Site icon Vistara News

Ayodhya Ram Mandir: ʼಗೆಟ್‌ ಔಟ್ʼ:‌ ಅಯೋಧ್ಯೆ ರಾಮ ಮಂದಿರ ಟೀಕಿಸಿದ ಮಣಿಶಂಕರ ಅಯ್ಯರ್‌ಗೆ ನೋಟಿಸ್

Mani shankar Aiyar on ayodhya ram mandir

ಹೊಸದಿಲ್ಲಿ: ಜನವರಿ 22ರಂದು ಅಯೋಧ್ಯೆ ರಾಮ ಮಂದಿರದ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆ (Pran Prathishta) ಸಮಾರಂಭವನ್ನು ಟೀಕಿಸಿ ಸಾಮಾಜಿಕ ಮಾಧ್ಯಮದಲ್ಲಿ (Social media) ಪೋಸ್ಟ್ ಮಾಡಿದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ (Mani Shankar Aiyar) ಮತ್ತು ಅವರ ಪುತ್ರಿ ಸುರನ್ಯಾ ಅಯ್ಯರ್ ಅವರಿಗೆ ದೆಹಲಿಯ ಜಂಗ್‌ಪುರದಲ್ಲಿರುವ ತಮ್ಮ ಮನೆಯನ್ನು ಖಾಲಿ ಮಾಡುವಂತೆ ಅಲ್ಲಿನ ನಿವಾಸಿಗಳ ಕ್ಷೇಮಾಭ್ಯುದಯ ಮಂಡಳಿ ನೋಟೀಸ್ ನೀಡಿದೆ.

ವಸತಿ ಸಮುಚ್ಚಯದ ಇತರ ನಿವಾಸಿಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ, ಶಾಂತಿಗೆ ಭಂಗ ತರುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ನೋಟೀಸ್‌ನಲ್ಲಿ ಒತ್ತಾಯಿಸಲಾಗಿದೆ. “ಕಾಲನಿಯಲ್ಲಿ ಶಾಂತಿ ಕದಡುವ ಅಥವಾ ನಿವಾಸಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಮಾತುಗಳನ್ನು ನಾವು ಪ್ರಶಂಸಿಸುವುದಿಲ್ಲ” ಎಂದು ನೋಟೀಸ್ ತಿಳಿಸಿದೆ. “ಅಯೋಧ್ಯೆಯಲ್ಲಿ ರಾಮಮಂದಿರದ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆಯನ್ನು ವಿರೋಧಿಸಿ ನೀವು ಮಾಡಿರುವುದು ಸರಿ ಎಂದು ನೀವು ಭಾವಿಸಿದರೆ, ಅಂತಹ ದ್ವೇಷಪೂರ್ವಕ ಸಂಗತಿಗಳಿಗೆ ಕುರುಡಾಗಿರುವ ಬೇರೆ ಯಾವುದಾದರೂ ಕಾಲನಿಗೆ ನೀವು ಹೋಗುವಂತೆ ನಾವು ನಿಮಗೆ ಸೂಚಿಸುತ್ತೇವೆ” ಎಂದು ನೋಟೀಸ್‌ ಹೇಳಿದೆ.

ಜನವರಿ 20ರಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಸುರನ್ಯಾ ಅಯ್ಯರ್ ಅವರು, ʼರಾಮಮಂದಿರದ (Ayodhya Ram Mandir) ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ವಿರೋಧಿಸಿ ಉಪವಾಸ ಮಾಡುವುದಾಗಿʼ ಹೇಳಿಕೊಂಡಿದ್ದರು. ʼತಮ್ಮ ಉಪವಾಸವು ಸಹ ಮುಸ್ಲಿಂ ನಾಗರಿಕರಿಗೆ ತಾನು ತೋರಿಸುವ ಪ್ರೀತಿ ಮತ್ತು ದುಃಖದ ಅಭಿವ್ಯಕ್ತಿಯಾಗಿದೆʼ ಎಂದು ಅವರು ಹೇಳಿದ್ದರು.

“ಸಾಮಾಜಿಕ ಮಾಧ್ಯಮಗಳ ಮೂಲಕ ಶ್ರೀಮತಿ ಅಯ್ಯರ್ ಹೇಳಿರುವುದು ಸುಶಿಕ್ಷಿತ ವ್ಯಕ್ತಿಗೆ ತಕ್ಕುದಲ್ಲ. 500 ವರ್ಷಗಳ ನಂತರ ರಾಮಮಂದಿರವನ್ನು ನಿರ್ಮಿಸಲಾಗುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ 5-0 ಬಹುಮತದ ತೀರ್ಪಿನ ನಂತರ ರಾಮಮಂದಿರವನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಅರ್ಥ ಮಾಡಿಕೊಳ್ಳಬೇಕು. ನೀವು ವಾಕ್ ಸ್ವಾತಂತ್ರ್ಯದ ಬಗ್ಗೆ ಹೇಳಬಹುದು; ಆದರೆ ದಯವಿಟ್ಟು ನೆನಪಿಡಿ, ಭಾರತದ ಸುಪ್ರೀಂ ಕೋರ್ಟ್ ಪ್ರಕಾರ ವಾಕ್ ಸ್ವಾತಂತ್ರ್ಯ ಸ್ವಯಂಪೂರ್ಣವಲ್ಲ” ಎಂದು ನೋಟೀಸ್‌ನಲ್ಲಿ ಹೇಳಲಾಗಿದೆ.

ಮಣಿಶಂಕರ ಅಯ್ಯರ್ ಅವರಿಗೆ ತಮ್ಮ ಮಗಳ ಪೋಸ್ಟ್ ಅನ್ನು ಖಂಡಿಸುವಂತೆ ಅಥವಾ ಮನೆ ಖಾಲಿ ಮಾಡುವಂತೆ ಒತ್ತಾಯಿಸಲಾಗಿದೆ. ʼಜನರನ್ನು ಪ್ರಚೋದಿಸಬೇಡಿ, ನಾಗರಿಕರಲ್ಲಿ ದ್ವೇಷ ಮತ್ತು ಅಪನಂಬಿಕೆಯನ್ನು ಸೃಷ್ಟಿಸಬೇಡಿʼ ಎಂದು ಸಂಘವು ಅಯ್ಯರ್‌ ಅವರನ್ನು ಒತ್ತಾಯಿಸಿದೆ.

“ನಿಮ್ಮ ದೇಶದ ಒಳಿತಿಗಾಗಿ ನೀವು ರಾಜಕೀಯದಲ್ಲಿ ಏನು ಬೇಕಾದರೂ ಮಾಡಬಹುದು. ಆದರೆ ನೀವು ಏನು ಹೇಳುತ್ತೀರೋ ಅಂತಹ ನಿಮ್ಮ ಮಾತುಗಳು ವಸತಿ ಕಾಲನಿಗೆ ಒಳ್ಳೆಯ ಅಥವಾ ಕೆಟ್ಟ ಹೆಸರನ್ನು ತರುತ್ತವೆ ಎಂಬುದನ್ನು ನೆನಪಿಡಿ. ಆದ್ದರಿಂದ, ದಯವಿಟ್ಟು ಅಂತಹ ಪೋಸ್ಟ್‌ಗಳು/ಕಾಮೆಂಟ್‌ಗಳನ್ನು ಮಾಡುವುದನ್ನು ತಡೆಯಲು ವಿನಂತಿಸಲಾಗಿದೆ” ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ಅಯೋಧ್ಯೆಯ ರಾಮಮಂದಿರದ ಪ್ರತಿಷ್ಠಾಪನಾ ಸಮಾರಂಭವು ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಲಕ್ಷಾಂತರ ಹಿಂದೂಗಳು ಅದ್ಧೂರಿಯಿಂದ ಆಚರಿಸಿದ್ದರು. 70 ಎಕರೆ ಸಂಕೀರ್ಣದಲ್ಲಿ 2.67 ಎಕರೆ ಪ್ರದೇಶದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಎರಡನೇ ಮತ್ತು ಅಂತಿಮ ಹಂತವು ಡಿಸೆಂಬರ್ 2025ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಯೋಜನೆಗೆ ₹1,500 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Ram Mandir : ಅಯೋಧ್ಯೆಯಿಂದ 8 ನಗರಗಳಿಗೆ ನೇರ ವಿಮಾನ; ಇಲ್ಲಿದೆ ಪೂರ್ಣ ವೇಳಾಪಟ್ಟಿ

Exit mobile version