Site icon Vistara News

Matrimony Apps: ಮ್ಯಾಟ್ರಿಮೋನಿ ಆ್ಯಪ್ ಇನ್ನಿಲ್ಲ; ಆನ್‌ಲೈನ್‌ನಲ್ಲಿ ಇನ್ನು ಸಂಗಾತಿ ಸಿಗಲ್ಲ!

Matrimony Couple

Google Removes Indian Matrimony Apps From Playstore Over Fee Dispute

ನವದೆಹಲಿ: ಆನ್‌ಲೈನ್‌ನಲ್ಲೇ, ಅದರಲ್ಲೂ ಆ್ಯಪ್ ಮೂಲಕವೇ ನಮಗೆ ಬೇಕಾದ ಯುವತಿಯನ್ನು, ಯುವತಿಯರು ಯುವಕರನ್ನು ಹುಡುಕಿಕೊಳ್ಳಲು, ನಮ್ಮ ಆಸಕ್ತಿ, ಅಭಿರುಚಿ, ಸ್ಟೇಟಸ್‌ಗೆ ಅನುಗುಣವಾಗಿ ಸಂಗಾತಿಯನ್ನು ಸುಲಭವಾಗಿ ಪತ್ತೆಹಚ್ಚಲು ಮ್ಯಾಟ್ರಿಮೋನಿ ಆ್ಯಪ್‌ಗಳು (Matrimony App) ಪ್ರಮುಖ ಸಾಧನವಾಗಿವೆ. ಹೊಸ ಜಮಾನದ ಯುವಕ-ಯುವತಿಯರ ಸಂಬಂಧಕ್ಕೆ ಇದು ಏಣಿಯಾಗಿದೆ. ಆದರೆ, ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಗೂಗಲ್‌ ಸಂಸ್ಥೆಯು (Google) ಪ್ಲೇಸ್ಟೋರ್‌ನಿಂದ (Play Store) ಭಾರತ್‌ ಮ್ಯಾಟ್ರಿಮೋನಿ ಆ್ಯಪ್ಅನ್ನು (Bharat Matrimony) ತೆಗೆದುಹಾಕಿದೆ. ಇದರಿಂದಾಗಿ ಆನ್‌ಲೈನ್‌ ಮೂಲಕ ಸಂಗಾತಿಯನ್ನು ಹುಡುಕುವವರಿಗೆ ಭಾರಿ ಹಿನ್ನಡೆಯಾಗಿದೆ.

ಹೌದು, ಭಾರತದ 10 ಕಂಪನಿಗಳ ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದುಹಾಕುವ ಪ್ರಕ್ರಿಯೆಗೆ ಗೂಗಲ್‌ ಚಾಲನೆ ನೀಡಿದೆ. ಆ್ಯಪ್‌ಗಳ ಮೂಲಕ ಆಗುವ ಪೇಮೆಂಟ್‌ನಲ್ಲಿ ಶೇ.11ರಿಂದ ಶೇ.26ರಷ್ಟು ಹಣವನ್ನು ಗೂಗಲ್‌ಗೆ ಶುಲ್ಕವಾಗಿ ನೀಡಬೇಕು ಎಂಬ ನಿಯಮವಿದೆ. ಆದರೆ, ಇದನ್ನು ತಡೆಯಬೇಕು ಎಂಬ ದಿಸೆಯಲ್ಲಿ ಭಾರತದ ಸ್ಟಾರ್ಟಪ್‌ ಕಂಪನಿಗಳು ಪ್ರಯತ್ನಿಸುತ್ತಿವೆ. ಇನ್ನು ಸ್ಟಾರ್ಟಪ್‌ಗಳಿಗೆ ಯಾವುದೇ ವಿನಾಯಿತಿ ನೀಡಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ಆದೇಶ ನೀಡಿದೆ.

ಮ್ಯಾಟ್ರಿಮೋನಿ ಕಂಪನಿ ಸಿಇಒ ಮುರುಗಾವೇಲ್‌ ಜಾನಕಿರಾಮನ್‌

ಗೂಗಲ್‌ ಸಂಸ್ಥೆಯು ಇದೆಲ್ಲ ಕಾರಣಗಳಿಂದಾಗಿ ಭಾರತದ 10 ಕಂಪನಿಗಳ ಆ್ಯಪ್‌ಗಳನ್ನು ಗೂಗಲ್‌ ಕಂಪನಿಯು ತೆಗೆದುಹಾಕುತ್ತಿದೆ. “ನಿಯಮಗಳ ಉಲ್ಲಂಘನೆಯಾಗಿದೆ ಎಂದು ಗೂಗಲ್‌ ಕಂಪನಿಯು ನೋಟಿಸ್‌ ನೀಡುತ್ತಿದೆ. ಮ್ಯಾಟ್ರಿಮೋನಿ ಸರಣಿಯ ಒಂದೊಂದೇ ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ಡಿಲೀಟ್ ಮಾಡಲಾಗುತ್ತಿದೆ. ಭಾರತದ ಇಂಟರ್‌ನೆಟ್‌ ಕ್ಷೇತ್ರದಲ್ಲಿ ಇದೊಂದು ಕರಾಳ ದಿನ” ಎಂದು ಮ್ಯಾಟ್ರಿಮೋನಿ ಸಂಸ್ಥಾಪಕ ಮುರುಗಾವೇಲ್‌ ಜಾನಕಿರಾಮ್‌ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Crime News: ಮ್ಯಾಟ್ರಿಮೋನಿಯಲ್‌ ಸೈಟಿನಲ್ಲಿ ಸಿಕ್ಕಿದ ಸಲಿಂಗಪ್ರೇಮಿ ಗಂಡನಿಂದ ಹೆಂಡತಿಗೆ ಕಿರುಕುಳ, ದೂರು

ಆನ್‌ಲೈನ್‌ ಮೂಲಕವೇ ಸಂಗಾತಿಗಳನ್ನು ಹುಡುಕುವ ಮತ್ತೊಂದು ಆ್ಯಪ್‌ ಆಗಿರುವ ಜೀವನ್‌ಸಾಥಿ ಆ್ಯಪ್‌ಅನ್ನು ಕೂಡ ತೆರವುಗೊಳಿಸಲಾಗುತ್ತಿದ್ದು, ಇದಕ್ಕಾಗಿ ಇನ್ಫೋ ಎಡ್ಜ್‌ ಕಂಪನಿಗೂ ನೋಟಿಸ್‌ ನೀಡಿದೆ ಎಂದು ತಿಳಿದುಬಂದಿದೆ. ಇನ್ನು ಮ್ಯಾಟ್ರಿಮೋನಿ ಆ್ಯಪ್‌ಗಳಾದ ಭಾರತ್‌ ಮ್ಯಾಟ್ರಿಮೋನಿ, ಕ್ರಿಶ್ಚಿಯನ್‌ ಮ್ಯಾಟ್ರಿಮೋನಿ, ಮುಸ್ಲಿಂ ಮ್ಯಾಟ್ರಿಮೋನಿ ಹಾಗೂ ಜೋಡಿ ಆ್ಯಪ್‌ಗಳನ್ನು ಈಗಾಗಲೇ ಡಿಲೀಟ್‌ ಮಾಡಲಾಗಿದೆ ಎಂದು ಮುರುಗಾವೇಲ್‌ ಜಾನಕಿರಾಮ್‌ ಮಾಹಿತಿ ನೀಡಿದ್ದಾರೆ. ಆ್ಯಪ್‌ಗಳನ್ನು ರಿಮೂವ್‌ ಮಾಡುತ್ತಲೇ ಮ್ಯಾಟ್ರಿಮೋನಿ ಹಾಗೂ ಇನ್ಫೋ ಎಡ್ಜ್‌ ಷೇರುಗಳ ಮೌಲ್ಯವೂ ಕುಸಿತ ಕಂಡಿದೆ. ಇದು ಎರಡೂ ಕಂಪನಿಗಳಿಗೆ ಹೆಚ್ಚಿನ ಆತಂಕ ತಂದೊಡ್ಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version