ನವ ದೆಹಲಿ: ವಿತ್ತಿಯ ಕೊರತೆಯ ಗುರಿಗೆ ಧಕ್ಕೆಯಾಗದಂತೆ ಆಹಾರ ಮತ್ತು ಇಂಧನಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ವಿವಿಧ ಸಚಿವಾಲಯಗಳ ಬಜೆಟ್ಗಳಿಂದ 1 ಲಕ್ಷ ಕೋಟಿ ರೂಪಾಯಿಗಳನ್ನು (12 ಬಿಲಿಯನ್ ಡಾಲರ್) ಮರುಹಂಚಿಕೆ ಮಾಡಲು ಕೇಂದ್ರ ಸರಕಾರ ಮುಂದಾಗಿದೆ ಎಂಬುದಾಗಿ ವರದಿಯಾಗಿದೆ. ಮುಂಬರುವ ಲೋಕಸಭಾ ಚುನಾವಣೆ ವೇಳೆ ಬೆಲೆ ಏರಿಕೆಯೇ ವಿರೋಧ ಪಕ್ಷಗಳಿಗೆ ಪ್ರಧಾನ ಅಸ್ತ್ರವಾಗಬಹುದು ಎಂಬ ಅಂಶವನ್ನು ಆಧರಿಸಿ ಹಣದುಬ್ಬರ ತಡೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.
ತೈಲಗಳ ಮಾರಾಟದ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದು ಮತ್ತು ಅಡುಗೆ ಎಣ್ಣೆ ಮತ್ತು ಗೋಧಿಯ ಮೇಲಿನ ಆಮದು ಸುಂಕವನ್ನು ಸರಾಗಗೊಳಿಸುವುದು ಸೇರಿದಂತೆ ಹಲವಾರು ಘೋಷಣೆಗಳನ್ನು ಪ್ರಧಾನಿ ನರೇಂದ್ರ ಮೋದಿ ಮುಂಬರುವ ವಾರಗಳಲ್ಲಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಕೇಂದ್ರ ಸರ್ಕಾರ ಇದೇ ರೀತಿ 26 ಬಿಲಿಯನ್ ಡಾಲರ್ ಬಿಡುಗಡೆ ಮಾಡಿದ ನಂತರ ಇದೀಗ ಎರಡನೇ ವರ್ಷ ಅಂಥದ್ದೇ ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ. ಬೆಲೆ ಏರಿಕೆಯ ನಡುವೆಯೂ ರಿಸರ್ವ್ ಬ್ಯಾಂಕ್ ಕಳೆದ ವಾರ ರೆಪೊ ದರ ಹೆಚ್ಚಿಸಲು ನಿರಾಕರಿಸಿತ್ತು. ಆದಾಗ್ಯೂ ಬೆಲೆ ಏರಿಕೆಯು ಏಷ್ಯಾದಲ್ಲಿಯೇ ಗರಿಷ್ಠ ಪ್ರಮಾಣದಲ್ಲಿದೆ. ಹೀಗಾಗಿ ಹೆಚ್ಚುವರಿ ಅನುದಾನದ ಮೂಲಕ ಬೆಲೆ ಏರಿಕೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
15 ತಿಂಗಳ ಗರಿಷ್ಠ ಮಟ್ಟದ ಹಣದುಬ್ಬರದ ವಿರುದ್ಧ ಹೋರಾಡುವುದಾಗಿ ಪ್ರಧಾನಿ ಮೋದಿ ಈ ವಾರ ಪ್ರತಿಜ್ಞೆ ಮಾಡಿದ್ದರು. ಹೀಗಾಗಿ ಅಧಿಕಾರಿಗಳು ತಕ್ಷಣವೇ ಜಾಗೃತರಾಗಿ ನಾನಾ ಯೋಜನೆಗಳನ್ನು ರೂಪಿಸಿದ್ದಾರೆ. ಈರುಳ್ಳಿ ಮತ್ತು ಟೊಮೆಟೊಗಳ ಬೆಲೆಗಳು ಸರ್ಕಾರಗಳನ್ನು ಉರುಳಿಸಿದ ಇತಿಹಾಸ ಭಾರತಕ್ಕಿದೆ. ಬೆಲೆಗಳ ನಿಯಂತ್ರಣಕ್ಕೆ ಮೋದಿಗೆ ಕೆಲವೇ ತಿಂಗಳುಗಳು ಬಾಕಿ. ಆದಾಗ್ಯೂ ಬಜೆಟ್ ಕೊರತೆಯನ್ನು ಜಾಗತಿಕ ಹೂಡಿಕೆದಾರರು ಸೂಕ್ಷ್ಮವಾಗಿ ಗಮನಿಸುತ್ತಿರುವುದನ್ನೂ ಪ್ರಧಾನಿ ಮೋದಿ ನಿರ್ಲಕ್ಷ್ಯ ಮಾಡುವಂತಿಲ್ಲ.
ಮರು ಹಂಚಿಕೆ ಅಪರೂಪ
ಭಾರತದಲ್ಲಿ ಬಜೆಟ್ ಮರು ಹಂಚಿಕೆಗಳು ಅಪರೂಪ. ಆದರೆ ರಿಸರ್ವ್ ಬ್ಯಾಂಕಿನಿಂದ ಹೆಚ್ಚಿನ ಲಾಭಾಂಶ ಪಾವತಿಗಳು ಮತ್ತು ಭಾರತದ ಆರ್ಥಿಕತೆಯು ಅತ್ಯಂತ ವೇಗದ ವೇಗದಲ್ಲಿ ಬೆಳೆಯುತ್ತಿರುವ ಜತೆಗೆ ತೆರಿಗೆ ಸಂಗ್ರಹವು ಸುಮಾರು ಒಂದು ಟ್ರಿಲಿಯನ್ ರೂಪಾಯಿಗಳ ಹಂಚಿಕೆಗೆ ಅವಕಾಶ ಮಾಡಿಕೊಡುತ್ತದೆ. ಈ ಮೊತ್ತವು ಇದು ಮಾರ್ಚ್ 2024 ರವರೆಗಿನ ಬಜೆಟ್ನ ಶೇಕಡಾ 2% ಸಮಾನವಾಗಿದೆ.
ಇದನ್ನೂ ಓದಿ : UDGAM Portal: ಕ್ಲೈಮ್ ಮಾಡದ ಠೇವಣಿ ಮಾಹಿತಿಗೆ ವೆಬ್ಸೈಟ್ ಆರಂಭಿಸಿದ ಆರ್‌ಬಿಐ! ನೀವು ಚೆಕ್ ಮಾಡ್ಕೊಬಹುದು
ದೇಶದ ಹಲವಾರು ಭಾಗಗಳಲ್ಲಿನ ಅಸಮ ಮಳೆ ಮತ್ತು ಪ್ರವಾಹವು ಟೊಮೆಟೊ ಮತ್ತು ಈರುಳ್ಳಿಯಂತಹ ಪ್ರಮುಖ ಪದಾರ್ಥಗಳು ಸೇರಿದಂತೆ ಹಲವಾರು ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ. 2022 ರಲ್ಲಿ ಗೋಧಿ ರಫ್ತಿನ ಮೇಲೆ ನಿಷೇಧ ಹೇರಿದ ನಂತರ, ಸರ್ಕಾರವು ಕಳೆದ ತಿಂಗಳು ಕೆಲವು ಅಕ್ಕಿ ಪ್ರಭೇದಗಳ ಸಾಗಣೆಯನ್ನು ನಿರ್ಬಂಧಿಸಿತು. ಅದೇ ರೀತಿ ಕೆಲವು ಆಹಾರ ಪದಾರ್ಥಗಳನ್ನು ಸಂಗ್ರಹಿಸುವುದರ ಮೇಲೆ ನಿರ್ಬಂಧಗಳನ್ನು ವಿಧಿಸಿತು.