ಗಾಂಧಿನಗರ: 17 ವರ್ಷದ ಬಾಲಕಿಯ ಗರ್ಭಪಾತಕ್ಕೆ ಅನುಮತಿ ನೋಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದೆ. ಅತ್ಯಾಚಾರ ಸಂತ್ರಸ್ತೆ ಗರ್ಭ ಧರಿಸಿ ಈಗ ತಿಂಗಳಾಗಿದೆ. ಆಕೆಯ ಗರ್ಭಪಾತಕ್ಕೆ ಕೋರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ತಳ್ಳಿಹಾಕಿದೆ. ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯವು, “ಮೊದಲೆಲ್ಲ 17 ವರ್ಷದ ಹೆಣ್ಣುಮಕ್ಕಳು ಮಕ್ಕಳನ್ನು ಹೆರುತ್ತಿದ್ದರು, 14-15 ವರ್ಷಕ್ಕೆ ಮದುವೆಯಾಗುತ್ತಿದ್ದರು. ಇದೆಲ್ಲ ತಿಳಿಯಲು (Viral News) ಮನುಸ್ಮೃತಿ ಓದಿ” ಎಂದು ಕೂಡ ಹೇಳಿದೆ.
ಅತ್ಯಾಚಾರ ಸಂತ್ರಸ್ತೆಯ ವಯಸ್ಸನ್ನು ಪರಿಗಣಿಸಿ, ಆಕೆಗೆ ವೈದ್ಯಕೀಯ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಸಂತ್ರಸ್ತ ಬಾಲಕಿಯ ತಂದೆಯು ಅರ್ಜಿ ಸಲ್ಲಿಸಿದ್ದರು. “ಹಿಂದಿನ ಕಾಲದಲ್ಲಿ 18 ವರ್ಷ ತುಂಬುವ ಮೊದಲೇ ಹೆಣ್ಣುಮಕ್ಕಳು ಮದುವೆಯಾಗಿ, ಮಕ್ಕಳನ್ನು ಹೆರುತ್ತಿದ್ದರು ಎಂಬುದು ಗೊತ್ತಿರಲಿ. ಇದನ್ನು ನೀವು ಓದಿಲ್ಲವೆಂದರೆ, ಮನುಸ್ಮೃತಿ ಓದಿ ತಿಳಿದುಕೊಳ್ಳಿ” ಎಂದು ನ್ಯಾಯಮೂರ್ತಿ ಸಮೀರ್ ಜೆ ದಾವೆ ಹೇಳಿದರು.
ಸಂತ್ರಸ್ತೆಯ ತಂದೆ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿಕಂದರ್ ಸೈಯದ್, “ಆಗಸ್ಟ್ 18ರಂದು ಬಾಲಕಿಯು ಮಗು ಹೆರುವ ಸಾಧ್ಯತೆ ಇದೆ. ವೈದ್ಯರು ಡೇಟ್ ಕೊಟ್ಟಿದ್ದಾರೆ. ಆಕೆಯ ವಯಸ್ಸನ್ನು ಪರಿಗಣಿಸಿ ಗರ್ಭಪಾತಕ್ಕೆ ಅನುಮತಿ ನೀಡಬೇಕು” ಎಂದು ವಾದ ಮಂಡಿಸಿದರು. ಆದರೆ, ನ್ಯಾಯಾಲಯವು, “ಬಾಲಕಿ ಹಾಗೂ ಮಗು ಆರೋಗ್ಯವಾಗಿದ್ದರೆ ಗರ್ಭಪಾತಕ್ಕೆ ಅನುಮತಿ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿತು. ಹಾಗೆಯೇ, ಬಾಲಕಿಯ ವೈದ್ಯಕೀಯ ಪರೀಕ್ಷೆಗೆ ಆದೇಶಿಸಿತು.
ಇದನ್ನೂ ಓದಿ: Video Viral: ಚಾಮರಾಜನಗರದಲ್ಲಿ ಹಾವುಗಳ ಮಿಲನ; ಗಂಟೆಗೂ ಹೆಚ್ಚು ಸರಸ ಸಲ್ಲಾಪ! ವೈರಲ್ ಆಯ್ತು ವಿಡಿಯೊ
ರಾಜಕೋಟ್‌ನಲ್ಲಿರುವ ಸಿವಿಲ್ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಅವರು ಬಾಲಕಿ ಹಾಗೂ ಆಕೆಯ ಹೊಟ್ಟೆಯಲ್ಲಿರುವ ಮಗುವಿನ ವೈದ್ಯಕೀಯ ತಪಾಸಣೆಯನ್ನು ತುರ್ತಾಗಿ ಮಾಡಬೇಕು ಎಂದು ಗುಜರಾತ್ ಹೈಕೋರ್ಟ್ ನಿರ್ದೇಶನ ನೀಡಿದೆ. ವೈದ್ಯಕೀಯ ವರದಿಯನ್ನು ಆಧರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ ನ್ಯಾಯಾಲಯವು, ಜೂನ್ 15ಕ್ಕೆ ವಿಚಾರಣೆ ಮುಂದೂಡಿದೆ.
ಸಹೋದರನಿಂದಲೇ ಗರ್ಭ ಧರಿಸಿದ 15 ವರ್ಷದ ಬಾಲಕಿಯ ಗರ್ಭಪಾತಕ್ಕೆ ಕೆಲ ದಿನಗಳ ಹಿಂದೆ ಕೇರಳ ಹೈಕೋರ್ಟ್ ಅನುಮತಿ ನೀಡಿತ್ತು. ಗರ್ಭಪಾತ ಮಾಡಿಸಲು ಅನುಮತಿ ಕೋರಿ ಬಾಲಕಿಯ ತಂದೆ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ್ದ ಏಕ ಸದಸ್ಯ ಪೀಠದ ನ್ಯಾ. ಜಿಯಾದ್ ರೆಹಮಾನ್ ಅವರು ಗರ್ಭಪಾತ ಮಾಡಿಸಲು ಅನುಮತಿ ನೀಡಿದ್ದರು.
“ಗರ್ಭಪಾತಕ್ಕೆ ಅನುಮತಿ ನೀಡದೆ ಹೋದರೆ ಸಾಮಾಜಿಕ ವ್ಯವಸ್ಥೆ ಹಾಗೂ ಬಾಲಕಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಗರ್ಭಪಾತಕ್ಕೆ ಅನುಮತಿ ನೀಡಲಾಗಿದೆ” ಎಂದು ಸ್ಪಷ್ಟಪಡಿಸಿತು. ವೈದ್ಯಕೀಯ ಮಂಡಳಿಯು ಗರ್ಭಪಾತದ ಕುರಿತು ವರದಿ ಸಲ್ಲಿಸಿತ್ತು. 15 ವರ್ಷದ ಬಾಲಕಿಗೆ ಗರ್ಭಪಾತಕ್ಕೆ ಅನುಮತಿ ನೀಡದಿದ್ದರೆ ಸಾಮಾಜಿಕ ವ್ಯವಸ್ಥೆ ಹಾಗೂ ಆಕೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಹಾಗಾಗಿ, ಗರ್ಭಪಾತಕ್ಕೆ ಅನುಮತಿ ಸಿಕ್ಕಿತ್ತು.