ಬೆಂಗಳೂರು: ಮೂರು ಬಾರಿ ಗ್ರ್ಯಾಮಿ ಪುರಸ್ಕೃತ ಹಾಗೂ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ (Ricky Kej) ಅವರು, ತಮಗೆ ಐವೇರ್ ರಿಟೇಲ್ ಚೈನ್ ಕಂಪನಿ ಲೆನ್ಸ್‌ಕಾರ್ಟ್‌ನಿಂದ (Lenskart) ಕಿರುಕುಳ ನೀಡಲಾಗುತ್ತಿದೆ. ಪದೇ ಪದೇ ಕರೆ ಮಾಡಿ ಕಿರಿಕಿರಿ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಸರಣಿ ಟ್ವೀಟ್ ಮಾಡಿ, ಆರೋಪ ಮಾಡಿದ್ದಾರೆ.
ಆತ್ಮೀಯ @Lenskart_com @peyushbansal ನಿಮ್ಮ ಬ್ರ್ಯಾಂಡ್ ಬಗ್ಗೆ ನನಗೆ ಗೌರವವಿದೆ. ಆದರೆ ನಿರಂತರ ಕಿರುಕುಳ ನೀಡುವುದನ್ನು ನಿಲ್ಲಿಸಿ. ನಿಮ್ಮ ಟೆಲಿಮಾರ್ಕೆಟಿಂಗ್ ಡೇಟಾಬೇಸ್‌ನಿಂದ ನನ್ನ ನಂಬರ್ ತೆಗೆದುಹಾಕಲು ನಾನು ಹಲವು ಬಾರಿ ಕೇಳಿದ್ದೇನೆ. ತೆಗೆದು ಹಾಕುವ ಭರವಸೆ ಮಾಡಲಾಗಿತ್ತು. ಹಾಗಿದ್ದೂ ನನಗೆ ಇನ್ನೂ ಕರೆಗಳು ಬರುತ್ತಿವೆ. ನಾನು ಈ ಬಗ್ಗೆ ಕಾನೂನು ಕ್ರಮಕ್ಕೆ ಮುಂದಾಗಬಹುದೇ ಎಂದು ಅವರು ಟ್ವೀಟ್ ಮಾಡಿದ್ದಾರೆ.
ನಾನು ನಿಮ್ಮ ಕಂಪನಿ ಜತೆ ವ್ಯವಹರಿಸಿದ್ದೇ ಶಾಪವಾಗಿ ಪರಿಣಮಿಸಿದೆ. ಈ ಕಿರಿಕಿರಿಯನ್ನು ತಪ್ಪಿಸಲು ಒಂದೇ ದಾರಿ ಇದ್ದಂತಿದೆ. ಒಂದೋ ನಾನು ನನ್ನ ಫೋನ್ ನಂಬರ್ ಬದಲಿಸಿಕೊಳ್ಳಬೇಕು ಇಲ್ಲವೇ ಲೆನ್ಸ್‌ಕಾರ್ಟ್ ಸ್ಥಗಿತವಾಗಬೇಕು ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Grammy awards 2023: ಯಾರು ಈ ರಿಕ್ಕಿ ಕೇಜ್? ಕನ್ನಡಿಗನ ವಿವರ ಇಲ್ಲಿದೆ ನೋಡಿ, ಅವರ ಮ್ಯೂಸಿಕ್ ಇಲ್ಲಿ ಕೇಳಿ
ರಿಕ್ಕಿ ಕೇಜ್ ಅವರ ದೂರಿಗೆ ಪ್ರತಿಕ್ರಿಯಿಸಿರುವ ಲೆನ್ಸ್‌ಕಾರ್ಟ್, ಕೂಡಲೇ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದೆ. ರಿಕ್ಕಿ, ಪುನರಾವರ್ತಿತ ಕರೆಗಳು ಕಿರಿಕಿರಿಯುಂಟು ಮಾಡುತ್ತವೆ. ಇದು ನಮಗೂ ಅರ್ಥವಾಗುತ್ತದೆ. ಇದಕ್ಕಾಗಿ ಕ್ಷಮೆ ಕೋರುತ್ತೇವೆ. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಲೆನ್ಸ್‌ಕಾರ್ಟ್ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದೆ. ಈ ಹಿಂದೆಯೂ ರಿಕ್ಕಿ ಕೇಜ್ ಅವರಿಗೆ ಕಸ್ಟಮ್ಸ್ ಸಮಸ್ಯೆಯಾಗಿ, ಎರಡು ತಿಂಗಳಿಗೂ ಅಧಿಕ ಕಾಲ ಗ್ರ್ಯಾಮಿ ಅವಾರ್ಡ್ ಬೆಂಗಳೂರು ಕಸ್ಟಮ್ಸ್ ಇಲಾಖೆಯ ಬಳಿ ಉಳಿದಿತ್ತು. ಕೊನೆಗೆ ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿದಾಗ ಸಮಸ್ಯೆ ಬಗೆಹರಿದಿತ್ತು,