Site icon Vistara News

Good News For Farmers: ಬಿಸಿಲಿನ ಝಳಕ್ಕೆ ಬಸವಳಿದ ಕೃಷಿಕರಿಗೆ ಹವಾಮಾನ ಇಲಾಖೆಯಿಂದ ಸಿಹಿ ಸುದ್ದಿ; ಈ ತಿಂಗಳು ಉತ್ತಮ ವರ್ಷಧಾರೆ

Good News For Farmers

Good News For Farmers

ನವದೆಹಲಿ: ದಾಖಲೆಯ ಬಿಸಿಲಿನಿಂದ ಬಸವಳಿದ ದೇಶದ ರೈತರಿಗೆ ಭಾರತೀಯ ಹವಾಮಾನ ಇಲಾಖೆ (India Meteorological Department) ಶುಭ ಸುದ್ದಿಯೊಂದನ್ನು ನೀಡಿದೆ (Good News For Farmers). ಈ ತಿಂಗಳು ಇಡೀ ಭಾರತದಲ್ಲಿ ಮಾಸಿಕ ಮಳೆ ಶೇ. 106ಕ್ಕಿಂತ ಹೆಚ್ಚು ಸುರಿಯು ಸಾಧ್ಯತೆ ಇದೆ ಎಂದು ತಿಳಿಸಿದೆ. ಈ ವರ್ಷದ ಜೂನ್‌ನಲ್ಲಿ 123 ವರ್ಷಗಳ ಇತಿಹಾಸದಲ್ಲೇ ಅತ್ಯಂತ ಅಧಿಕ ತಾಪಮಾನ ದಾಖಲಾಗಿತ್ತು. ಇದೀಗ ಐಎಂಡಿಯ ವರದಿ ಕೃಷಿಕರಿಗೆ ತುಸು ಸಮಾಧಾನ ತಂದಿದೆ.

ಖಾರಿಫ್ ಬೆಳೆಗಳ ಬಿತ್ತನೆಗೆ (ವಿಶೇಷವಾಗಿ ಭತ್ತದಂತಹ ಹೆಚ್ಚಿನ ನೀರಿನ ಆವಶ್ಯಕತೆಯಿರುವ ಬೆಳೆ) ಸಜ್ಜಾಗುತ್ತಿರುವ ರೈತರಿಗೆ ಇದು ಶುಭ ಸುದ್ದಿ ಎನಿಸಿಕೊಂಡಿದೆ. ಮಳೆಯ ಕೊರತೆಯು ಜೂನ್‌ನಲ್ಲಿ ಸುಮಾರು ಶೇ. 32.6ಕ್ಕೆ ತಲುಪಿದ್ದರಿಂದ ವಾಯುವ್ಯ ಭಾರತದಲ್ಲಿ ಕಳೆದ ತಿಂಗಳು ಶುಷ್ಕ ವಾತಾವರಣ ಕಂಡು ಬಂದಿತ್ತು. ಹೀಗಾಗಿ ಈ ಪ್ರದೇಶವು ತೀವ್ರವಾದ ಶಾಖದ ಅಲೆಗಳಿಂದ ಸುಟ್ಟು ಹೋಗಿತ್ತು. ಅಲ್ಲದೆ 123 ವರ್ಷಗಳಲ್ಲಿ ಅತ್ಯಂತ ಬೆಚ್ಚಗಿನ ಜೂನ್ ಎನಿಸಿಕೊಂಡಿತ್ತು. ಸರಾಸರಿ ಮಾಸಿಕ ತಾಪಮಾನವು ಸಾಮಾನ್ಯಕ್ಕಿಂತ ಸುಮಾರು 1.65 ಡಿಗ್ರಿ ಹೆಚ್ಚು ದಾಖಲಾಗಿತ್ತು.

ಐಎಂಡಿಯ ಮಾಸಿಕ ಮುನ್ಸೂಚನೆಯ ಪ್ರಕಾರ ಜುಲೈಯಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದೆ. ಜತೆಗೆ ಈ ಪ್ರದೇಶದಲ್ಲಿ ಪ್ರವಾಹ ಉಂಟಾಗಬಹುದಾದಷ್ಟು ವಿಪರೀತ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಹರಿಯಾಣ, ಉತ್ತರಾಖಂಡಕ್ಕೆ ಎಚ್ಚರಿಕೆ

ಐಎಂಡಿ ಡಿಜಿ ಡಾ.ಎಂ.ಮೊಹಾಪಾತ್ರ ಅವರ ಪ್ರಕಾರ ಜುಲೈನಲ್ಲಿ ಸುರಿಯುವ ಧಾರಾಕಾರ ಮಳೆಯು ಪಶ್ಚಿಮ ಹಿಮಾಲಯದ ರಾಜ್ಯಗಳಾದ ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಮತ್ತು ಬೆಟ್ಟದ ತಪ್ಪಲಿನ ರಾಜ್ಯಗಳಲ್ಲಿ ನದಿ ಪ್ರವಾಹಕ್ಕೆ ಕಾರಣವಾಗಬಹುದು.

“ಮುನ್ಸೂಚನೆಯ ಪ್ರಕಾರ ಭಾರೀ ಮಳೆಯಾಗಲಿದೆ. ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಮೇಘಸ್ಫೋಟ, ಭಾರಿ ಮಳೆಯಿಂದ ಭೂಕುಸಿತದಂತಹ ಅಪಾಯ ಎದುರಾಗುವ ಸಾಧ್ಯತೆ ಇದೆ. ಮಧ್ಯ ಭಾರತದ ಕೆಲವು ಭಾಗಗಳಲ್ಲಿ, ಗೋದಾವರಿ, ಮಹಾನದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಭಾರೀ ಮಳೆಯಾಗುವ ನಿರೀಕ್ಷೆಯಿರುವುದರಿಂದ ಸ್ಥಳೀಯರು ಎಚ್ಚರಿಕೆ ವಹಿಸಬೇಕುʼʼ ಎಂದು ಅವರು ತಿಳಿಸಿದ್ದಾರೆ.

ಆದಾಗ್ಯೂ, ಈಶಾನ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಬಹುದು. ಇದರ ಹೊರತಾಗಿ ಉತ್ತರ ಪ್ರದೇಶದ ಕೆಲವು ಭಾಗಗಳಾದ ಗೋರಖ್ಪುರ, ಬಿಹಾರದ ಪಶ್ಚಿಮ ಜಿಲ್ಲೆಗಳು, ಜಾರ್ಖಂಡ್, ಮುಂತಾದ ಕೆಲವು ಭಾಗಗಳು ಮತ್ತು ಲಡಾಖ್‌ನಲ್ಲಿಯೂ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಊಹಿಸಿದೆ.

ಜೂನ್‌ನಲ್ಲಿ ಮಳೆ ಕೊರತೆ

ಭಾರತವು ಜೂನ್‌ನಲ್ಲಿ ಸುಮಾರು ಶೇ. 10.9ರಷ್ಟು ಮಳೆ ಕೊರತೆಯನ್ನು ದಾಖಲಿಸಿದೆ. ವಾಯುವ್ಯ ಭಾರತದಲ್ಲಿ ಇದರ ಪ್ರಮಾಣ ಹೆಚ್ಚು (ಶೇ. 32.6). ಮಧ್ಯ ಭಾರತ, ಪೂರ್ವ ಮತ್ತು ಈಶಾನ್ಯ ಭಾರತ (ಸುಮಾರು ಶೇ. 13)ದಲ್ಲಿಯೂ ಮಳೆ ಕೊರತೆ ಕಂಡು ಬಂದಿದೆ. ಸದ್ಯ ನೈಋತ್ಯ ಮಾನ್ಸೂನ್ ವೇಗ ಪಡೆದುಕೊಂಡಿದ್ದು, ಮತ್ತು ಮುಂದಿನ ಎರಡು-ಮೂರು ದಿನಗಳಲ್ಲಿ ಭಾರತವನ್ನು ಆವರಿಸಲಿದೆ ಎಂದು ಐಎಂಡಿ ತಿಳಿಸಿದೆ.

ಮಳೆಯ ಕೊರತೆಯು ಕಳೆದ ಕೆಲವು ದಿನಗಳಲ್ಲಿ ಉತ್ತರ ಭಾರತದ ಹಲವೆಡೆ ತಾಪಮಾನ ಹೆಚ್ಚಳಕ್ಕೆ ಮತ್ತು ತೀವ್ರವಾದ ಶಾಖದ ಅಲೆಗಳಿಗೆ ಕಾರಣವಾಗಿತ್ತು. ಹವಾಮಾನ ಇಲಾಖೆಯ ಪ್ರಕಾರ ಈ ಬೇಸಿಗೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಪಂಜಾಬ್, ಹರಿಯಾಣ ಮತ್ತು ದೆಹಲಿಯಲ್ಲಿ ಸುಮಾರು 20ರಿಂದ 38 ದಿನಗಳವರೆಗೆ ಉಷ್ಣಗಾಳಿ ಬೀಸಿದೆ.

ಇದನ್ನೂ ಓದಿ: Rain Effect : ಭಾರಿ ಮಳೆ ಎಫೆಕ್ಟ್‌; ಈ ಹೆದ್ದಾರಿ ಮಾರ್ಗದಲ್ಲಿ ನಾಳೆಯಿಂದ 1 ತಿಂಗಳು ವಾಹನ ಸಂಚಾರಕ್ಕೆ ನಿರ್ಬಂಧ!

Exit mobile version