ನವದೆಹಲಿ: ಹಿಂಡನ್‌ಬರ್ಗ್ ವರದಿ (Adani Hindenburg Case) ಪ್ರಕರಣಕ್ಕೆ ಸಂಬಂಧಿಸಿದಂತೆ ಗೌತಮ್ ಅದಾನಿ (Gautam Adani) ಕಂಪನಿ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕೇಸ್‌ಅನ್ನು ಎಸ್‌ಐಟಿಗೆ ವಹಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇದು ಗೌತಮ್ ಅದಾನಿ ಅವರಿಗೆ ದೊಡ್ಡ ರಿಲೀಫ್ ಎಂದೇ ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ಅದಾನಿ ಗ್ರೂಪ್ ಆಫ್ ಕಂಪನೀಸ್ ಚೇರ್ಮನ್ ಆದ ಗೌತಮ್ ಅದಾನಿ ಅವರು ಭಾರತದಲ್ಲೇ ಅತಿ ಶ್ರೀಮಂತ ವ್ಯಕ್ತಿ (Richest Person) ಎನಿಸಿದ್ದಾರೆ. ಅಷ್ಟೇ ಅಲ್ಲ, ಇವರು ಏಷ್ಯಾದಲ್ಲೇ ನಂಬರ್ 1 ಶ್ರೀಮಂತ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಸುಪ್ರೀಂ ಕೋರ್ಟ್ (Supreme Court)) ತೀರ್ಪಿನ ಬಳಿಕ ಅದಾನಿ ಗ್ರೂಪ್ ಷೇರುಗಳ ಮೌಲ್ಯವು ಏಕಾಏಕಿ ಜಾಸ್ತಿಯಾಗಿದ್ದು, ಗೌತಮ್ ಅದಾನಿಯವರ ಒಟ್ಟು ಆಸ್ತಿಯ ಮೌಲ್ಯ ದಿಢೀರನೆ ಜಾಸ್ತಿಯಾಗಿದೆ. ಹಾಗಾಗಿ, ಅವರು ದೇಶದ ಅಗ್ರ ಶ್ರೀಮಂತರೆನಿಸಿದ್ದಾರೆ ಎಂದು ತಿಳಿದುಬಂದಿದೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಮುಖ್ಯಸ್ಥ ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಗೌತಮ್ ಅದಾನಿ ಅವರು ದೇಶದ ನಂಬರ್ 1 ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ. ಶುಕ್ರವಾರ (ಜನವರಿ 4) ಬೆಳಗ್ಗೆ 9 ಗಂಟೆ ಸುಮಾರಿಗೆ ಗೌತಮ್ ಅದಾನಿ ಅವರ ಒಟ್ಟು ಆಸ್ತಿಯ ಮೌಲ್ಯ 8.11 ಲಕ್ಷ ಕೋಟಿ ರೂ. (97.6 ಶತಕೋಟಿ ಡಾಲರ್) ಇದೆ. ಇನ್ನು ಮುಕೇಶ್ ಅಂಬಾನಿ ಅವರ ಒಟ್ಟು ಆಸ್ತಿಯ ಮೌಲ್ಯ 8.06 ಲಕ್ಷ ಕೋಟಿ ರೂ. (97.6 ಶತಕೋಟಿ ಡಾಲರ್) ಇದೆ. ಹಾಗಾಗಿ, ಗೌತಮ್ ಅದಾನಿ ದೇಶದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
🚨 Gautam Adani overtakes Mukesh Ambani to become Asia's richest man Hindenburg dispute. pic.twitter.com/rWUopt5DDw
— Indian Tech & Infra (@IndianTechGuide) January 5, 2024
ಇದರೊಂದಿಗೆ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ 12 ಹಾಗೂ ಮುಕೇಶ್ ಅಂಬಾನಿ 13ನೇ ಸ್ಥಾನದಲ್ಲಿದ್ದಾರೆ. ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಟೆಸ್ಲಾ ಕಂಪನಿ ಸಿಇಒ ಎಲಾನ್ ಮಸ್ಕ್ ಅವರು ಅಗ್ರಸ್ಥಾನದಲ್ಲಿದ್ದಾರೆ. ಇವರ ಆಸ್ತಿಯ ಮೌಲ್ಯವು 18.29 ಲಕ್ಷ ಕೋಟಿ ರೂ. ಇದೆ. ನಂತರದ ಸ್ಥಾನದಲ್ಲಿ ಜೆಫ್ ಬೆಜೋಸ್, ಬರ್ನಾರ್ಡ್ ಅರ್ನಾಲ್ಟ್, ಬಿಲ್ ಗೇಟ್ಸ್, ಸ್ಟೀವ್ ಬಾಲ್ಮರ್, ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಸೇರಿ ಹಲವು ಖ್ಯಾತ ಉದ್ಯಮಿಗಳು ಇದ್ದಾರೆ.
ಇದನ್ನೂ ಓದಿ: Gautam Adani : ನಾನು ಗೌತಮ್ ಅದಾನಿ ಅವರನ್ನು ಗೌರವಿಸುತ್ತೇನೆ: ಐಎಎಸ್ ಅಧಿಕಾರಿ ಶಾ ಫೈಸಲ್ ಬೆಂಬಲ
ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಅಕ್ರಮ ಎಸಗಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್ ಸಂಸ್ಥೆಯು 2023ರ ಜನವರಿಯಲ್ಲಿ ಪ್ರಕಟಿಸಿದ ವರದಿಯು ದೇಶದಲ್ಲಿ ಸಂಚಲನ ಮೂಡಿಸಿದೆ. “ಹೂಡಿಕೆದಾರರಿಗೆ ಅದಾನಿ ಗ್ರೂಪ್ ವಂಚನೆ ಮಾಡದೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಷೇರು ಮೌಲ್ಯಗಳನ್ನು ಹೆಚ್ಚು ತೋರಿಸಿರುವುದು ವಂಚನೆಯಾಗಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದಾದ ಬಳಿಕ ಅದಾನಿ ಗ್ರೂಪ್ ಷೇರು ಮೌಲ್ಯವು ದಿಢೀರನೆ ಕುಸಿದು ಭಾರಿ ನಷ್ಟವಾಗಿತ್ತು. ಅಲ್ಲದೆ, ಅದಾನಿ ಗ್ರೂಪ್ ದಿವಾಳಿಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಕೆಲ ದಿನಗಳ ಹಿಂದಷ್ಟೇ ಪ್ರಕರಣವನ್ನು ಎಸ್‌ಐಟಿಗೆ ವಹಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ್ದ ಅದಾನಿ, “ಸತ್ಯ ಮೇವ ಜಯತೆ” ಎಂದಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ