Site icon Vistara News

Pot Holes: ವರ್ಷಾಂತ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಗುಂಡಿ ಮುಕ್ತಗೊಳಿಸಲು ಯತ್ನ: ನಿತಿನ್ ಗಡ್ಕರಿ

nitin gadkari highways

ಹೊಸದಿಲ್ಲಿ: ವರ್ಷಾಂತ್ಯದ ವೇಳೆಗೆ ದೇಶದಾದ್ಯಂತ ಹೆದ್ದಾರಿಗಳನ್ನು (National highway) “ಗುಂಡಿ ಮುಕ್ತ” (pot holes) ಮಾಡಲು ನೀತಿಯನ್ನು ರೂಪಿಸಲಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಗುರುವಾರ ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯಾವುದೇ ಗುಂಡಿಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವು ನೀತಿಯನ್ನು ರೂಪಿಸುತ್ತಿದೆ. ಯೋಜನೆಯನ್ನು ಯಶಸ್ವಿಗೊಳಿಸಲು ಯುವ ಎಂಜಿನಿಯರ್‌ಗಳನ್ನು ನಿಯೋಜಿಸಲಾಗುವುದು. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 1,46,000 ಕಿಲೋಮೀಟರ್ ಉದ್ದದ ಸಂಪೂರ್ಣ ರಾಷ್ಟ್ರೀಯ ಹೆದ್ದಾರಿಗಳ ಮ್ಯಾಪಿಂಗ್ ಅನ್ನು ಮಾಡಿದೆ ಮತ್ತು ಈ ವರ್ಷದ ಡಿಸೆಂಬರ್ ವೇಳೆಗೆ ಗುಂಡಿಗಳನ್ನು ನಿವಾರಿಸಲು, ಕಾರ್ಯಕ್ಷಮತೆ ಆಧಾರಿತ ನಿರ್ವಹಣೆ ಮತ್ತು ಅಲ್ಪಾವಧಿಯ ನಿರ್ವಹಣಾ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ಸಚಿವಾಲಯವು ರಾಷ್ಟ್ರೀಯ ಹೆದ್ದಾರಿಗಳ ಸುರಕ್ಷತಾ ಲೆಕ್ಕಪರಿಶೋಧನೆಯನ್ನೂ ನಡೆಸುತ್ತಿದೆ. ದೆಹಲಿ ಮತ್ತು ಜೈಪುರ ನಡುವೆ ವಿದ್ಯುತ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಕೆಲಸ ಮಾಡುತ್ತಿದೆ. ನಿರ್ಮಾಣ ಉಪಕರಣಗಳಲ್ಲಿ ಪರ್ಯಾಯ ಇಂಧನ ಬಳಕೆಯನ್ನು ಉತ್ತೇಜಿಸುವ ಕರಡು ನೀತಿಯನ್ನು ಸಚಿವಾಲಯ ಸಿದ್ಧಪಡಿಸುತ್ತಿದೆ. ಪೆಟ್ರೋಲ್‌ ಇಂಧನ ಮೇಲಿನ ವೆಚ್ಚ ಮತ್ತು ಅವಲಂಬನೆಯನ್ನು ಕಡಿಮೆ ಮಾಡಲು ಇದನ್ನು ಮಾಡಲಾಗುತ್ತಿದೆ. ಪೆಟ್ರೋಲ್‌ ಇಂಧನ ಬಳಸದಿರಲು ನಿರ್ಮಾಣ ಸಲಕರಣೆ ತಯಾರಕರಿಗೆ ಪ್ರೋತ್ಸಾಹ ನೀಡಲು ಸರ್ಕಾರ ಮುಂದಾಗಿದೆ ಎಂದರು.

ಅದೇ ರೀತಿ ರಸ್ತೆಗಳ ನಿರ್ಮಾಣದಲ್ಲಿ ಪುರಸಭೆಯ ತ್ಯಾಜ್ಯವನ್ನು ಬಳಸುವ ಬಗ್ಗೆ ನೀತಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಸರ್ಕಾರವಿದೆ. ತಂತ್ರಜ್ಞಾನ ಮತ್ತು ದೂರದೃಷ್ಟಿಯ ನಾಯಕತ್ವದ ಮೂಲಕ ತ್ಯಾಜ್ಯದಿಂದ ಸಂಪತ್ತನ್ನು ಸೃಷ್ಟಿಸುವುದು ಸಾಧ್ಯ. ದಿನನಿತ್ಯ ಉತ್ಪತ್ತಿಯಾಗುವ ಘನತ್ಯಾಜ್ಯ ವಿಲೇವಾರಿ ದೇಶದಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಮುಖ ಪರಿಸರ ಸವಾಲಾಗಿದೆ. ತ್ಯಾಜ್ಯವು ದೇಶಕ್ಕೆ ದೊಡ್ಡ ಸಮಸ್ಯೆಯಾಗಿದ್ದು, ಈ ರೀತಿಯ ನೀತಿಯನ್ನು ಜಾರಿಗೆ ತಂದರೆ ದೇಶಕ್ಕೆ ಅನುಕೂಲ. ಈ ನೀತಿಯು 2070ರ ವೇಳೆಗೆ ಪ್ರಧಾನಿಯವರ ಶೂನ್ಯ ತ್ಯಾಜ್ಯದ ಗುರಿ ಸಾಧಿಸಲು ಭಾರತಕ್ಕೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

2025ರ ವೇಳೆಗೆ ಭಾರತದಲ್ಲಿ ಹೆಚ್ಚಿನ ಸುಸ್ಥಿರ ವಾಯುಯಾನ ಇಂಧನವನ್ನು ಬಳಸಲು, ಈಗಿನ ಒಂದು ಶೇಕಡಾ ಬಳಕೆಯನ್ನು 5%ಗೆ ಹೆಚ್ಚಿಸಲು ಆದೇಶವಿದೆ. ಕೃಷಿ ಬೆಳವಣಿಗೆಯನ್ನು 6%ರಷ್ಟು ಹೆಚ್ಚಿಸಲು ಎಥೆನಾಲ್ ಅನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳುವಂತೆ ಸಚಿವಾಲಯವು ಒತ್ತಾಯಿಸುತ್ತಿದೆ. ಇದರ ಉದ್ದೇಶ ರೂ.2 ಲಕ್ಷ ಕೋಟಿಗಳ ಎಥೆನಾಲ್ ಆರ್ಥಿಕತೆಯನ್ನು ಸೃಷ್ಟಿಸುವುದು. ದೆಹಲಿಯ ಫ್ಲೆಕ್ಸ್ ಎಂಜಿನ್‌ಗಳಲ್ಲಿ ವಿಶ್ವದ ಮೊದಲ BS6 (ಭಾರತ್ ಸ್ಟೇಜ್ ಎಮಿಷನ್ ಸ್ಟ್ಯಾಂಡರ್ಡ್ಸ್ 6) ಫ್ಲೆಕ್ಸ್ ಫ್ಯುಯಲ್ ಸ್ಟ್ರಾಂಗ್ ಹೈಬ್ರಿಡ್ ವಾಹನವನ್ನು ಬಿಡುಗಡೆ ಮಾಡುವುದರೊಂದಿಗೆ 100% ಎಥೆನಾಲ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಉಳಿತಾಯ ರೂ.1 ಲಕ್ಷ ಕೋಟಿಯನ್ನು ಮೀರುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Nitin Gadkari: ಪ್ರಯಾಣಿಕ ಕಾರುಗಳಿಗೆ 6 ಏರ್‌ಬ್ಯಾಗ್ ಕಡ್ಡಾಯವಲ್ಲ! ಕೇಂದ್ರ ಸಚಿವ ಗಡ್ಕರಿ ಹೇಳಿಕೆ

Exit mobile version