ನವದೆಹಲಿ/ಚೆನ್ನೈ: ಭಾರತದ ಚೆನ್ನೈ ಮೂಲದ ಐ ಡ್ರಾಪ್ಸ್‌ನಿಂದಾಗಿ ಅಮೆರಿಕದಲ್ಲಿ ಒಬ್ಬರು ಮೃತಪಟ್ಟು, ಹಲವು ಜನ ಕಣ್ಣು ಕಳೆದುಕೊಂಡ ಕಾರಣ ಐ ಡ್ರಾಪ್ಸ್ (Eye Drops Alert) ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (CDSCO) ಕಣ್ಣಿನ ಡ್ರಾಪ್ಸ್ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.
ತಮಿಳುನಾಡು ಮೂಲದ ಗ್ಲೋಬಲ್ ಹೆಲ್ತ್ ಕೇರ್ ಕಂಪನಿಯು 2021 ಹಾಗೂ 2022ರಲ್ಲಿ ಉತ್ಪಾದಿಸಿದ ಆರ್ಟಿಫಿಶಿಯಲ್ ಡ್ರಾಪ್ಸ್ (Artificial Drops) ಎಂಬ ಐ ಡ್ರಾಪ್ಸ್‌ಗಳಿಂದಾಗಿ ಅಮೆರಿಕದಲ್ಲಿ ಸುಮಾರು 55 ಜನರಿಗೆ ಅಡ್ಡಪರಿಣಾಮ ಬೀರಿದೆ. ಒಬ್ಬರು ಮೃತಪಟ್ಟಿದ್ದು, ಹಲವು ಜನ ಕಣ್ಣು ಕಳೆದುಕೊಂಡಿದ್ದಾರೆ. ಇದರ ಬಗ್ಗೆ ಅಮೆರಿಕವು ಎಚ್ಚರಿಕೆ ನೀಡಿದ ಕಾರಣ ಸಿಡಿಎಸ್‌ಸಿಒ ಉತ್ಪಾದನೆಯನ್ನು ನಿಷೇಧಿಸಿದೆ.
ಇದನ್ನೂ ಓದಿ: Marion Biotech | ಕೆಮ್ಮಿನ ಸಿರಪ್ ಕುಡಿದು ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವು, ಔಷಧ ಉತ್ಪಾದನೆ ನಿಲ್ಲಿಸಿದ ಭಾರತದ ಕಂಪನಿ
ಎಜ್ರಿಕೇರ್ ಆರ್ಟಿಫಿಶಿಯಲ್ ಟೀಯರ್ಸ್ (EzriCare Artificial Tears) ಹಾಗೂ ಡೆಸ್ಲಾಮ್ ಫಾರ್ಮಾದ ಆರ್ಟಿಫಿಶಿಯಲ್ ಟೀಯರ್ಸ್ ಡ್ರಾಪ್ಸ್‌ಗಳಿಂದಾಗಿ ಅಮೆರಿಕದಲ್ಲಿ ಅಡ್ಡಪರಿಣಾಮ ಬೀರಿದೆ. ಗಾಂಬಿಯಾದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಸುಮಾರು 66 ಮಕ್ಕಳು ಮೃತಪಟ್ಟ ಕಾರಣ ಕಳೆದ ವರ್ಷವಷ್ಟೇ ವಿಶ್ವ ಆರೋಗ್ಯ ಸಂಸ್ಥೆಯು ಭಾರತದ ಕಂಪನಿಯ ನಾಲ್ಕು ಸಿರಪ್‌ಗಳನ್ನು ನಿಷೇಧಿಸಿದೆ. ಇದರ ಬೆನ್ನಲ್ಲೇ, ಮತ್ತೊಂದು ಕಂಪನಿಯ ಐ ಡ್ರಾಪ್ಸ್‌ನಿಂದಾಗಿ ಅಮೆರಿಕದಲ್ಲಿ ಜನ ತೊಂದರೆ ಅನುಭವಿಸುವಂತಾಗಿದೆ.