ನವದೆಹಲಿ: ಮಾರ್ಚ್‌ಗೆ ಮುಕ್ತಾಯವಾಗಲಿರುವ ಪ್ರಸಕ್ತ ಹಣಕಾಸು ವರ್ಷದಲ್ಲಿ (current fiscal year) ಭಾರತದ ಆರ್ಥಿಕತೆಯು ಶೇ.7.3ರಷ್ಟು ಬೆಳವಣಿಗೆ ಕಾಣಲಿದೆ (GDP Growth) ಎಂದು ಕೇಂದ್ರ ಸರ್ಕಾರವು ಅಂದಾಜಿಸಿದೆ(Indian Government). ಜಾಗತಿಕ ಪ್ರಮುಖ ರಾಷ್ಟ್ರಗಳ (Global Economies) ಪೈಕಿ ಭಾರತದ ಈ ಅಂದಾಜು ಅತಿ ಹೆಚ್ಚು. ಉತ್ಪಾದನಾ ವಲಯದ (Manufacturing Sector) ಮೇಲೆ ಸರ್ಕಾರ ಸಾಕಷ್ಟು ವೆಚ್ಚ ಮಾಡುತ್ತಿದೆ. ಅದರ ಪರಿಣಾಮವೇ ಅಭಿವೃದ್ಧಿ ದರ ಏರಿಕೆಯಾಗಲಿದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿ (National Statistics Office) ಶುಕ್ರವಾರ ತಿಳಿಸಿದೆ.
ಕಳೆದ ತಿಂಗಳು ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಅಭಿವೃದ್ಧಿ ದರವನ್ನು ಶೇ.6.5ರಿಂದ ಅಂದಾಜಿನಿಂದ ಶೇ.7ಕ್ಕೆ ಹೆಚ್ಚಿಸಿತ್ತು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಈಗ ತನ್ನ ಅಂದಾಜು ಬೆಳವಣಿಗೆ ದರವನ್ನು ಪ್ರಕಟಿಸಿದೆ. 2023-24 ಸಾಲಿನ ಆರಂಭಿಕ ಅಂದಾಜುಗಳಾಗಿವೆ ಎಂದು ಹೇಳಿರುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು, ಸುಧಾರಿತ ಡೇಟಾ ಕವರೇಜ್, ನಿಜವಾದ ತೆರಿಗೆ ರಶೀದಿಗಳು ಮತ್ತು ರಾಜ್ಯ ಸಬ್ಸಿಡಿಗಳ ಮೇಲಿನ ಖರ್ಚು ನಂತರದ ಪರಿಷ್ಕರಣೆಗಳ ಮೇಲೆ ಪ್ರಭಾವ ಬೀರಿದೆ ಎಂದು ಅಭಿಪ್ರಾಯಪಟ್ಟಿದೆ. 2022-23ರಲ್ಲಿ ಭಾರತ ಆರ್ಥಿಕತೆ ದರ ಶೇ.7.3 ಇದ್ದರೆ, 2021-22ರಲ್ಲಿ ಶೇ.8.7ರಷ್ಟಿತ್ತು.
ಜಿಡಿಪಿಯ ಸುಮಾರು 17 ಪ್ರತಿಶತದಷ್ಟು ಪಾಲನ್ನು ಹೊಂದಿರುವ ಉತ್ಪಾದನಾ ವಲಯವು 2023-24 ರಲ್ಲಿ ವರ್ಷದಿಂದ ವರ್ಷಕ್ಕೆ 6.5 ಶೇಕಡಾ ವಿಸ್ತರಿಸಲಿದೆ ಎಂದು ಅಂದಾಜಿಸಲಾಗಿದೆ. ಒಂದು ವರ್ಷದ ಹಿಂದಿನ 1.3 ಶೇಕಡಾಕ್ಕೆ ಹೋಲಿಸಿದರೆ, ನಿರ್ಮಾಣ ಉತ್ಪಾದನೆಯು ಶೇಕಡಾ 10.7 ರಷ್ಟು ಬೆಳೆಯುತ್ತಿದೆ. ಹಿಂದಿನ ವರ್ಷಕ್ಕಿಂತ 10 ಪ್ರತಿಶತದಷ್ಟು ಹೆಚ್ಚು ಎಂದು ಸಾಂಖ್ಯಿಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆದರೆ, ಚಿಂತೆಗೀಡು ಮಾಡುವ ವಿಷಯವೂ ಇದೆ. ದೇಶದ ಒಟ್ಟು ಜಿಡಿಪಿಗೆ ಶೇ.15ರಷ್ಟು ಕಾಣಿಕೆ ನೀಡುವ ಕೃಷಿ ವಲಯವು ಆತಂಕಕ್ಕೆ ಕಾರಣವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಅದರ ಅಭಿವೃದ್ಧಿ ದರವು 1.8 ಪ್ರತಿಶತದಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಈ ದರವು ಶೇ.4ರಷ್ಟಿತ್ತು ಎಂದು ಹೇಳಲಾಗಿದೆ. ಸೆಪ್ಟೆಂಬರ್‌ಗೆ ಮುಕ್ತಾಯವಾದ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಹೆಚ್ಚು ಅಂದರೆ ಶೇ.7.6ರಷ್ಟು ಆರ್ಥಿಕಾಭಿವೃದ್ಧಿಯನ್ನು ದಾಖಲಿಸಿತ್ತು. ಈ ಹಿಂದಿನ ತ್ರೈಮಾಸಿಕದಲ್ಲಿ ಶೇ.7.8 ದರ ದಾಖಲಾಗಿತ್ತು. ಇದರಿಂದಾಗಿ ಅನೇಕ ಖಾಸಗಿ ಆರ್ಥಿಕ ತಜ್ಞರು ತಮ್ಮ ಅಂದಾಜನ್ನು ಪರಿಷ್ಕರಿಸಿಕೊಳ್ಳಲು ಕಾರಣವಾಯಿತು.
ಎಸ್ ಆ್ಯಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಭಾರತವು ಮುಂದಿನ ಮೂರು ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿಯುತ್ತದೆ ಎಂದು ಹೇಳಿದೆ. 2030 ರ ವೇಳೆಗೆ ಜಪಾನ್ ಮತ್ತು ಜರ್ಮನಿಯನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂಬುದು ಅದರ ಅಂದಾಜಾಗಿದೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಜಿಡಿಪಿ ಬೆಳವಣಿಗೆ ಇನ್ನಷ್ಟು ಪ್ರಗತಿಗೆ ನಾಂದಿಯಾಗಲಿ