Site icon Vistara News

Ganesh Baraiya: ಇವರೇ ನೋಡಿ ವಿಶ್ವದ ಅತ್ಯಂತ ಕುಳ್ಳಗಿನ ವೈದ್ಯ; ಎತ್ತರ ಕೇವಲ 3 ಅಡಿ !

dr.ganesh

dr.ganesh

ಗಾಂಧಿನಗರ: ಇವರ ಹೆಸರು ಡಾ. ಗಣೇಶ್ ಬರೈಯಾ (Ganesh Baraiya). ಎತ್ತರ ಕೇವಲ 3 ಅಡಿ. ಆದರೆ ಇದು ಅವರ ಕನಸಿಗೆ, ಸಾಧಿಸಬೇಕೆಂಬ ಛಲಕ್ಕೆ ಅಡ್ಡಿಯಾಗಲಿಲ್ಲ. ಅವರು ಇಂದು ವಿಶ್ವದಲ್ಲೇ ಅತ್ಯಂತ ಕುಳ್ಳಗಿನ ವೈದ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ (Shortest Doctor). ಆ ಮೂಲಕ ಗುಜರಾತ್‌ನ 23 ವರ್ಷದ ಗಣೇಶ್‌ ಇತಿಹಾಸ ಬರೆದಿದ್ದಾರೆ.

ಹೆಜ್ಜೆ ಹೆಜ್ಜೆಗೂ ಸವಾಲು

ವೈದ್ಯರಾಗಿ ತಮ್ಮ ಸೇವೆಯನ್ನು ಆರಂಭಿಸಿರುವ ಗಣೇಶ್‌ ಅವರ ಸಾಧನೆಯ ಹಾದಿ ಸುಲಭದ್ದಾಗಿರಲಿಲ್ಲ. ಹೆಜ್ಜೆ ಹೆಜ್ಜೆಗೂ ಎದುರಾದ ನೋವು, ಅವಮಾನಗಳನ್ನು ಮೆಟ್ಟಿ ನಿಂತು ಅವರು ಈ ಯಶಸ್ಸನ್ನು ತಮ್ಮದಾಗಿಸಿಕೊಂಡಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಜ್ಞಾನದ ಹೊರತಾಗಿಯೂ ಗಣೇಶ್ ಅವರು ತಮ್ಮ ಎತ್ತರದಿಂದಾಗಿ ಟೀಕೆ ಹಾಗೂ ಸವಾಲುಗಳನ್ನು ಎದುರಿಸಿದ್ದರು. ಎತ್ತರದ ಕಾರಣದಿಂದ ಅವರ ಸಾಮರ್ಥ್ಯವನ್ನು ಯಾರೂ ಗುರುತಿಸುತ್ತಿರಲಿಲ್ಲ.

ವಿಶೇಷ ಎಂದರೆ ಗಣೇಶ್‌ ಅವರ ತೂಕ ಕೇವಲ 18 ಕೆ.ಜಿ. 2018ರಲ್ಲಿ ಗಣೇಶ್‌ 12ನೇ ತರಗತಿಯ ಪರೀಕ್ಷೆ ತೇರ್ಗಡೆಯಾಗಿದ್ದರು. ಇದರಲ್ಲಿ ಅವರಿಗೆ ಶೇ. 87 ಮತ್ತು ನೀಟ್‌ನಲ್ಲಿ 233 ಅಂಕ ಬಂದಿತ್ತು. ಆದರೆ 3 ಅಡಿ 4 ಇಂಚು ಎತ್ತರದ ಅವರಿಗೆ ಗುಜರಾತ್ ಸರ್ಕಾರವು ಎಂಬಿಬಿಎಸ್ ಪ್ರವೇಶಕ್ಕೆ ಅನುಮತಿ ನಿರಾಕರಿಸಿತ್ತು. ಛಲ ಬಿಡದ ಅವರು ತಮ್ಮ ಶಾಲಾ ಪ್ರಾಂಶುಪಾಲರ ಸಹಾಯವನ್ನು ಪಡೆದು ಜಿಲ್ಲಾಧಿಕಾರಿ, ರಾಜ್ಯ ಶಿಕ್ಷಣ ಸಚಿವರನ್ನು ಸಂಪರ್ಕಿಸಿದರು ಜತೆಗೆ ಗುಜರಾತ್ ಹೈಕೋರ್ಟ್‌ನ ಬಾಗಿಲು ತಟ್ಟಿದರು.

ಹೈಕೋರ್ಟ್‌ನಲ್ಲಿ ಹಿನ್ನಡೆ

ಆದರೆ ಗಣೇಶ್‌ ಅವರಿಗೆ ಹೈಕೋರ್ಟ್‌ನಲ್ಲಿಯೂ ಹಿನ್ನಡೆ ಉಂಟಾಗಿತ್ತು. ಅವರು ಭರವಸೆಯನ್ನು ಒಂದಿನಿತೂ ಕಳೆದುಕೊಳ್ಳಲಿಲ್ಲ. ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರು. ಅಂತಿಮವಾಗಿ ಸುಪ್ರೀಂ ಕೋರ್ಟ್‌ 2018ರಲ್ಲಿ ಗಣೇಶ್‌ ಪರವಾಗಿ ತೋರ್ಪು ಪ್ರಕಟಿಸಿತು. ಹೀಗೆ 2019ರಲ್ಲಿ ಎಂಬಿಬಿಎಸ್‌ಗೆ ಪ್ರವೇಶ ಗಿಟ್ಟಿಸಿಕೊಂಡರು. ಇದೀಗ ಗಣೇಶ್‌ ಕೋರ್ಸ್‌ ಮುಗಿಸಿದ್ದು, ಭಾವನಾನಗರ್‌ನ ಸರ್‌ ಟಿ (Sir-T hospital) ಆಸ್ಪತ್ರೆಯಲ್ಲಿ ಇಂಟರ್ನ್‌ ಆಗಿ ವೃತ್ತಿ ಜೀವನ ಆರಂಭಿಸಿದ್ದಾರೆ.

ಗಣೇಶ್‌ ಹೇಳೋದೇನು?

ʼʼನಾನು 12ನೇ ತರಗತಿಯಲ್ಲಿ ಉತ್ತೀರ್ಣನಾಗಿದ್ದೆ. ಎಂಬಿಬಿಎಸ್‌ಗೆ ಸೇರಲು ನೀಟ್‌ ಪರೀಕ್ಷೆ ಬರೆದಿದ್ದೆ. ಇದರಲ್ಲಿ ತೇರ್ಗಡೆಯಾಗಿ ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (Medical Council of India) ಸಮಿತಿಯು ನಾನು ಕುಳ್ಳಗಿರುವುದರಿಂದ ಪ್ರವೇಶ ನಿರಾಕರಿಸಿತ್ತು. ವೈದ್ಯನಾಗಬೇಕೆಂದು ಬಾಲ್ಯದಲ್ಲಿಯೇ ಕನಸು ಕಂಡು, ಅದಕ್ಕಾಗಿ ಹಗಲಿರುಳು ಶ್ರಮಿಸಿದ್ದ ನನಗೆ ಬಹು ದೊಡ್ಡ ಆಘಾತ ಎದುರಾಗಿತ್ತು. ತುರ್ತು ಚಿಕಿತ್ಸೆ ಸಮಯದಲ್ಲಿ ನನಗೆ ಪರಿಸ್ಥಿತಿ ನಿಭಾಯಿಸಲು ಸಾಧ್ಯವಿಲ್ಲ ಎಂದು ಅವರು ಕಾರಣ ನೀಡಿದ್ದರು. ಬಳಿಕ ನೀಲಕಂಠ ವಿದ್ಯಾಪೀಠದ ನನ್ನ ಪ್ರಾಂಶುಪಾಲರಾದ ಡಾ. ದಲಪತ್ ಭಾಯಿ ಕಟಾರಿಯಾ ಮತ್ತು ರೇವೀಶ್ ಸರ್ವೈಯಾ ಅವರೊಂದಿಗೆ ಈ ಬಗ್ಗೆ ಮಾತನಾಡಿದೆ. ಈ ಬಗ್ಗೆ ಮುಂದೇನು ಮಾಡಬಹುದು ಎಂದು ಚರ್ಚೆ ನಡೆಸಿದೆʼʼ ಎಂದು ಗಣೇಶ್‌ ಅಂದಿನ ದಿನಗಳನ್ನು ವಿವರಿಸಿದ್ದಾರೆ.

ಇದನ್ನೂ ಓದಿ: Naveen Patnaik: ಒಡಿಶಾದ ನವೀನ್‌ ಪಟ್ನಾಯಕ್‌ ಕೂಡ ಎನ್‌ಡಿಎಗೆ ಘರ್‌ ವಾಪ್ಸಿ, ಮಾತುಕತೆ ಅಂತಿಮ

“ಭಾವನಗರ ಜಿಲ್ಲಾಧಿಕಾರಿ ಮತ್ತು ಗುಜರಾತ್ ಶಿಕ್ಷಣ ಸಚಿವರನ್ನು ಭೇಟಿ ಮಾಡಲು ಗುರುಗಳು ನನಗೆ ಸಲಹೆ ನೀಡಿದರು. ಬಳಿಕ ನಾನು ಮತ್ತು ಇತರ ಇಬ್ಬರು ವಿಶೇಷ ಚೇತನ ಅಭ್ಯರ್ಥಿಗಳು ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆವು. ಅಲ್ಲಿ ಸೋತ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆವು. ಅಂತಿಮವಾಗಿ ನನ್ನ ಪರವಾಗಿ ತೀರ್ಪು ಬಂತು. 2019 ಪ್ರವೇಶ ಪಡೆದು ಇದೀಗ ಕನಸು ನನಸಾಗಿಸಿಕೊಂಡಿದ್ದೇನೆʼʼ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಸಾಧನೆಗೆ ಯಾವುದೂ ಅಡ್ಡಿಯಲ್ಲ ಎನ್ನುವುದನ್ನು ಅವರು ಮತ್ತೊಮ್ಮೆ ನಿರೂಪಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version