ನವದೆಹಲಿ: ಅಂಚೆ ಕಚೇರಿಗಳಲ್ಲಿ ಕಿರು ಅವಧಿಗೆ ಠೇವಣಿ ಮಾಡುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಿದೆ. ಅಂಚೆ ಕಚೇರಿಯ ಹಲವು ಯೋಜನೆಗಳ ಮೇಲಿನ ಬಡ್ಡಿದರವನ್ನು 20 ಮೂಲಾಂಕಗಳಿಂದ 110 ಮೂಲಾಂಕಗಳಿಗೆ ಏರಿಕೆ (Post Office Interest Rates) ಮಾಡಲಾಗಿದ್ದು, ಇದರಿಂದ ಕೋಟ್ಯಂತರ ಠೇವಣಿದಾರರಿಗೆ ಹೆಚ್ಚಿನ ಲಾಭವಾಗಲಿದೆ.
ಅಂಚೆ ಕಚೇರಿಯ ಹಿರಿಯ ನಾಗರಿರಕ ಉಳಿತಾಯ ಯೋಜನೆ, ಮಾಸಿಕ ಆದಾಯ ಉಳಿತಾಯ ಯೋಜನೆ, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (National Savings Certificate-NSC), ಕಿಸಾನ್ ವಿಕಾಸ್ ಪತ್ರ ಸೇರಿ ಎಲ್ಲ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ಸ್ (ಕಿರು ಅವಧಿ ಅಂದರೆ 5 ವರ್ಷದ ಅವಧಿಗೆ ಠೇವಣಿ ಮಾಡುವ ಯೋಜನೆ) ಮೇಲಿನ ಬಡ್ಡಿದರವನ್ನು 2023ರ ಜನವರಿ-ಮಾರ್ಚ್ ಅವಧಿಗೆ ಏರಿಕೆ ಮಾಡಲಾಗಿದೆ. ಪರಿಷ್ಕೃತ ಬಡ್ಡಿದರವು ಜನವರಿ 1ರಿಂದ ಅನ್ವಯವಾಗಲಿದೆ.
ಶಾಮಲಾ ಗೋಪಿನಾಥ್ ಆಯೋಗದ ವರದಿಯ ಶಿಫಾರಸಿನಂತೆ ಕೇಂದ್ರ ಹಣಕಾಸು ಸಚಿವಾಲಯವು ಬಡ್ಡಿದರ ಪರಿಷ್ಕರಿಸಿದೆ. ಆದರೆ, ಸಾರ್ವಜನಿಕ ಭವಿಷ್ಯ ನಿಧಿ (PPF) ಹಾಗೂ ಸುಕನ್ಯ ಸಮೃದ್ಧಿ ಯೋಜನೆಯ ಬಡ್ಡಿದರವನ್ನು ಏರಿಕೆ ಮಾಡಿಲ್ಲ. 100 ಮೂಲಾಂಕ ಸೇರಿದರೆ ಒಂದು ಪರ್ಸೆಂಟ್ ಆಗುತ್ತದೆ. ಅದರಲ್ಲೂ, 110 ಮೂಲಾಂಕ ಏರಿಕೆ ಮಾಡಿರುವುದರಿಂದ ಹೆಚ್ಚಿನ ಲಾಭವಾಗಲಿದೆ. 2022ರ ಅಕ್ಟೋಬರ್-ಡಿಸೆಂಬರ್‌ನಲ್ಲಿಯೂ 10-30 ಮೂಲಾಂಕ ಏರಿಕೆ ಮಾಡಲಾಗಿತ್ತು. ಕೊರೊನಾ ಅವಧಿಯಲ್ಲಿ ಹಲವು ಯೋಜನೆಗಳ ಬಡ್ಡಿದರ ಕಡಿತಗೊಳಿಸಲಾಗಿದೆ.
ಇದನ್ನೂ ಓದಿ | RBI | ಸೆ.30ಕ್ಕೆ 0.50% ಬಡ್ಡಿದರ ಏರಿಕೆ ಸಂಭವ, ಜನ ಸಾಮಾನ್ಯರಿಗೆ ಸಾಲಗಳ ಇಎಂಐ ಹೊರೆ ಹೆಚ್ಚಳದ ಭೀತಿ