ನವದೆಹಲಿ: ಸುಮಾರು 127ವರ್ಷ ಇತಿಹಾಸ ಹೊಂದಿರುವ ಗೋದ್ರೇಜ್ ಗ್ರೂಪ್(Godrej Group)ನ ಸಂಸ್ಥಾಪನಾ ಕುಟುಂಬ ತನ್ನ ವ್ಯವಹಾರವನ್ನು ಎರಡು ಶಾಖೆಗಳ ನಡುವೆ ವಿಭಜಿಸುವ ಒಪ್ಪಂದವನ್ನು ಅಂತಿಮಗೊಳಿಸಿದೆ. ಒಂದು ಕಡೆ ಆದಿ ಗೋದ್ರೇಜ್(Adi Godrej) ಮತ್ತು ಅವರ ಸಹೋದರ ನಾದಿರ್ ಗೋದ್ರೇಜ್(Nadir godrej) ಮತ್ತೊಂದು ಕಡೆ ಅವರ ಸೋದರ ಸಂಬಂಧಿ ಜಮ್ಶೆಡ್(Jamshyd Godrej) ಮತ್ತು ಸ್ಮಿತಾ ಗೋದ್ರೇಜ್( Smita Godrej) ಅವರಿಗೆ ಈ ಗೋದ್ರೇಜ್ ಸಮೂಹವನ್ನು ವಿಭಜಿಸಿ ಅಧಿಕಾರ ವಹಿಸಲಾಗಿದೆ. ಆದಿ ಮತ್ತು ನಾದಿರ್, ಐದು ಕಂಪನಿಗಳನ್ನೊಳಗೊಂಡಂತೆ ಗೋದ್ರೇಜ್ ಇಂಡಸ್ಟ್ರೀಸ್ ಅನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಇನ್ನು ಜಮ್ಶೆಡ್ ಮತ್ತು ಸ್ಮಿತಾ, ಗೋದ್ರೇಜ್ & ಬಾಯ್ಸ್ ಹಾಗೂ ಅದರ ಸಹಸಂಸ್ಥೆಗಳು, ಮುಂಬೈನಲ್ಲಿರುವ ಪ್ರಮುಖ ಆಸ್ತಿಗಳನ್ನು ಪಡೆದಿದ್ದಾರೆ.
ಇನ್ನು ಈ ಬಗ್ಗೆ ಸ್ವತಃ ಗೋದ್ರೇಜ್ ಗ್ರೂಪ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಸಂಸ್ಥಾಪನಾ ಕುಟುಂಬವು ಆದಿ ಗೋದ್ರೇಜ್(82), ನಾದಿರ್ (73) ಹಾಗೂ ಜಮ್ಶೆಡ್ ಗೋದ್ರೇಜ್(75), ಮತ್ತು ಸ್ಮಿತಾ ಗೋದ್ರೇಜ್(74) ಅವರಿಗೆ ಆಸ್ತಿ, ವ್ಯವಹಾರ, ಶೇರುಗಳನ್ನು ಹಂಚಿದೆ ಎಂದು ತಿಳಿಸಿದೆ.
ಗೋದ್ರೇಜ್ & ಬಾಯ್ಸ್ ಮತ್ತು ಅದರ ಅಂಗಸಂಸ್ಥೆಗಳನ್ನು ಗೋದ್ರೇಜ್ ಎಂಟರ್‌ಪ್ರೈಸಸ್ ಗ್ರೂಪ್ ಒಳಗೊಂಡಿದ್ದು, ವೈಮಾನಿಕ ಮತ್ತು ವಾಯುಯಾನ ರಕ್ಷಣೆ, ಪೀಠೋಪಕರಣಗಳು ಮತ್ತು ಐಟಿ ಸಾಫ್ಟ್‌ವೇರ್ ಹೀಗೆ ಹಲವು ಉದ್ಯಮಗಳಾದ್ಯಂತ ಅಸ್ತಿತ್ವವನ್ನು ಹೊಂದಿದೆ. ಇನ್ನು ಮುಂದೆ ಜಮ್ಶೆಡ್ ಗೋದ್ರೇಜ್ ಅವರು ಈ ಸಂಸ್ಥೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರ ಸಹೋದರಿ ಸ್ಮಿತಾ ಅವರ ಪುತ್ರಿ ನೈರಿಕಾ ಹೋಲ್ಕರ್ (42) ಕಾರ್ಯಕಾರಿ ನಿರ್ದೇಶಕಿಯಾಗಲಿದ್ದಾರೆ. ಈ ಕುಟುಂಬವು ಮುಂಬೈನಲ್ಲಿ 3,400 ಎಕರೆ ಭೂಮಿಯ ಒಡೆತನ ಪಡೆದಿದೆ.
ಇನ್ನು ಆದಿ ಮತ್ತು ನಾದಿರ್ ಗೋದ್ರೇಜ್ ಅವರು ಗೋದ್ರೇಜ್ ಇಂಡಸ್ಟ್ರೀಸ್ ಗ್ರೂಪ್‌ನ ಒಡೆತನ ಪಡೆದಿದ್ದು, ಇದು ಗೋದ್ರೇಜ್ ಇಂಡಸ್ಟ್ರೀಸ್, ಗೋದ್ರೇಜ್ ಗ್ರಾಹಕ ಉತ್ಪನ್ನಗಳು, ಗೋದ್ರೇಜ್ ಪ್ರಾಪರ್ಟೀಸ್, ಗೋದ್ರೇಜ್ ಅಗ್ರೋವೆಟ್ ಮತ್ತು ಅಸ್ಟೆಕ್ ಲೈಫ್ ಸೈನ್ಸಸ್ ಕಂಪನಿಗಳನ್ನು ಒಳಗೊಂಡಿದೆ. ನಾದಿರ್ ಗೋದ್ರೇಜ್ ಅವರನ್ನು ಕಂಪನಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದ್ದು, ಆದಿ ಗೋದ್ರೇಜ್ ಮೇಲ್ವಿಚಾರಣೆ ಮಾಡಲಿದ್ದಾರೆ. ಆದಿ ಅವರ ಪುತ್ರ ಪಿರೋಜ್ ಶಾ ಗೋದ್ರೇಜ್(42), ಜಿಐಜಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಲಿದ್ದಾರೆ ಮತ್ತು ಆಗಸ್ಟ್ 2026 ರಲ್ಲಿ ನಾದಿರ್ ಅವರ ನಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಇನ್ನು ಈ ಅಧಿಕಾರ ವಿಭಜನೆ ಯಾವುದೇ ವೈಮನಸ್ಸು, ಜಗಳದಿಂದ ನಡೆದಿಲ್ಲ. ಬಹಳ ಗೌರವಯುತವಾಗಿ, ನಡೆದಿದೆ. ಕುಟುಂಬದ ಸೌಹಾರ್ದನೆ ಮುಂದೆಯೂ ಹೀಗೆ ಮುಂದುವರೆಯಬೇಕೆಂಬ ಉದ್ದೇಶದಿಂದ ಮತ್ತು ಶತಮಾನದ ಇತಿಹಾಸವಿರುವ ಸಂಸ್ಥೆಯ ಉನ್ನತಿಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇನ್ನೂ ಎರಡೂ ಸಮೂಹಗಳು ಗೋದ್ರೇಜ್ ಎಂಬ ಬ್ರ್ಯಾಂಡ್ ಅನ್ನು ಈಗಿರುವಂತೆಯೇ ಬಳಸಿಕೊಳ್ಳಲಿದೆ.
ಇದನ್ನೂ ಓದಿ:Assault Case: ನನ್ನ ಪ್ರೇಯಸಿಗೆ ಮೆಸೇಜ್ ಮಾಡ್ತೀಯಾ ಎಂದು ಬೆರಳು ಕಟ್!
1897 ರಲ್ಲಿ ಅರ್ದೇಶಿರ್ ಗೋದ್ರೇಜ್ ಮತ್ತು ಪಿರೋಜ್ ಶಾ ಗೋದ್ರೇಜ್ ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ನಿಧಾನವಾಗಿ ಉದ್ಯಮ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಲು ಶುರು ಮಾಡಿದ್ದ ಗೋದ್ರೇಜ್ ಸಂಸ್ಥೆ, ರಿಯಲ್ ಎಸ್ಟೇಟ್, ಗ್ರಾಹಕ ಉತ್ಪನ್ನಗಳು, ಕೈಗಾರಿಕಾ ಎಂಜಿನಿಯರಿಂಗ್, ಉಪಕರಣಗಳು, ಪೀಠೋಪಕರಣಗಳು, ಭದ್ರತೆ ಮತ್ತು ಕೃಷಿ ಉತ್ಪನ್ನಗಳು ಸೇರಿದಂತೆ ಕ್ಷೇತ್ರಗಳಲ್ಲೂ ಯಶಸ್ವಿಯಾಗಿತ್ತು.