Site icon Vistara News

Pension Under NPS:‌ ಎನ್‌ಪಿಎಸ್‌ ಅಡಿಯಲ್ಲಿ ಕೇಂದ್ರ ನೌಕರರಿಗೆ ವೇತನದ ಅರ್ಧದಷ್ಟು ಪಿಂಚಣಿ; ಶೀಘ್ರವೇ ಆದೇಶ?

Pension Under NPS

Government employees may soon get 50% of last pay as pension under NPS: Report

ನವದೆಹಲಿ: ದೇಶದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು (Old Pension Scheme) ಮತ್ತೆ ಜಾರಿಗೆ ತರುವಂತೆ ಒತ್ತಾಯ ಕೇಳಿಬರುತ್ತಿವೆ. ಕೇಂದ್ರ ಸರ್ಕಾರವು ಹಳೆಯ ಪಿಂಚಣಿ ಯೋಜನೆಯ ಜಾರಿಗೆ ಮನಸ್ಸು ಮಾಡುತ್ತಿಲ್ಲ. ಆದರೆ, ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme) ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ (Central Government Employees) ನಿವೃತ್ತಿಯ ಬಳಿಕ ಅವರ ಕೊನೆಯ ಸಂಬಳದ ಶೇ.50ರಷ್ಟು ಮೊತ್ತವನ್ನು ಪಿಂಚಣಿಯಾಗಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬುದಾಗಿ ವರದಿಗಳು ತಿಳಿಸಿವೆ.

ಕೇಂದ್ರ ನೌಕರರಿಗೆ ಪಿಂಚಣಿ ನೀಡುವ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಕಾರ್ಯದರ್ಶಿ ಟಿ.ವಿ.ಸೋಮನಾಥನ್‌ ಅವರ ನೇತೃತ್ವದಲ್ಲಿ ಸಮಿತಿಯೊಂದು ರಚಿಸಿರುವ ಕಾರಣ ಶೀಘ್ರದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಜಾಗತಿಕವಾಗಿ ನೌಕರರಿಗೆ ಸಿಗುತ್ತಿರುವ ಪಿಂಚಣಿ ಹಾಗೂ ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ಮಾಡಿರುವ ಬದಲಾವಣೆಗಳನ್ನು ಸೋಮನಾಥನ್‌ ಸಮಿತಿಯು ಅಧ್ಯಯನ ಮಾಡಿದೆ. ಹಾಗಾಗಿ. ಶೀಘ್ರದಲ್ಲೇ ಕೇಂದ್ರ ಸರ್ಕಾರವು ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿ 25-30 ವರ್ಷಗಳವರೆಗೆ ಸರ್ಕಾರಿ ಸೇವೆ ಸಲ್ಲಿಸಿದ ನೌಕರರಿಗೆ ಮಾಸಿಕ ಅವರ ವೇತನದ ಅರ್ಧದಷ್ಟು ಮೊತ್ತವನ್ನು ಪಿಂಚಣಿಯಾಗಿ ನೀಡಲು ಘೋಷಣೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಪಿಂಚಣಿ ಜತೆಗೆ ಮತ್ತೊಂದು ಸೌಲಭ್ಯ

ಕೇಂದ್ರ ಸರ್ಕಾರಿ ನೌಕರರು ಸುಮಾರು 25-30 ವರ್ಷ ಸೇವೆ ಸಲ್ಲಿಸಿ, ನಿವೃತ್ತಿಯಾದ ಬಳಿಕ ಪಿಂಚಣಿ ಪಡೆಯುವ ಜತೆಗೆ ನಿಗದಿತ ಮೊತ್ತವನ್ನು ಕೂಡ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ನಿವೃತ್ತಿಯ ಬಳಿಕ ಕೇಂದ್ರ ಸರ್ಕಾರಿ ನೌಕರರು ಆರ್ಥಿಕವಾಗಿ ಸ್ಥಿರವಾಗಿರಬೇಕು ಎಂಬ ದೃಷ್ಟಿಯಿಂದ ಸರ್ಕಾರವು ನಿಗದಿತ ಮೊತ್ತವನ್ನು ನೀಡಲು ಚಿಂತನೆ ನಡೆಸಿದೆ. ಈ ಕುರಿತು ಬಜೆಟ್‌ನಲ್ಲಿಯೇ ನಿರ್ಮಲಾ ಸೀತಾರಾಮನ್‌ ಅವರು ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತ ಏರಿಕೆ?

ಸದ್ಯ, ಹೊಸ ಹಾಗೂ ಹಳೆಯ ತೆರಿಗೆ ಪದ್ಧತಿಯಲ್ಲೂ 50 ಸಾವಿರ ರೂ. ಸ್ಟಾಂಡರ್ಡ್‌ ಡಿಡಕ್ಷನ್‌ ಇದೆ. ಇದನ್ನು, 70 ಸಾವಿರ ರೂ.ಗೆ ಏರಿಕೆ ಮಾಡಿದರೆ, ಸಂಬಳದಾರರು ಹೆಚ್ಚಿನ ತೆರಿಗೆ ಹಣವನ್ನು ಉಳಿತಾಯ ಮಾಡಬಹುದಾಗಿದೆ. ಹಣದುಬ್ಬರ ಏರಿಕೆ ಸೇರಿ ಹಲವು ಕಾರಣಗಳಿಂದಾಗಿ ಸ್ಟಾಂಡರ್ಡ್‌ ಡಿಡಕ್ಷನ್‌ ಅಥವಾ ತೆರಿಗೆ ವಿನಾಯಿತಿ ಮೊತ್ತವನ್ನು ಏರಿಕೆ ಮಾಡಬೇಕು ಎಂಬುದು ಬೇಡಿಕೆಯಾಗಿದೆ. ಹಾಗಾಗಿ, ಮೊತ್ತವನ್ನು 70 ಸಾವಿರ ರೂ.ಗೆ ಏರಿಕೆ ಮಾಡಲು ನಿರ್ಮಲಾ ಸೀತಾರಾಮನ್‌ ಅವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಸ್ಟಾಂಡರ್ಡ್‌ ಡಿಡಕ್ಷನ್‌ ಎಂಬುದು ತೆರಿಗೆ ವಿನಾಯಿತಿ ಆಗಿದ್ದು, ಇದಕ್ಕಾಗಿ ನೌಕರರು ಹೂಡಿಕೆ ಮಾಡಬೇಕಿಲ್ಲ. ತೆರಿಗೆ ಪಾವತಿಸಲು ಅರ್ಹವಿರುವವರು ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತದ ಅಡಿಯಲ್ಲಿ ವಿನಾಯಿತಿ ಪಡೆಯಲಿದ್ದಾರೆ.

ಇದನ್ನೂ ಓದಿ: Retirement Planning: ನಿವೃತ್ತಿ ಬಳಿಕ 1 ಲಕ್ಷ ರೂ. ಪಿಂಚಣಿ ಗಳಿಸೋದು ಹೇಗೆ? ಸುಲಭ ಯೋಜನೆಯ ಮಾಹಿತಿ ಇಲ್ಲಿದೆ

Exit mobile version