ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ನಾನು ಗುಜರಾತ್‌ನಿಂದ ಬಂದವರು. ಹೀಗಾಗಿ ನನ್ನನ್ನು ಸುಲಭವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ನನ್ನ ಉದ್ದಿಮೆಯ ಯಶಸ್ಸಿಗೆ ಯಾವುದೇ ಒಬ್ಬ ನಾಯಕನ ವ್ಯಕ್ತಿಗತ ನೆರವು ಕಾರಣವೇ ಅಲ್ಲ, ಹಲವಾರು ಸರ್ಕಾರಗಳ ನೀತಿಗಳ ನೆರವಿನಿಂದ ಇದು ಸಾಧ್ಯವಾಗಿದೆ ಎಂದು ಅದಾನಿ ಸಮೂಹದ ಸಂಸ್ಥಾಪಕ, ಉದ್ಯಮಿ ಗೌತಮ್ ಅದಾನಿ (Gautam Adani) ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಗೌತಮ್ ಅದಾನಿಯವರ 4 ಟರ್ನಿಂಗ್ ಪಾಯಿಂಟ್‌ಗಳು
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನನ್ನ ಬದುಕಿನ ಯಾತ್ರೆಯನ್ನು ಹಿಂತಿರುಗಿ ನೋಡಿದರೆ, ನಾಲ್ಕು ಹಂತಗಳನ್ನು ಕಾಣಬಹುದು. ಬಹಳ ಮಂದಿಗೆ ಅಚ್ಚರಿಯಾಗಬಹುದು, ರಾಜೀವ್ ಗಾಂಧಿ ಅವರು ಆಮದು ಮತ್ತು ರಫ್ತು ನೀತಿಯನ್ನು ಉದಾರೀಕರಣಗೊಳಿಸಿದಾಗ ನನಗೆ ರಫ್ತು ವ್ಯವಹಾರವನ್ನು ಆರಂಭಿಸಲು ನೆರವಾಯಿತು.
ಎರಡನೆಯದಾಗಿ 1991ರಲ್ಲಿ ಪಿವಿ ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಅವರು ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೊಳಿಸಿದಾಗ ಎಲ್ಲ ಉದ್ಯಮಿಗಳಿಗೆ ಆದಂತೆ ನನಗೂ ಪ್ರಯೋಜನವಾಯಿತು. 1995ರಲ್ಲಿ ಕೇಶುಭಾಯ್ ಪಟೇಲ್ ಅವರು ಗುಜರಾತ್ ಸಿಎಂ ಆಗಿ ಕೈಗಾರಿಕಾ ಅಭಿವೃದ್ಧಿಯನ್ನು ಆರಂಭಿಸಿದಾಗ ನನಗೆ ಮೂರನೇ ಟರ್ನಿಂಗ್ ಪಾಯಿಂಟ್ ಆಯಿತು. ಗುಜರಾತ್ ಸಿಎಂ ಆಗಿ ನರೇಂದ್ರ ಮೋದಿ ಅವರು 2001ರಲ್ಲಿ ಅಧಿಕಾರ ವಹಿಸಿದ ಬಳಿಕ ನಾಲ್ಕನೇ ಟರ್ನಿಂಗ್ ಪಾಯಿಂಟ್ ಸಿಕ್ಕಿತು. ಉದ್ಯಮ ವಲಯದ ಅಭಿವೃದ್ಧಿ ಮಾತ್ರವಲ್ಲದೆ ಸಾಮಾಜಿಕ ಅಭಿವೃದ್ಧಿಗೂ ಹಿಂದೆಂದೂ ಕಂಡರಿಯದಷ್ಟು ಉತ್ತೇಜನವನ್ನು ಮೋದಿಯವರು ನೀಡಿದ್ದಾರೆ ಎಂದು ಅವರು ಹೇಳಿದರು.
ಇವತ್ತು ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ನವ ಭಾರತದ ಪುನರುತ್ಥಾನವನ್ನು ಕಾಣಬಹುದು. ದುರದೃಷ್ಟವಶಾತ್ ಪ್ರಧಾನಿಯವರಿಗೂ ನನಗೂ ಇಲ್ಲಸಲ್ಲದ ನಂಟನ್ನು ಕಲ್ಪಿಸಿ, ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಈ ಎಲ್ಲ ಆರೋಪಗಳು ನಿರಾಧಾರ. ಅದಾನಿ ಸಮೂಹದ ಯಶಸ್ಸನ್ನು ಸಂಕುಚಿತ ದೃಷ್ಟಿಯಿಂದ ನೋಡುವವರು ಇಂಥ ಆರೋಪಗಳನ್ನು ಮಾಡುತ್ತಾರೆ. ನನ್ನ ವೃತ್ತಿಪರ ಯಶಸ್ಸಿಗೆ ವ್ಯಕ್ತಿಗತವಾಗಿ ಯಾವುದೇ ಒಬ್ಬ ನಾಯಕ ಕಾರಣ ಅಲ್ಲ. ಮೂರು ದಶಕಗಳಲ್ಲಿ ಹಲವಾರು ನಾಯಕರು ಮತ್ತು ಸರ್ಕಾರಗಳು ಕಾರಣ ಎಂದು ಅದಾನಿ ವಿವರಿಸಿದರು.