Site icon Vistara News

Gautam Adani: ವಿವಿಧ ಕೈಗಾರಿಕೆಗಳಲ್ಲಿ 7 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ ಅದಾನಿ ಗ್ರೂಪ್‌

adani

adani

ನವದೆಹಲಿ: ಷೇರು ಮಾರುಕಟ್ಟೆಯಲ್ಲಿ ತಮ್ಮ ಅದಾನಿ ಗ್ರೂಪ್‌ (Adani Group) ಕಂಪೆನಿಯ ಮೌಲ್ಯ ಏರಿಕೆಯಾದ ವಾರದ ನಂತರ ಕೋಟ್ಯಧಿಪತಿ, ಉದ್ಯಮಿ ಗೌತಮ್ ಅದಾನಿ (Gautam Adani) ದೇಶದ ಅನೇಕ ಕೈಗಾರಿಕೆಗಳಲ್ಲಿ ಒಟ್ಟು 7 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದ್ದೇವೆ ಎಂದು ಘೋಷಿಸಿದ್ದಾರೆ.

ಗೌತಮ್ ಅದಾನಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅದಾನಿ ಎನರ್ಜಿ ಸೊಲ್ಯೂಷನ್ಸ್ ಇತ್ತೀಚೆಗೆ ಮುಂದಿನ 10 ವರ್ಷಗಳಲ್ಲಿ ದೇಶದಲ್ಲಿ 7 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡುವ ಯೋಜನೆಯನ್ನು ಘೋಷಿಸಿತ್ತು. ಈ ಬಹು ಶತಕೋಟಿ ಡಾಲರ್ ಸಂಸ್ಥೆಯು ತನ್ನ ಹಸಿರು ಉಪಕ್ರಮದ ವಿವಿಧ ಅಂಶಗಳಲ್ಲಿ ಪರಿಸರಕ್ಕೆ ಪೂರಕ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದೆ. ಪ್ರಸ್ತುತ ಇದು ತನ್ನ ಬಂದರುಗಳ ಚಟುವಟಿಕೆಯನ್ನು ಹಸಿರುಕರಣಗೊಳಿಸಲು ಚಾಲನೆ ನೀಡಿದೆ.

“2025ರ ವೇಳೆಗೆ ನಾವು ಇಂಗಾಲ-ತಟಸ್ಥ ಬಂದರು ಯೋಜನೆಯ ಕಾರ್ಯಾಚರಣೆ ಆರಂಭಿಸಲಿದ್ದೇವೆ. ನಮ್ಮ ಹವಾಮಾನ ಸ್ನೇಹಿ ರೂಪಾಂತರವು ಎಲ್ಲ ಕ್ರೇನ್‌ಗಳನ್ನು ವಿದ್ಯುದ್ದೀಕರಿಸುವುದು, ಎಲ್ಲ ಡೀಸೆಲ್ ಆಧಾರಿತ ಆಂತರಿಕ ವರ್ಗಾವಣೆ ವಾಹನಗಳನ್ನು ಬ್ಯಾಟರಿ ಆಧಾರಿತ ಐಟಿವಿಗಳಿಗೆ ಬದಲಾಯಿಸುವುದು ಮತ್ತು ಹೆಚ್ಚುವರಿ 1,000 ಮೆಗಾವ್ಯಾಟ್ ಕ್ಯಾಪ್ಟಿವ್ ಸ್ಥಾಪಿಸುವ ಗುರಿ ಹೊಂದಿದ್ದೇವೆʼʼ ಎಂದು ಗೌತಮ್‌ ತಮ್ಮ ಎಕ್ಸ್‌ ಖಾತೆಯ ಮೂಲಕ ತಿಳಿಸಿದ್ದಾರೆ. ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ(APSEZ)ವು ದೇಶದ ಅತಿದೊಡ್ಡ ಬಂದರು ಆಪರೇಟರ್ ಆಗಿದ್ದು, ಪೂರ್ವ ಮತ್ತು ಪಶ್ಚಿಮ ಕರಾವಳಿಗಳಲ್ಲಿ ಬಂದರುಗಳನ್ನು ಹೊಂದಿದೆ.

ಅದಾನಿ ಗ್ರೂಪ್‌ ಹೇಗೆಲ್ಲ ಹೂಡಿಕೆ ಮಾಡಲಿದೆ?

“ಪರಿಸರವನ್ನು ಸಂರಕ್ಷಿಸುವ ನಮ್ಮ ಬದ್ಧತೆಯು ವಿಸ್ತರಿಸುತ್ತಿರುವ ಮ್ಯಾಂಗ್ರೋವ್ ನೆಡುತೋಪುಗಳಲ್ಲಿಯೂ ಕಂಡು ಬರಲಿದೆ. 2025ರ ವೇಳೆಗೆ ಗಮನಾರ್ಹವಾಗಿ 5,000 ಹೆಕ್ಟೇರ್‌ಗಳಿಗೆ ಮ್ಯಾಂಗ್ರೋವ್ ನೆಡುತೋಪು ಹೆಚ್ಚಿಸುವ ಗುರಿ ಹೊಂದಿದ್ದೇವೆ. ಇದು ಹಸಿರು ಭವಿಷ್ಯದತ್ತ ನಮ್ಮ ಮತ್ತೊಂದು ದಿಟ್ಟ ಹೆಜ್ಜೆ. ಹವಾಮಾನದ ಸೂಕ್ತ ನಿರ್ವಹಣೆಯ ನಮ್ಮ ಬದ್ಧತೆಗೆ ಮತ್ತಷ್ಟು ಸಾಕ್ಷಿʼʼ ಎಂದು ಅವರು ಹೇಳಿದ್ದಾರೆ. ಗುಜರಾತ್‌ನ ಕಚ್‌ನಲ್ಲಿ ತಮ್ಮ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ವಿಶ್ವದ ಅತಿದೊಡ್ಡ ಹಸಿರು ಇಂಧನ ಪಾರ್ಕ್ ಅಭಿವೃದ್ಧಿಯ ಯೋಜನೆಗಳ ಮಾಹಿತಿಯನ್ನೂ ಅವರು ಹಂಚಿಕೊಂಡಿದ್ದಾರೆ.

“ಸವಾಲಿನ ರಾನ್ ಮರುಭೂಮಿಯಲ್ಲಿ 726 ಚದರ ಕಿ.ಮೀ. ವ್ಯಾಪ್ತಿಯನ್ನು ಒಳಗೊಂಡಿರುವ ಈ ಯೋಜನೆ ಬಾಹ್ಯಾಕಾಶದಿಂದಲೂ ಗೋಚರಿಸಲಿದೆ. ನಾವು 20 ದಶಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಪೂರೈಸಲು 30 ಗಿಗಾ ವ್ಯಾಟ್ ವಿದ್ಯುತ್‌ ಉತ್ಪಾದಿಸಲಿದ್ದೇವೆ. ಕರ್ಮಭೂಮಿ ಮುಂದ್ರಾದಲ್ಲಿ ನಾವು ಸೌರ ಮತ್ತು ಗಾಳಿಗಾಗಿ ವಿಶ್ವದ ಅತ್ಯಂತ ವ್ಯಾಪಕ ಮತ್ತು ಸಮಗ್ರ ನವೀಕರಿಸಬಹುದಾದ ಇಂಧನ ಉತ್ಪಾದನಾ ವ್ಯವಸ್ಥೆಯನ್ನು ರಚಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ಸಂಪತ್ತು ವೃದ್ಧಿ

ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ವರದಿಯಿಂದಾಗಿ ಭಾರೀ ಕುಸಿತ ಅನುಭವಿಸಿದ್ದ ಅದಾನಿ ಗ್ರೂಪ್‌ ಷೇರುಗಳು ಈಗ ಏರುಗತಿಯಲ್ಲಿವೆ. ಪರಿಣಾಮ ಗೌತಮ್ ಅದಾನಿ ಅವರ ಸಂಪತ್ತಿನ ಮೌಲ್ಯವು ಒಂದೇ ವಾರದಲ್ಲಿ 10 ಶತಕೋಟಿ ಡಾಲರ್‌ನಷ್ಟು ಏರಿಕೆ ಕಂಡಿದೆ. ಸದ್ಯ ಅವರು ಒಟ್ಟು ಆಸ್ತಿ ಮೌಲ್ಯ 70.3 ಶತಕೋಟಿ ಡಾಲರ್‌ನಷ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: Adani Stocks: ‘ಗೂಳಿ’ಯಂತೆ ಜಿಗಿದ ಅದಾನಿ ಗ್ರೂಪ್‌ ಷೇರುಗಳ ಮೌಲ್ಯ, 20% ಏರಿಕೆಗೆ ಏನು ಕಾರಣ?

Exit mobile version