ನವ ದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಮತ್ತು ಹೊಸ ಮಾದರಿಗಳ ದಾಳಿ ಭೀತಿ ಹೆಚ್ಚುತ್ತಿರುವ ನಡುವೆಯೇ ಕೇಂದ್ರ ಸರಕಾರ ಬೂಸ್ಟರ್ ಡೋಸ್ ನೀಡುವ ಪ್ರಕ್ರಿಯೆಗೆ ವೇಗ ನೀಡಲು ನಿರ್ಧರಿಸಿದೆ. ಇದರ ಭಾಗವಾಗಿ ಎರಡನೇ ಡೋಸ್ ಮತ್ತು ಬೂಸ್ಟರ್ ಡೋಸ್ (Booster dose) ಸ್ವೀಕಾರದ ಅವಧಿಯನ್ನು ೯ ತಿಂಗಳಿನಿಂದ ೬ ತಿಂಗಳಿಗೆ ಇಳಿಸಿದೆ. ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಇದು ಅನ್ವಯವಾಗಲಿದೆ.
ಇದುವರೆಗೆ ಎರಡನೇ ಡೋಸ್ ಮತ್ತು ಮುನ್ನೆಚ್ಚರಿಕಾ ಡೋಸ್ ನಡುವಿನ ಅಂತರ ಒಂಬತ್ತು ತಿಂಗಳು ಅಂದರೆ ೩೯ ವಾರ ಇತ್ತು. ಅದನ್ನೀಗ ಆರು ತಿಂಗಳು ಅಂದರೆ ೨೬ ವಾರಕ್ಕೆ ಇಳಿಸಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಈ ಸಂಬಂಧ ಸುತ್ತೋಲೆಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ವ್ಯಾಕ್ಸಿನ್ ಅವಧಿ ಇಳಿಸಲು ಕೆಲವು ಕಾರಣಗಳನ್ನು ನೀಡಲಾಗಿದೆ. ಬೂಸ್ಟರ್ ಡೋಸ್ ಸ್ವೀಕರಿಸಲು ಜನರು ಹೆಚ್ಚು ಆಸಕ್ತಿ ವಹಿಸದೆ ಇರುವುದು, ವ್ಯಾಕ್ಸಿನ್‌ಗಳ ಅವಧಿ ಮುಕ್ತಾಯವಾಗುವ ಅಪಾಯ ಮತ್ತು ಕೋವಿಡ್-೧೯ನ ಹೊಸ ತಳಿಯ ಆಗಮನವಾಗುವ ಆತಂಕದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಎಲ್ಲ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳಿಗೆ ಈ ಸುತ್ತೋಲೆ ಕಳುಹಿಸಲಾಗಿದೆ.
ಲಸಿಕೆ ನೀಡಿಕೆಗೆ ಸಂಬಂಧಿಸಿ ಸರಕಾರಕ್ಕೆ ಸಲಹೆ ನೀಡುವ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಎನ್‌ಟಿಎಜಿಐ)ಯ ತಾಂತ್ರಿಕ ಉಪಸಮಿತಿ ಮಾಡಿರುವ ಶಿಫಾರಸಿನಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಲಸಿಕೆ ಪಡೆಯುವುದು ಹೇಗೆ?
-೧೮ರಿಂದ ೫೯ ವರ್ಷದವರು ತಾವು ಎರಡನೇ ಡೋಸ್ ಪಡೆದು ಆರು ತಿಂಗಳಾಗಿದ್ದರೆ ಖಾಸಗಿ ಕೋವಿಡ್ ಲಸಿಕಾ ಕೇಂದ್ರಗಳಿಗೆ ಹೋಗಿ ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು.
– ೬೦ ವರ್ಷ ಮೀರಿದ ಹಿರಿಯ ನಾಗರಿಕರು, ಆರೋಗ್ಯ ಸೇವಾ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ೨೬ ವಾರಗಳ ಬಳಿಕ ಸರಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ.