Site icon Vistara News

Goa Politics: 11ರಲ್ಲಿ 10 ಶಾಸಕರು ಸಭೆಗೆ ಹಾಜರ್‌, ದಿಗಂಬರ್‌ ಕಾಮತ್‌ ಒಬ್ಬರೇ ಮಿಸ್ಸಿಂಗ್‌, ಕಾಂಗ್ರೆಸ್‌ ನಿಟ್ಟುಸಿರು!

Goa Congress

ಪಣಜಿ: ಗೋವಾ ಕಾಂಗ್ರೆಸ್‌ ತನಗೆ ಎದುರಾದ ದೊಡ್ಡದೊಂದು ಬಿಕ್ಕಟ್ಟಿನಿಂದ ಸದ್ಯಕ್ಕೆ ಪಾರಾಗಿದೆ (Goa politcis). ಮಹಾರಾಷ್ಟ್ರದ ಶಿವಸೇನೆ ಮಾದರಿಯಲ್ಲೇ ೧೧ ಶಾಸಕರ ಪೈಕಿ ಐದು ಮಂದಿ ಬೇರೆ ಗುಂಪು ಕಟ್ಟಿಕೊಂಡು ಬಿಜೆಪಿಗೆ ಹಾರಲು ಸಿದ್ಧರಾಗಿರುವ ಮಾಹಿತಿಯಿಂದ ಅದು ಕಂಗೆಟ್ಟಿತ್ತು. ಮೈಖೆಲ್ ಲೋಬೊ, ದಿಗಂಬರ ಕಾಮತ್‌, ಕೇದಾರ ನಾಯಕ್‌, ರಾಜೇಶ್‌ ಫಲ್ಡೇಸಾಯಿ, ಡೆಲಿಯಾಲ್‌ ಲೋಬೊ ಅವರು ಕಾಂಗ್ರೆಸ್‌ ಸಂಪರ್ಕದಿಂದಲೇ ತಪ್ಪಿ ಹೋಗಿದ್ದರು. ಆದರೆ, ಈಗ ಹಿರಿಯ ನಾಯಕ ಮುಕುಲ್‌ ವಾಸ್ನಿಕ್‌ ಮತ್ತು ರಾಜ್ಯದ ಕಾಂಗ್ರೆಸ್‌ ಉಸ್ತುವಾರಿ ದಿನೇಶ್‌ ಗುಂಡೂ ರಾವ್‌ ಅವರ ಪ್ರಯತ್ನದ ಫಲವಾಗಿ ಬಂಡಾಯ ತಣ್ಣಗಾಗಿದೆ. ೧೧ರಲ್ಲಿ ೧೦ ಮಂದಿ ಶಾಸಕರು ಈಗ ಕಾಂಗ್ರೆಸ್‌ ಸಭೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಏಕತೆಯನ್ನು ಸಾರಿದ್ದಾರೆ. ಆದರೆ, ದಿಗಂಬರ ಕಾಮತ್‌ ಮಾತ್ರ ಇನ್ನೂ ಮಿಸ್ಸಿಂಗ್‌

ಮಾಜಿ ಮುಖ್ಯಮಂತ್ರಿಯೂ ಆಗಿರುವ ದಿಗಂಬರ ಕಾಮತ್‌ ಅವರು ತಂಡವೊಂದನ್ನು ಕಟ್ಟಿಕೊಂಡು ಬಿಜೆಪಿಗೆ ಹೋಗಲು ಪ್ಲ್ಯಾನ್‌ ಮಾಡಿದ್ದರು ಎನ್ನಲಾಗಿದೆ. ಆರು ಜನ ಕಾಂಗ್ರೆಸ್‌ ಶಾಸಕರನ್ನು ಗೋವಾದಿಂದ ಹೊರಗೆ ಕರೆದೊಯ್ಯಲು ಬಿಜೆಪಿ ಎಲ್ಲ ರೀತಿಯ ಪ್ಲ್ಯಾನ್‌ ಮಾಡಿತ್ತು ಎಂಬ ಆರೋಪವಿತ್ತು. ಒಬ್ಬೊಬ್ಬ ಶಾಸಕರಿಗೂ ೧೫ರಿಂದ ೨೦ ಕೋಟಿ ರೂ. ನೀಡುವ ಆಮಿಷ ಒಡ್ಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಸೂಕ್ತ ಸಂಖ್ಯೆಯಲ್ಲಿ ಶಾಸಕರು ಒಟ್ಟುಗೂಡದೆ ಪ್ಲ್ಯಾನ್‌ ಯಶಸ್ವಿಯಾಗಲಿಲ್ಲ ಎನ್ನಲಾಗಿದೆ. ಆದರೆ, ಸದ್ಯಕ್ಕೆ ದಿಗಂಬರ ಕಾಮತ್‌ ಮಾತ್ರ ಕಾಂಗ್ರೆಸ್‌ ನಾಯಕರ ಕೈಗೆ ಸಿಕ್ಕಿಲ್ಲ.

೧೦ ಮಂದಿ ಶಾಸಕರು ಬಂದಿದ್ದರು
ಸಮಸ್ಯೆಯನ್ನು ಬಗೆಹರಿಸಲು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದಲೇ ನಿಯೋಜಿತರಾಗಿದ್ದ ಮುಕುಲ್‌ ವಾಸ್ನಿಕ್‌ ಮತ್ತು ದಿನೇಶ್‌ ಗುಂಡೂ ರಾವ್‌ ಅವರ ಶಾಸಕರ ಸಭೆಯನ್ನು ಕರೆದಿದ್ದು, ಅದಕ್ಕೆ ೧೦ ಮಂದಿ ಆಗಮಿಸಿದ್ದರು. ವಿಶೇಷವೆಂದರೆ, ಭಾನುವಾರದಿಂದ ಕಾಂಗ್ರೆಸ್‌ ನಾಯಕರ ಸಂಪರ್ಕದಿಂದ ತಪ್ಪಿಸಿಕೊಂಡಿದ್ದ ಮೈಖೆಲ್‌ ಲೋಬೊ ಅವರು ಕೂಡಾ ಸಭೆಗೆ ಬಂದಿದ್ದರು. ʻʻನಾನು ಕಾಂಗ್ರೆಸ್‌ ಜತೆಗೇ ಇದ್ದೇನೆ. ಹೊರಗಿನವರು ನನ್ನನ್ನು ಟಾರ್ಗೆಟ್‌ ಮಾಡುತ್ತಿದ್ದಾರೆʼʼ ಎಂದು ಅವರು ಸಭೆಯಲ್ಲಿ ಹೇಳಿದರು.

ಸಂಬಂಧವೇ ಇಲ್ಲ ಎಂದ ಸಾವಂತ್‌
ಈ ನಡುವೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ| ಗೋವಾದಲ್ಲಿ ದಿನೇಶ್‌ ಗುಂಡೂರಾವ್‌; ವಿಧಾನಸಭೆ ವಿಪಕ್ಷ ನಾಯಕನ ಸ್ಥಾನದಿಂದ ಮೈಕೆಲ್‌ ಲೋಬೋ ವಜಾ

Exit mobile version