Site icon Vistara News

Gautam Gambhir: ರಾಜಕೀಯಕ್ಕೆ ಗುಡ್‌ಬೈ ಹೇಳಿದ ಗೌತಮ್‌ ಗಂಭೀರ್‌; ಮಾಜಿ ಕ್ರಿಕೆಟಿಗನ ಈ ನಿರ್ಧಾರಕ್ಕೆ ಕಾರಣವೇನು?

gambhir

gambhir

ನವದೆಹಲಿ: ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಅಚ್ಚರಿಯ ಬೆಳವಣಿಗೆಯೊಂದ ನಡೆದಿದ್ದು, ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ (Gautam Gambhir) ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಶನಿವಾರ (ಮಾರ್ಚ್‌ 2) ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ʼʼರಾಜಕೀಯ ಕರ್ತವ್ಯಗಳಿಂದ ಬಿಡುಗಡೆ ಮಾಡುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬಳಿ ಮನವಿ ಮಾಡಿರುವುದಾಗಿʼʼ ತಿಳಿಸಿದ್ದಾರೆ. ಮೈದಾನದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಿದ್ದ ಗಂಭೀರ್‌ 2019ರಲ್ಲಿ ರಾಜಕೀಯಕ್ಕೆ ಧುಮಿಕ್ಕಿದ್ದರು. ಆ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಪೂರ್ವ ದೆಹಲಿಯಿಂದ ಆಯ್ಕೆಯಾಗಿದ್ದರು.

ಕಾರಣವೇನು?

ʼʼರಾಜಕೀಯ ಚಟುವಟಿಕೆಗಳಿಂದ ಬಿಡುಗಡೆ ಮಾಡುವಂತೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಮನವಿ ಮಾಡುತ್ತಿದ್ದೇನೆ. ಇದರಿಂದಾಗಿ ನಾನು ಮುಂಬರುವ ದಿನಗಳಲ್ಲಿ ಕ್ರಿಕೆಟ್ ಬಗ್ಗೆ ಹೆಚ್ಚು ಗಮನಹರಿಸಬಹುದಾಗಿದೆ. ಜನರ ಸೇವೆ ಮಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಜೈ ಹಿಂದ್!ʼʼ ಎಂದು ಗಂಭೀರ್ ಬರೆದುಕೊಂಡಿದ್ದಾರೆ.

2019ರ ಮಾರ್ಚ್‌ನಲ್ಲಿ ಗಂಭೀರ್‌ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಳಿಕ ದೆಹಲಿ ಬಿಜೆಪಿಯ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದೆಹಲಿಯಿಂದ ಕಣಕ್ಕಿಳಿದು ಕಾಂಗ್ರೆಸ್ ಅಭ್ಯರ್ಥಿ ಅರವಿಂದರ್ ಸಿಂಗ್ ಲವ್ಲಿ ವಿರುದ್ಧ ಜಯಗಳಿಸಿದ್ದರು. ಮುಂದಿನ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಸಿಗುವುದಿಲ್ಲ ಎನ್ನುವ ವರದಿ ಹಿನ್ನಲೆಯಲ್ಲಿ ಅವರು ರಾಜಕೀಯದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ ಎನ್ನಲಾಗುತ್ತಿದೆ.

ಮೊದಲ ಪಟ್ಟಿ ಶೀಘ್ರ

2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಶೀಘ್ರದಲ್ಲೇ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಂತಹ ಪ್ರಮುಖರ ಹೆಸರಿರುವ ಸಾಧ್ಯತೆ ಇದೆ. ಹಲವು ಹಾಲಿ ಸಂಸದರಿಗೆ ಈ ಬಾರಿ ಟಿಕೆಟ್‌ ಲಭಿಸುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Gautam Gambhir : ಪಾಕಿಸ್ತಾನ ವಿರುದ್ಧ ಸೋತರೆ… ಗಮನ ಸೆಳೆದ ಗಂಭೀರ್ ಹೇಳಿಕೆ

ಕ್ರಿಕೆಟ್‌ನಲ್ಲಿ ಛಾಪು

42 ವರ್ಷದ ಗಂಭೀರ್‌ ಭಾರತೀಯ ಕ್ರಿಕೆಟ್‌ ತಂಡದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರು 147 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 39.68 ಸರಾಸರಿಯಲ್ಲಿ 5,238 ರನ್ ಗಳಿಸಿದ್ದಾರೆ. ಏಕದಿನದಲ್ಲಿ 11 ಶತಕ ದಾಖಲಿಸಿದ್ದಾರೆ. 2011ರ ವಿಶ್ವಕಪ್ ಫೈನಲ್‌ನಲ್ಲಿ 97 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಅನ್ನು ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಇನ್ನು ಟೆಸ್ಟ್‌ ಪಂದ್ಯದಲ್ಲೂ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಅವರು 58 ಟೆಸ್ಟ್ ಪಂದ್ಯಗಳಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿದ್ದಾರೆ ಮತ್ತು 41.95 ರ ಸರಾಸರಿಯಲ್ಲಿ 4,154 ರನ್​​ ಗಳಿಸಿದ್ದಾರೆ. ಇದರಲ್ಲಿ ಒಂಬತ್ತು ಶತಕಗಳಿವೆ. ಮಾತ್ರವಲ್ಲ 2007ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದಲ್ಲಿಯೂ ಗಂಭೀರ್‌ ಇದ್ದರು. ಐಪಿಎಲ್‌ನಲ್ಲಿಯೂ ಆಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version