Site icon Vistara News

Gold Loan: ಅರ್ಬನ್ ಸಹಕಾರಿ ಬ್ಯಾಂಕ್‍ಗಳ ಚಿನ್ನದ ಸಾಲದ ಮಿತಿ 2 ಲಕ್ಷ ರೂ.ನಿಂದ 4 ಲಕ್ಷ ರೂ.ಗೆ ಏರಿಕೆ!

Gold

ನವದೆಹಲಿ: ಅರ್ಬನ್ ಕೋಆಪರೇಟಿವ್ ಬ್ಯಾಂಕಗಳಿಗೆ (Urban Cooperative Banks) ಬುಲೆಟ್ ರಿಪೇಮೆಂಟ್ ಸ್ಕೀಮ್‌(Bullet Repayment Scheme – ಕ್ಷಿಪ್ರಗತಿಯಲ್ಲಿ ಮರುಪಾವತಿ)ನಡಿ ಚಿನ್ನದ ಸಾಲದ (Gold Loan) ಮೊತ್ತವನ್ನು 2 ಲಕ್ಷ ರೂಪಾಯಿಯಿಂದ 4 ಲಕ್ಷ ರೂಪಾಯಿವರೆಗೆ ವಿಸ್ತರಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್(Reserve Bank of India – RBI) ಈ ಕುರಿತು ಶುಕ್ರವಾರ ಘೋಷಣೆ ಮಾಡಿದ್ದು, 2023ರ ಮಾರ್ಚ್ 31ರಂತೆ ಆದ್ಯತಾ ವಲಯದ ಸಾಲದ ಅಡಿಯಲ್ಲಿ ಗುರಿಗಳನ್ನು ಮತ್ತು ಉಪ-ಗುರಿಗಳನ್ನು ಪೂರೈಸಿದ ನಗರ ಸಹಕಾರಿ ಬ್ಯಾಂಕ್‌ಗಳಿಗೆ ಸಂಬಂಧಿಸಿದಂತೆ ಬುಲೆಟ್ ರಿಪೇಮೆಂಟ್ ಸ್ಕೀಮ್‌ನಡಿ ಚಿನ್ನದ ಸಾಲಗಳ ಮಿತಿಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದೆ.

ಆರ್‌ಬಿಐ ಬುಲೆಟ್ ರಿಪೇಮೆಂಟ್ ಅಡಿ ಚಿನ್ನದ ಸಾಲದ ಮೊತ್ತವನ್ನು 2007ರಲ್ಲಿ ಒಂದು ಲಕ್ಷಕ್ಕೆ ವಿಸ್ತರಿಸಿತ್ತು. ಬಳಿಕ, 12 ತಿಂಗಳಿಗೆ ಮರುಪಾವತಿಯನ್ನು ಮಿತಿಗೊಳಿಸಿ 2014ಕ್ಕೆ ಮೊತ್ತವನ್ನು 2 ಲಕ್ಷ ರೂ.ಗೆ ಏರಿಸಲಾಯಿತು. ಹಾಗೆಯೇ, ಬುಲೆಟ್ ಮರುಪಾವತಿ ಯೋಜನೆಯಡಿಯಲ್ಲಿ, ಸಾಲದ ಮೇಲಿನ ಅಸಲು ಮತ್ತು ಬಡ್ಡಿಯನ್ನು ಸಾಲಗಾರನು ಸಾಲದ ಅವಧಿಯ ಕೊನೆಯಲ್ಲಿ ಸಾಲಗಾರನಿಗೆ ಏಕರೂಪವಾಗಿ ಪಾವತಿಸಬೇಕಾಗುತ್ತದೆ.

ಆರ್‌ಬಿಐ ರೆಪೋ ದರ ಯಥಾಸ್ಥಿತಿ; ಸಾಲಗಾರರಿಗೆ ಬಡ್ಡಿ ಏರಿಕೆ ಬಿಸಿ ಇಲ್ಲ

ದೇಶದ ಸಾಲಗಾರರಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಸಿಹಿ ಸುದ್ದಿ ನೀಡಿದೆ. ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ (Shaktikanta Das) ಅವರು ಹಣಕಾಸು ನೀತಿ ಸಭೆಯ (RBI Monetary Policy) ತೀರ್ಮಾನಗಳನ್ನು ಪ್ರಕಟಿಸಿದ್ದು, ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದರೊಂದಿಗೆ ಸತತ ನಾಲ್ಕನೇ ಬಾರಿ ರೆಪೋ ದರವನ್ನು ಯಥಾಸ್ಥಿತಿಗೊಳಿಸಿದಂತಾಗಿದೆ. ಸದ್ಯ ಆರ್‌ಬಿಐ ರೆಪೋ ದರ ಶೇ.6.50ರಷ್ಟಿದೆ. ಇದೇ ರೆಪೋ ದರವೇ ಮುಂದುವರಿಯುವ ಕಾರಣ ಸಾಲಗಾರರಿಗೆ ಯಾವುದೇ ಬಡ್ಡಿಯ ಹೊರೆ ಇರುವುದಿಲ್ಲ.

ಅಕ್ಟೋಬರ್‌ 4, 5 ಹಾಗೂ 6ರಂದು ನಡೆದ ಹಣಕಾಸು ನೀತಿ ಸಭೆಯ ಪ್ರಮುಖ ತೀರ್ಮಾನಗಳನ್ನು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದರು. “ದೇಶದಲ್ಲಿ ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಏಳಿಗೆಗೆ ಆರ್‌ಬಿಐ ಸಹಕಾರ ನೀಡುವ ಕುರಿತು ಚಿಂತನೆ ನಡೆದಿದೆ. ಹಾಗೆಯೇ, ಆರ್‌ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಸಭೆ ತೀರ್ಮಾನಿಸಿದೆ.

ಜಿಡಿಪಿ ದರದ ಬೆಳವಣಿಗೆ

“ದೇಶದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ದರದ ಬೆಳವಣಿಗೆಯನ್ನು ಶೇ.6.50ರಷ್ಟು ಇರಲಿದೆ ಎಂಬುದಾಗಿ ನಿರೀಕ್ಷಿಸಲಾಗಿದೆ. ಹಾಗೆಯೇ, 2024-25ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.6.6ರಷ್ಟು ಇರಲಿದೆ” ಎಂದು ಶಕ್ತಿಕಾಂತ ದಾಸ್‌ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Gold Rate Today: ಚಿನ್ನದ ಬೆಲೆ ತುಸು ಏರಿಕೆ, ಹಬ್ಬದ ಸೀಸನ್‌ ಎಫೆಕ್ಟ್

ಹಣದುಬ್ಬರದ ಸಮತೋಲನ

ಗ್ರಾಹಕ ಬೆಲೆ ಸೂಚ್ಯಂಕ (CPI) ಹಣದುಬ್ಬರದ ಕುರಿತು ಕೂಡ ಶಕ್ತಿಕಾಂತ ದಾಸ್‌ ಮಾಹಿತಿ ನೀಡಿದರು. “ದೇಶದಲ್ಲಿ 2023-24ನೇ ಸಾಲಿನಲ್ಲಿ ಸಿಪಿಐ ಹಣದುಬ್ಬರ ಶೇ.5.4ರಷ್ಟು ಇದೆ.. ಎರಡನೇ ತ್ರೈಮಾಸಿಕದಲ್ಲಿ ಶೇ.6.4ರಷ್ಟು, ಮೂರನೇ ತ್ರೈಮಾಸಿಕದಲ್ಲಿ ಶೇ.5.6ರಷ್ಟು ಹಾಗೂ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.5.2ರಷ್ಟು ಇರಲಿದೆ. ಹಣದುಬ್ಬರದ ಏರಿಕೆ ಭೀತಿಯಿಂದ ಹೊರಬರಲಾಗಿದೆ” ಎಂದು ತಿಳಿಸಿದರು.

ಸತತ ನಾಲ್ಕನೇ ಬಾರಿಗೆ ಯಥಾಸ್ಥಿತಿ

ಪ್ರಸಕ್ತ ವರ್ಷದ ಜೂನ್‌ ಹಾಗೂ ಏಪ್ರಿಲ್‌ನಲ್ಲಿ ನಡೆದ ದ್ವೈಮಾಸಿಕ ಸಭೆಗಳಲ್ಲಿ ಆರ್‌ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ, ಶೇ.6.5ರಷ್ಟು ರೆಪೋ ದರವನ್ನೇ ಇರಿಸಲಾಗಿತ್ತು. ಆದರೆ, ಹಣದುಬ್ಬರ ನಿಯಂತ್ರಣದ ದೃಷ್ಟಿಯಿಂದ 2023ರ ಫೆಬ್ರವರಿಯಲ್ಲಿ 25 ಹಾಗೂ 2022ರ ಡಿಸೆಂಬರ್‌ನಲ್ಲಿ 35 ಬೇಸಿಕ್‌ ಪಾಯಿಂಟ್‌ಗಳನ್ನು ಏರಿಕೆ ಮಾಡಿತ್ತು. ಈಗ ಸತತ ನಾಲ್ಕನೇ ಬಾರಿಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version