ನವದೆಹಲಿ: ಪಂಜಾಬ್ ನ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ (Sidhu moose wala) ಅವರನ್ನು ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆಯ ಹಿಂದೆ ಗ್ಯಾಂಗ್ ವಾರ್‌ನ ನೆರಳು ಕಾಣಿಸಿಕೊಂಡಿದೆ.
ಪಂಜಾಬ್‌ನ ಪೊಲೀಸ್ ಮಹಾ ನಿರ್ದೇಶಕ ವಿ.ಕೆ. ಭರ್ವಾ ಅವರೇ ಈ ಸಂಶಯವನ್ನು ವ್ಯಕ್ತಪಡಿಸಿದ್ದು, ಕಳೆದ ಆಗಸ್ಟ್‌ನಲ್ಲಿ ನಡೆದ ಯುವ ಅಕಾಲಿ ದಳ ನಾಯಕ ವಿಕ್ಕಿ ಮಧುಕೇರ ಅವರ ಹತ್ಯೆಗೆ ಪ್ರತೀಕಾರವಾಗಿ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದಿದ್ದಾರೆ.
ವಿಕ್ಕಿ ಮಧುಕೇರ ಹತ್ಯೆಯ ಸಂಚುಕೋರರಲ್ಲಿ ಪ್ರಧಾನವಾಗಿ ಕೇಳಿಬಂದಿದ್ದ ಹೆಸರು ಶಗನ್ ಪ್ರೀತ್. ಈತ ಕೆಲವು ಸಮಯದ ಹಿಂದೆ ಆಸ್ಟ್ರೇಲಿಯಾಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಶಗನ್ ಪ್ರೀತ್ ಬೇರಾರೂ ಅಲ್ಲ, ಹಿಂದೆ ಮೂಸೆವಾಲಾನ (Sidhu moose wala) ಮ್ಯಾನೇಜರ್ ಆಗಿದ್ದವನು.
ಈ ನಡುವೆ, ಪಂಜಾಬ್‌ನ ಕುಖ್ಯಾತ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ತಾನೇ ಮೂಸೆವಾಲಾ ಹತ್ಯೆ ಮಾಡಿಸಿದ್ದು ಎಂದು ಹೇಳಿಕೊಂಡಿದೆ. ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಮೂಲಕ ಈ ಕೊಲೆ ಮಾಡಿಸಿದ್ದಾಗಿ ಗ್ಯಾಂಗ್ ಹೇಳಿಕೊಂಡಿದೆ ಎಂದು ಡಿಜಿಪಿ ಭರ್ವಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದೀಗ ಹತ್ಯೆಯ ಹಿಂದಿನ ಶಕ್ತಿಗಳ ಶೋಧಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.
ಸಾಮಾನ್ಯ ಕಾರು ಬಳಸಿದ್ದರು
ಪಂಜಾಬ್ ನ ಮಾನ್ಸಾ ಜಿಲ್ಲೆಯ ಜವಾಹರ್ ಕೆ ಗ್ರಾಮದಲ್ಲಿ ಈ ಭೀಕರ ಹತ್ಯಾಕಾಂಡ ನಡೆದಿದೆ. ಮೂಸೆವಾಲಾ ಸಾಮಾನ್ಯವಾಗಿ ಎಲ್ಲೇ ಹೋಗುವುದಿದ್ದರೂ ಬುಲೆಟ್ ಪ್ರೂಫ್ ಫಾರ್ಚುನರ್ ಕಾರಿನಲ್ಲಿ ಹೋಗುತ್ತಿದ್ದರು. ಆದರೆ, ಭಾನುವಾರ ಘಟನೆ ನಡೆದಾಗ ಅವರು ಸಾಮಾನ್ಯ ಥಾರ್ ಕಾರ್‌ನಲ್ಲಿದ್ದರು ಎಂದು ಭರ್ವಾ ತಿಳಿಸಿದ್ದಾರೆ.
ಇಬ್ಬರು ಗಾರ್ಡ್‌ಗಳಿರಬೇಕಿತ್ತು
ಪಂಜಾಬ್ ಸರಕಾರ ಅತಿ ಗಣ್ಯರಿಗೆ ನೀಡಿದ್ದ ಭದ್ರತೆಯನ್ನು ಹಿಂದೆಗೆದುಕೊಂಡಿದ್ದು ನಿಜವಾದರೂ, ಮೂಸೆವಾಲಾ ಅವರ ರಕ್ಷಣೆಗೆ ನೀಡಲಾಗಿದ್ದ ನಾಲ್ವರ ಪೈಕಿ ಇಬ್ಬರನ್ನು ಮಾತ್ರ ಹಿಂಪಡೆಯಲಾಗಿತ್ತು. ಆದರೆ ಉಳಿದ ಇಬ್ಬರು ಕೂಡಾ ಘಟನೆ ವೇಳೆ ಮೂಸೆವಾಲಾ ಜತೆಗೆ ಇರಲಿಲ್ಲ ಎನ್ನಲಾಗಿದೆ.
ಅಪರೂಪದ ಗನ್ ಬಳಕೆ
ಮೂಸೆವಾಲಾ ಅವರ ಥಾರ್ ಕಾರನ್ನು ಇನ್ನೊಂದು ಚತುಷ್ಚಕ್ರ ವಾಹನ ಹಿಂಬಾಲಿಸುತ್ತಿರುವುದು ಸಿಸಿಟಿವಿ ಫೂಟೇಜ್‌ನಲ್ಲಿ ದಾಖಲಾಗಿದೆ. ದುಷ್ಕರ್ಮಿಗಳು ಎಕೆ-94 ರೈಫಲ್‌ನಿಂದ 30 ಗುಂಡುಗಳನ್ನು ಹಾರಿಸಿದ್ದಾರೆ. ಇದರಲ್ಲಿ ಎಂಟು ಗುಂಡುಗಳು ಮೂಸೆವಾಲಾ ಅವರ ದೇಹವನ್ನು ಹೊಕ್ಕಿವೆ. ಉಳಿದವು ಕಾರನ್ನು ಪುಡಿಗಟ್ಟಿವೆ. ಹತ್ಯೆಗೈದ ದುಷ್ಕರ್ಮಿಗಳ ತಂಡದಲ್ಲಿ ಒಟ್ಟು ಎಂಟು ಮಂದಿ ಇದ್ದರು ಎಂದು ಹೇಳಲಾಗಿದೆ.
ಮೂಸೆವಾಲಾಗೆ ಬೆದರಿಕೆ ಇತ್ತೇ?
ಖ್ಯಾತ ಗಾಯಕರಾಗಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಮೂಸೆವಾಲಾ ಅವರಿಗೆ ಭೂಗತ ಜಗತ್ತಿನಿಂದ ಹಫ್ತಾಕ್ಕಾಗಿ ಬೆದರಿಕೆ ಇತ್ತು ಎಂದು ಅವರ ಮಿತ್ರರೂ ಆಗಿರುವ ಇನ್ನೊಬ್ಬ ಗಾಯಕ ಮಿಕಾ ಸಿಂಗ್ ಹೇಳಿದ್ದಾರೆ. ಇತ್ತೀಚೆಗೆ ಮುಂಬಯಿಗೆ ಬಂದಿದ್ದಾಗ ತನ್ನ ಜತೆ ಇದನ್ನು ಹೇಳಿಕೊಂಡಿದ್ದರು ಎಂದಿದ್ದಾರೆ ಅವರು. ಮುಂಬಯಿಯಲ್ಲಿ ಯಾವುದೇ ಭದ್ರತೆ ಇಲ್ಲದೆ ನಿರಾಳವಾಗಿದ್ದ ಅವರು ಬೆದರಿಕೆಯ ಬಗ್ಗೆ ಹೇಳಿಕೊಂಡಾಗ, ಮುಂಬಯಿಯಲ್ಲೇ ಇರಬಹುದಲ್ವಾ ಎಂಬ ಸಲಹೆ ಕೊಟ್ಟಿದ್ದಾಗಿ ಮಿಕಾ ಹೇಳಿಕೊಂಡಿದ್ದಾರೆ. ಈ ನಡುವೆ, ಪಂಜಾಬಿನ ಕೆಲವೊಂದು ಗಾಯಕರು ಮತ್ತು ನಟರಿಗೆ ಇದೇ ರೀತಿ ಹಫ್ತಾ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಲಾಗುತ್ತಿದೆ.
ಅಭಿಮಾನಿಗಳ ರೋದನ
ಮೂಸೆವಾಲಾ ಹತ್ಯೆ ಒಂದು ಕಡೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದರೆ ಇನ್ನೊಂದು ಕಡೆ ಅಭಿಮಾನಿಗಳ ರೋದನ ಮುಗಿಲು ಮುಟ್ಟಿದೆ. ಮೂಸೆವಾಲಾ ಅವರ ತಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರೆ, ತಂದೆ ನಿವೃತ್ತ ಸೈನಿಕ. ಮೂಸೆವಾಲಾ ಅವರಿಗೆ ಇನ್‌ಸ್ಟಾಗ್ರಾಂ ಒಂದರಲ್ಲೇ 69 ಲಕ್ಷ ಫಾಲೋವರ್‌ಗಳಿದ್ದಾರೆ. ಯೂಟ್ಯೂಬ್ ಚಂದಾದಾರರ ಸಂಖ್ಯೆ ಒಂದು ಕೋಟಿಗೂ ಹೆಚ್ಚು!
ಇದನ್ನೂ ಓದಿ| Sidhu MooseWala: ಪಂಜಾಬಿ ಸಿಂಗರ್ ಸಿಧು ಮೂಸೆವಾಲಾ ಗುಂಡಿಗೆ ಬಲಿ