Site icon Vistara News

Goodbye MiG 21: ‘ಹಾರುವ ಶವಪೆಟ್ಟಿಗೆ’ ಮಿಗ್‌ 21 ಯುದ್ಧ ವಿಮಾನಗಳು ಇನ್ನು ನೆನಪಷ್ಟೆ!

MiG 21

Goodbye MiG 21: Here Is The Journey of Russian Jet from Being Backbone of IAF to Flying Coffin

ನವದೆಹಲಿ: ದೇಶದ ವಾಯುಪಡೆಗೆ ಅಪಾರ ಕೊಡುಗೆ ನೀಡಿದ, ದಶಕಗಳವರೆಗೆ ಹಲವು ಕಾರ್ಯಾಚರಣೆಗಳಲ್ಲಿ, ಯುದ್ಧಗಳಲ್ಲಿ ಪಾಲ್ಗೊಂಡು ಅನನ್ಯ ಸೇವೆ ಸಲ್ಲಿಸಿದ, ಸಾಲು ಸಾಲು ಪತನಗಳಿಂದಲೇ ‘ಹಾರುವ ಶವಪೆಟ್ಟಿಗೆ’ ಎಂದೇ ಖ್ಯಾತಿಯಾಗಿರುವ ಮಿಗ್‌ 21 ಯುದ್ಧವಿಮಾನಗಳಿಗೆ ಶುಭವಿದಾಯ (Goodbye MiG 21) ಹೇಳುವ ಸಮಯ ಬಂದಿದೆ. ಭಾನುವಾರ (ಅಕ್ಟೋಬರ್‌ 8) ವಾಯುಪಡೆ ದಿನಾಚರಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸಂಗಮ್‌ ಪ್ರದೇಶದಲ್ಲಿ ವಾಯುಪಡೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಿಗ್‌ 21 ಯುದ್ಧವಿಮಾನಗಳು ಹಾರಾಟ ಪ್ರದರ್ಶನ ನಡೆಸಿದ್ದು, ಇವುಗಳ ಪ್ರದರ್ಶನ ಕೊನೆಯದ್ದಾಗಿದೆ. ಔಪಚಾರಿಕವಾಗಿ ಮಿಗ್‌ 21 ಯುದ್ಧವಿಮಾನಗಳಿಗೆ ವಿದಾಯ ಹೇಳಲಾಗಿದ್ದು, 2025ರ ವೇಳೆಗೆ ವಾಯುಪಡೆಯಿಂದ (Indian Air Force) ಸಂಪೂರ್ಣವಾಗಿ ಮರೆಗೆ ಸರಿಯಲಿವೆ. ಹಾಗಾದರೆ, ಮಿಗ್‌ 21 ಯುದ್ಧವಿಮಾನಗಳು ಭಾರತದ ವಾಯುಪಡೆಗೆ ಸೇರಿದ್ದು ಯಾವಾಗ? ಇವುಗಳ ಇತಿಹಾಸ ಏನು? ವಾಯುಪಡೆಗೆ ನೀಡಿದ ಕೊಡುಗೆ ಏನು ಎಂಬುದರ ಮಾಹಿತಿ ಇಲ್ಲಿದೆ.

ಯಾವಾಗ ವಾಯುಪಡೆಗೆ ಸೇರ್ಪಡೆ?

ರಷ್ಯಾ ನಿರ್ಮಿತ ಮಿಗ್‌ 21 ಯುದ್ಧವಿಮಾನಗಳನ್ನು ಮೊದಲ ಬಾರಿಗೆ 1963ರಲ್ಲಿ ಭಾರತದ ವಾಯುಪಡೆಗೆ ಸೇರಿಸಿಕೊಳ್ಳಲಾಯಿತು. ಒಂದು ಎಂಜಿನ್‌ ಹಾಗೂ ಒಂದೇ ಸೀಟ್‌ ಇರುವ ಈ ಯುದ್ಧವಿಮಾನಗಳು ಭಾರತದ ವಾಯುಪಡೆಗೆ ಪ್ರಮುಖ ಸಂದರ್ಭಗಳಲ್ಲಿ ಬೆನ್ನೆಲುಬಾಗಿ ನಿಂತಿವೆ. 1960ರ ದಶಕದ ಆರಂಭದಿಂದ ಇದುವರೆಗೆ ಭಾರತದ ವಾಯುಪಡೆಗೆ ರಷ್ಯಾದಿಂದ ಸುಮಾರು 870ಕ್ಕೂ ಅಧಿಕ ಯುದ್ಧವಿಮಾನಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಸದ್ಯ ಭಾರತದ ವಾಯುಪಡೆಯಲ್ಲಿ ಮಿಗ್‌ 21 ಸರಣಿಯ ಮೂರು ಯುದ್ಧವಿಮಾನಗಳಿದ್ದು, ಇವುಗಳು 2025ರ ವೇಳೆಗೆ ಸಂಪೂರ್ಣವಾಗಿ ಮರೆಗೆ ಸರಿಯಲಿವೆ.

ದೇಶದ ವಾಯುಪಡೆಗೆ ಅನರ್ಘ್ಯ ಕೊಡುಗೆ

ಮಿಗ್‌ 21 ಸರಣಿಯ ಯುದ್ಧವಿಮಾನಗಳು ಭಾರತದ ವಾಯುಪಡೆಗೆ ಅಪಾರ ಕೊಡುಗೆ ನೀಡಿವೆ. 1965ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧ, 1971ರ ಬಾಂಗ್ಲಾದೇಶ ವಿಮೋಚನೆ ಯುದ್ಧ, 1999ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಕಾರ್ಗಿಲ್‌ ಯುದ್ಧದಲ್ಲಿ ವಾಯುಪಡೆ ಕಾರ್ಯಾಚರಣೆಗಳು ಯಶಸ್ವಿಯಾಗಲು ಮಿಗ್‌ 21 ಯುದ್ಧವಿಮಾನಗಳು ಮಹತ್ವದ ಕೊಡುಗೆ ನೀಡಿವೆ. ಅಷ್ಟೇ ಅಲ್ಲ, 2019ರಲ್ಲಿ ಪುಲ್ವಾಮ ದಾಳಿ ಬಳಿಕ ಭಾರತದ ಅಭಿನಂದನ್‌ ವರ್ಧಮಾನ್‌ ಅವರು ಪಾಕಿಸ್ತಾನದ ಎಫ್‌ 16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದು ಕೂಡ ಇದೇ ಮಿಗ್‌ 21 ಯುದ್ಧವಿಮಾನದಿಂದಲೇ. ಆದರೆ, ದುರದೃಷ್ಟವಶಾತ್‌ ಮಿಗ್‌ 21 ಯುದ್ಧವಿಮಾನವು ಪಾಕ್‌ ನೆಲದಲ್ಲಿ ಪತನಗೊಂಡು ಅಚಾತುರ್ಯವಾಗಿತ್ತು.

ಹಾರುವ ಶವಪೆಟ್ಟಿಗೆ ಎಂದು ಕರೆಯುವುದೇಕೆ?

ಮಿಗ್‌-21 ಯುದ್ಧವಿಮಾನಗಳನ್ನು ‘ಹಾರುವ ಶವಪೆಟ್ಟಿಗೆ’ ಎಂದೇ ಕರೆಯಲಾಗುತ್ತದೆ. ಹೆಚ್ಚಿನ ಪ್ರಮಾಣದ ಯುದ್ಧವಿಮಾನಗಳು ಪತನವಾಗುವ ಕಾರಣ ಇವುಗಳಿಗೆ ಹೀಗೆ ಕರೆಯಲಾಗುತ್ತದೆ. ರಷ್ಯಾ ನಿರ್ಮಿತ ಮಿಗ್-‌21 ಯುದ್ಧವಿಮಾನಗಳನ್ನು ದೇಶದ ವಾಯುಪಡೆಗೆ 1960ರ ದಶಕದ ಆರಂಭದಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಇದುವರೆಗೆ ಹೆಚ್ಚಿನ ವಿಮಾನಗಳು ಪತನಗೊಂಡಿವೆ. ಇತ್ತೀಚಿನ ವರದಿಗಳ ಪ್ರಕಾರ, ದೇಶದಲ್ಲಿ ಸುಮಾರು 400 ಮಿಗ್‌-21 ಯುದ್ಧವಿಮಾನಗಳು ಅಪಘಾತಕ್ಕೀಡಾಗಿವೆ. ಹಾಗೆಯೇ, 200ಕ್ಕೂ ಅಧಿಕ ಪೈಲಟ್‌ಗಳು ಹಾಗೂ 60ಕ್ಕೂ ಹೆಚ್ಚು ನಾಗರಿಕರು ವಿಮಾನಗಳ ಪತನದಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಂದಹಾಗೆ, 1963ರಲ್ಲಿ ಮಿಗ್‌-21 ಯುದ್ಧವಿಮಾನವು ದೇಶದಲ್ಲಿ ಮೊದಲ ಬಾರಿಗೆ ಪತನಗೊಂಡಿತ್ತು.

ಇದನ್ನೂ ಓದಿ: IAF MIG-21: ಮನೆಗೆ ಅಪ್ಪಳಿಸಿದ ಮಿಗ್​ 21 ಯುದ್ಧ ವಿಮಾನ; ಇಬ್ಬರು ಮಹಿಳೆಯರ ದುರ್ಮರಣ

ಮಿಗ್‌ 21 ಬದಲಿಗೆ ತೇಜಸ್‌ ಮಾರ್ಕ್‌-1 ಎ ಯುದ್ಧವಿಮಾನ ಸೇರ್ಪಡೆ

ಮಿಗ್‌ 21 ಯುದ್ಧವಿಮಾನಗಳು ಹಳೆಯದ್ದಾಗಿವೆ. ಪದೇಪದೆ ಪತನಗೊಳ್ಳುವ ಮೂಲಕ ಅಪಖ್ಯಾತಿ ಪಡೆದಿವೆ. ಅದರಲ್ಲೂ, ಕೇಂದ್ರ ಸರ್ಕಾರವು ವಾಯುಪಡೆಯನ್ನು ಆಧುನಿಕತೆಗೆ ತೆರೆದುಕೊಳ್ಳುವಂತೆ ಮಾಡುತ್ತಿದೆ. ಹಾಗಾಗಿ, 2025ರಲ್ಲಿ ಮಿಗ್‌ 21 ಯುದ್ಧವಿಮಾನಗಳ ಬದಲು ತೇಜಸ್‌ ಮಾರ್ಕ್‌-1ಎ ಯುದ್ಧವಿಮಾನಗಳು ವಾಯುಪಡೆಯನ್ನು ಸೇರಲಿವೆ. ಎಲ್‌ಎಎಲ್‌ ಜತೆ ಕೇಂದ್ರ ಸರ್ಕಾರವು ಒಪ್ಪಂದ ಮಾಡಿಕೊಂಡಿದ್ದು, 48 ಸಾವಿರ ಕೋಟಿ ರೂ. ವೆಚ್ಚದಲ್ಲಿ ದೇಶದಲ್ಲಿಯೇ 83 ಯುದ್ಧವಿಮಾನಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳು ಅತ್ಯಾಧುನಿಕ ರೇಡಾರ್‌, ವಿಮಾನ ಹಾರುತ್ತಿದ್ದಾಗಲೇ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಸೇರಿ ವಿವಿಧ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದೆ.

Exit mobile version