. ‘ವೈಷ್ಣವ ಜನತೋ’ ಅವರು ಅತೀ ಹೆಚ್ಚು ಬಾರಿ ಆಲಿಸಿದ ಪದ್ಯ. ರಾಮರಾಜ್ಯದ ಸುಂದರ ಕಲ್ಪನೆಯ ಬಗ್ಗೆ ಅವರು ಹಲವಾರು ಲೇಖನಗಳನ್ನು ಬರೆದಿದ್ದಾರೆ.

20. ಗಾಂಧಿಯವರು ಎಡಗೈಯಿಂದ ಬರೆಯುತ್ತಿದ್ದರು. ಅವರ ಜೊತೆ ಯಾವಾಗಲೂ ಇರುತ್ತಿದ್ದದ್ದು ಒಂದು ಗಡಿಯಾರ.

21. ತನಗೆ ಪತ್ರ ಬರೆಯುತ್ತಿದ್ದ ಪ್ರತಿಯೊಬ್ಬರಿಗೂ ಗಾಂಧೀಜಿ ಅವರು ತಮ್ಮ ಕೈ ಬರಹದಲ್ಲಿ ಉತ್ತರ ಬರೆಯುತ್ತಿದ್ದರು.

22. ಗಾಂಧಿ ತಮ್ಮ ಬದುಕಿನ ಉದ್ದಕ್ಕೂ ರೈಲಿನಲ್ಲಿ ದ್ವಿತೀಯ ದರ್ಜೆಯ ಡಬ್ಬಿಯಲ್ಲಿ ಪ್ರಯಾಣ ಮಾಡಿದ್ದರು. ಮುಂದೆ ಅದನ್ನು ಜನರು `ಗಾಂಧಿ ಕ್ಲಾಸ್’ ಎಂದು ಕರೆದರು.

ಇದನ್ನೂ ಓದಿ: Raja Marga Column : ಅಂದು ಜಿ.ಆರ್‌ ವಿಶ್ವನಾಥ್‌ ಅವರಿಂದಾಗಿ ಭಾರತ ಸೋತಿತ್ತು, ಆದರೆ ಕ್ರಿಕೆಟ್‌ ಗೆದ್ದಿತ್ತು!

23. ಗಾಂಧೀಯವರ ಹತ್ಯೆಯನ್ನು ನಾಥೂರಾಮ್ ಗೋಡ್ಸೆ ಮಾಡಿದಾಗ ಅವರ ಬಾಯಿಂದ ಬಂದ ಮೊದಲ ಶಬ್ದ ಹೇ ರಾಮ್. ಎರಡನೇ ಶಬ್ದ – ಉಸ್ಕೋ ಚೋಡ್ ದೋ!

24. ಗಾಂಧಿಯವರ ಅಂತಿಮ ಯಾತ್ರೆಯಲ್ಲಿ ಅಂದು ಭಾಗವಹಿಸಿದ ಜನರ ಸಂಖ್ಯೆಯೂ ಮಹಾ ದಾಖಲೆ. ಆಗ ಎಂಟು ಕಿಲೋಮೀಟರ್ ಉದ್ದವಾದ ಅಂತಿಮ ಯಾತ್ರೆಯು ಸಾಗಿ ಬಂದಿತ್ತು.

25. ಯಾವುದೇ ಸಾಮಾಜಿಕ ಜಾಲ ತಾಣ ಮತ್ತು ದೂರದರ್ಶನ ಇಲ್ಲದ ಕಾಲದಲ್ಲಿ ಕೂಡ ಒಬ್ಬ ವ್ಯಕ್ತಿ ಇಡೀ ಭಾರತವನ್ನು ತಲುಪಿದ್ದು ಮತ್ತು ಇಡೀ ವಿಶ್ವದ ಮೇಲೆ ಪ್ರಭಾವ ಬೀರಿದ್ದು ದೊಡ್ಡ ಸಾಧನೆಯೇ ಹೌದು. ಅದಕ್ಕಾಗಿ ಅವರು ಮಹಾತ್ಮ ಆದದ್ದು.

Exit mobile version