Site icon Vistara News

Narendra Modi: ಮೋದಿ ನಿಮ್ಮ ಕುಟುಂಬದ ಸದಸ್ಯ, ಚಿಂತೆ ಮಾಡದಿರಿ; ಜನರಿಗೆ ಪ್ರಧಾನಿ ಅಭಯ

Narendra Modi

Lok Sabha Election: Narendra Modi's message after party announces 1st list

ನವದೆಹಲಿ: “ದೇಶಾದ್ಯಂತ ಸಹಕಾರಿ ಕ್ಷೇತ್ರದ (Cooperative Sector) ಏಳಿಗೆಯೇ ಕೇಂದ್ರ ಸರ್ಕಾರದ ಗುರಿಯಾಗಿದೆ. ಅದರಲ್ಲೂ, ಗ್ರಾಮೀಣ ಭಾಗದಲ್ಲಿ ಸಹಕಾರಿ ಕ್ಷೇತ್ರವು ಭದ್ರವಾಗಿ ನೆಲೆಯೂರುವಂತೆ ಮಾಡಲು ಆದ್ಯತೆ ನೀಡಲಾಗುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ವರ್ಚ್ಯುವಲ್‌ ವೇದಿಕೆ ಮೂಲಕ ಕರ್ನಾಟಕ ಸೇರಿ ದೇಶಾದ್ಯಂತ ಇರುವ ‘ವಿಕಸಿತ ಭಾರತ ಸಂಕಲ್ಪ ಯಾತ್ರಾ’ (Viksit Bharat Sankalp Yatra) ಯೋಜನೆಯ ಫಲಾನುಭವಿಗಳ ಜತೆ ಸಮಾಲೋಚನೆ ನಡೆಸುವ ವೇಳೆ ಸಹಕಾರಿ ಕ್ಷೇತ್ರದ ಏಳಿಗೆ ಕುರಿತು ನರೇಂದ್ರ ಮೋದಿ ಪ್ರಸ್ತಾಪಿಸಿದರು. ಹಾಗೆಯೇ, “ನಾನು ನಿಮ್ಮ ಕುಟುಂಬದ ಸದಸ್ಯ. ಸರ್ಕಾರದ ಯೋಜನೆಗಳು ಮನೆ ಬಾಗಿಲಿಗೆ ಬರಲಿವೆ” ಎಂದರು.

“ಸಹಕಾರಿ ಕ್ಷೇತ್ರದ ಏಳಿಗೆ ಮೂಲಕ ದೇಶದಲ್ಲಿ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಮಾಡುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಕೃಷಿ, ಮೀನುಗಾರಿಕೆ, ಹೈನುಗಾರಿಕೆ ಹಾಗೂ ಸಕ್ಕರೆ ಉತ್ಪಾದನೆ ಸೇರಿ ಹತ್ತಾರು ವಲಯಗಳಿಗೆ ಸಹಕಾರಿ ಕ್ಷೇತ್ರವನ್ನು ಏಣಿಯಾಗಿ ಮಾಡಿಕೊಳ್ಳುವ ಮೂಲಕ ಗ್ರಾಮೀಣ ಭಾಗದ ಜನರ ಜೀವನ ಮಟ್ಟವನ್ನು ಸುಧಾರಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ” ಎಂದು ಹೇಳಿದರು.

“ವಿಕಸಿತ ಭಾರತ ಸಂಕಲ್ಪ ಯಾತ್ರಾದ ಭಾಗವಾಗಿ ಕೇಂದ್ರ ಸರ್ಕಾರವು ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿಗೆ ತಂದಿದೆ. ಯೋಜನೆ ಅಡಿಯಲ್ಲಿ ಇದುವರೆಗೆ ಒಂದು ಕೋಟಿ ಜನರಿಗೆ ಆಯುಷ್ಮಾನ್‌ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಸುಮಾರು 1.25 ಕೋಟಿ ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ಹಾಗೆಯೇ, 70 ಲಕ್ಷ ಜನರ ಕ್ಷಯರೋಗವನ್ನು ಪತ್ತೆ ಹಚ್ಚಲಾಗಿದೆ” ನರೇಂದ್ರ ಮೋದಿ ತಿಳಿಸಿದರು.

“ಸರ್ಕಾರದ ಯೋಜನೆಗಳನ್ನು ಪಡೆಯಲು ಜನ ಕಚೇರಿಗಳಿಗೆ ಪದೇಪದೆ ಅಲೆದಾಡುವಂತಹ ಪರಿಸ್ಥಿತಿ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ದೇಶದ ಜನರ ಖಾತೆಗೆ ಯೋಜನೆಗಳ ಹಣವು ಜಮೆಯಾಗುತ್ತದೆ. ಇದರಿಂದಾಗಿ ಫಲಾನುಭವಿಗಳ ಕಣ್ಣಿನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಜನರಲ್ಲಿರುವ ಆತ್ಮವಿಶ್ವಾಸವನ್ನು ನೋಡುವುದೇ ನನಗೆ ಖುಷಿಯಾಗಿದೆ. ಲಂಚ, ಸ್ವಜನ ಪಕ್ಷಪಾತ ಇಲ್ಲದೆ ಜನರಿಗೆ ಯೋಜನೆಯ ಲಾಭ ನೀಡಲಾಗುತ್ತಿದೆ. ಮೋದಿ ನಿಮ್ಮ ಕುಟುಂಬದ ಸದಸ್ಯ. ನಿಮಗೆ ಯಾವುದೇ ಅಡೆತಡೆ ಇಲ್ಲ” ಎಂದು ಹೇಳಿದರು.

ಇದನ್ನೂ ಓದಿ: PM Narendra Modi: 2 ಕೋಟಿ ಚಂದಾದಾರರನ್ನು ದಾಟಿದ ಮೋದಿ ಯುಟ್ಯೂಬ್ ಚಾನೆಲ್!

“ಕಳೆದ 10 ವರ್ಷದಲ್ಲಿ ದೇಶಾದ್ಯಂತ 10 ಕೋಟಿ ಮಹಿಳೆಯರು ಸ್ವಸಹಾಯ ಸಂಘಗಳನ್ನು ಸೇರ್ಪಡೆಗೊಂಡಿದ್ದಾರೆ. ಬ್ಯಾಂಕ್‌ ಮೂಲಕ ಸುಮಾರು 7.5 ಲಕ್ಷ ಕೋಟಿ ರೂ. ವರ್ಗಾಯಿಸಲಾಗಿದೆ. ದೇಶಧ ಎರಡು ಕೋಟಿ ಮಹಿಳೆಯರನ್ನು ಲಕ್ಷಾಧೀಶೆಯರನ್ನಾಗಿ ರೂಪಿಸುವ ಗುರಿಯೊಂದಿಗೆ ಇದೆಲ್ಲ ಕ್ರಮ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕೃಷಿ ದಾಸ್ತಾನಿಗೆ ಹೆಚ್ಚಿನ ಮೂಲ ಸೌಕರ್ಯ ಒದಗಿಸುವುದು ಸರ್ಕಾರ ಉದ್ದೇಶ” ಎಂದು ಮಾಹಿತಿ ನೀಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version