ನವ ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Economic Survey 2023) ಅವರು ಸಂಸತ್ತಿನಲ್ಲಿ 2023-24 ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದಾರೆ. 2023ರ ಏಪ್ರಿಲ್ 1ರಿಂದ ಆರಂಭವಾಗುವ 2023-24ರ ಸಾಲಿನಲ್ಲಿ ದೇಶ 6%ರಿಂದ 6.8%ರ ಜಿಡಿಪಿ ಬೆಳವಣಿಗೆ ದಾಖಲಿಸುವ ನಿರೀಕ್ಷೆ ಇದೆ ಎಂಬ ಮುನ್ನೋಟವನ್ನು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಭಾರತವು ಕೋವಿಡ್ ಬಿಕ್ಕಟ್ಟಿನಿಂದ ಕ್ಷಿಪ್ರವಾಗಿ ಚೇತರಿಸಿದೆ. ದೇಶೀಯ ಮಾರುಕಟ್ಟೆಯ ಬೇಡಿಕೆ ಚುರುಕಾಗಿದೆ. ಬಂಡವಾಳ ಹೂಡಿಕೆ ಪ್ರಗತಿಯಲ್ಲಿದೆ. ಜಾಗತಿಕ ಮಟ್ಟದಲ್ಲಿ ತಲ್ಲಣಗಳ ಹೊರತಾಗಿಯೂ ಆರ್ಥಿಕ ಬೆಳವಣಿಗೆ ಅಬಾಧಿತವಾಗಿದೆ. ಮೂಲಭೂತ ಅಂಶಗಳು ಪ್ರಬಲವಾಗಿದೆ. ಆಮದು-ರಫ್ತು ನಡುವಣ ಅಂತರ ಹೆಚ್ಚಾಗಿರುವುದರಿಂದ ಈ ವರ್ಷ ರೂಪಾಯಿ ಮೇಲೆ ಒತ್ತಡ ಹೆಚ್ಚುವ ಆತಂಕ ಇದೆ.
ಭಾರತದ ಕೃಷಿ ಕ್ಷೇತ್ರ 2023-24ರಲ್ಲೂ ಪ್ರಬಲ ಬೆಳವಣಿಗೆ ದಾಖಲಿಸುವ ನಿರೀಕ್ಷೆ ಇದೆ. ಕಳೆದ 6 ವರ್ಷಗಳಲ್ಲಿ ವಾರ್ಷಿಕ ಸರಾಸರಿ 4.6% ರ ಬೆಳವಣಿಗೆ ದಾಖಲಿಸಿತ್ತು. ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿರುವುದು, ವಿಸ್ತರಿಸಿರುವುದು, ಕೃಷಿ ವೈವಿಧ್ಯತೆಗೆ ಬೆಂಬಲಿಸಿರುವುದು ಇದಕ್ಕೆ ಕಾರಣ ಎಂದಿದೆ. ಆರ್ಥಿಕ ಸಮೀಕ್ಷೆ ಪ್ರಕಾರ ಅಧಿಕ ಬಂಡವಾಳ ವೆಚ್ಚ, ಸಾಲ ವಿತರಣೆ, ಖಾಸಗಿ ವೆಚ್ಚ ಹೆಚಳ, ನಗರಗಳಿಗೆ ಕಾರ್ಮಿಕರ ಮರು ವಲಸೆಯಿಂದ ಆರ್ಥಿಕ ಚಟುವಟಿಕೆಗಳು ಚುರುಕಾಗಿವೆ.