ಬಿಹಾರದ ಸಾರನ್ ಎಂಬಲ್ಲಿ ಮದುವೆಯೊಂದು ನಡೆಯುತ್ತಿತ್ತು. ಆದರೆ ಕೊನೇ ಕ್ಷಣದಲ್ಲಿ ಆ ಮದುವೆಗೆ ಟ್ವಿಸ್ಟ್ ಸಿಕ್ಕಿದೆ. ವಧುವಿಗೆ ತಾಳಿ ಕಟ್ಟಲು ಸಜ್ಜಾಗಿದ್ದ ವರ, ಆಕೆಯ ತಂಗಿಗೆ ತಾಳಿ ಕಟ್ಟಿದ್ದಾನೆ. ಅಯ್ಯೋ..ಇದೇನಾಯ್ತು ಎಂದು ಅಲ್ಲಿದ್ದವರೆಲ್ಲ ಗೊಂದಲದಲ್ಲಿ ಇದ್ದಾಗಲೇ ಸತ್ಯ ಹೊರಬಿದ್ದಿದೆ. ಆ ವರ ಮತ್ತು ವಧುವಿನ ತಂಗಿ ಮೊದಲಿನಿಂದಲೂ ಆತ್ಮೀಯರಾಗಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ತನ್ನನ್ನು ಬಿಟ್ಟು ಅಕ್ಕನನ್ನು ಮದುವೆಯಾಗಲು ಹೊರಟವನಿಗೆ ಆಕೆ ಹೆದರಿಸಿದ್ದಳು. ‘ನೀನು ನನ್ನ ಅಕ್ಕನನ್ನು ಮದುವೆಯಾಗಿದ್ದೇ ಆದಲ್ಲಿ, ನಾನು ಸಾಯುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದಳು. ಹೀಗಾಗಿ ವರ ಕೊನೇ ಕ್ಷಣದಲ್ಲಿ ಆಕೆಯ ಕೈ ಹಿಡಿದಿದ್ದ.
ಛಪ್ರಾ ಎಂಬ ಊರಿನ ಹುಡುಗ ರಾಜೇಶ್ ಕುಮಾರ್ಗೆ ಸರಾನ್ನ ಹುಡುಗಿ ರಿಂಕು ಕುಮಾರಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಮೇ 2ರಂದು ವಿವಾಹ ಇತ್ತು. ಬೆಳಗ್ಗೆಯಿಂದಲೂ ಮದುವೆಗೆ ಸಂಬಂಧಪಟ್ಟ ಶಾಸ್ತ್ರಗಳು, ಕಾರ್ಯಕ್ರಮಗಳು ಏನೂ ಅಡಚಣೆಯಿಲ್ಲದೆ ನಡೆಯುತ್ತಲೇ ಇದ್ದವು. ಈ ಮಧ್ಯೆ ವರನಿಗೆ ಕರೆಯೊಂದು ಬಂದಿತ್ತು. ಅದರು ವಧು ರಿಂಕು ಕುಮಾರಿ ತಂಗಿ ಪುತುಲ್ಳದ್ದಾಗಿತ್ತು. ಫೋನ್ ಮಾಡಿದ್ದ ಆಕೆ ‘ನೀನು ಈ ಮದುವೆ ಆಚರಣೆ ಮುಂದುವರಿಸಿ, ಅಕ್ಕನಿಗೆ ತಾಳಿ ಕಟ್ಟಿದ್ದೇ ಆದಲ್ಲಿ ನಾನು ಕಟ್ಟಡದಿಂದ ಜಿಗಿದು ಸಾಯುತ್ತೇನೆ’ ಎಂದು ಹೇಳಿದ್ದಳು. ಅಷ್ಟರಲ್ಲಿ ರಿಂಕು ಮತ್ತು ರಾಜೇಶ್ ಮಧ್ಯೆ ಹಾರ ಬದಲಿಸಿಕೊಂಡು ಆಗಿತ್ತು. ಆದರೆ ರಾಜೇಶ್ ತಡಮಾಡಲಿಲ್ಲ. ಕೂಡಲೇ ಹಾರವನ್ನು ಬಿಚ್ಚಿಟ್ಟು, ಮದುವೆ ಬೇಡ ಎಂದಿದ್ದ.
ರಾಜೇಶ್ ಈ ವಿಷಯವನ್ನು ತನ್ನ ತಂದೆಗೆ ತಿಳಿಸಿದ. ಬಳಿಕ ರಿಂಕು ಕುಟುಂಬದವರ ಬಳಿಯೂ ಅವನು ಇದೇ ವಿಷಯ ಹೇಳಿದ. ತಾನು ಮತ್ತು ಪುತುಲ್ ಪರಸ್ಪರ ಪ್ರೀತಿಸುತ್ತಿದ್ದೇವೆ ಎಂದು ಹೇಳಿದ. ಇದು ಎರಡೂ ಕುಟುಂಬವನ್ನು ಆಘಾತಕ್ಕೀಡು ಮಾಡಿತು. ಕುಟುಂಬಗಳ ಮಧ್ಯೆ ಜಗಳ ತಾರಕಕ್ಕೆ ಏರಿತು. ಹೀಗಾಗಿ ಮದುವೆಗೆ ಆಗಮಿಸಿದ್ದ ಕೆಲವು ಅತಿಥಿಗಳು ಸೇರಿ ಪೊಲೀಸರನ್ನು ಕರೆಸಿದರು. ಅಲ್ಲಿಗೆ ಪೊಲೀಸರು ಆಗಮಿಸುತ್ತಿದ್ದಂತೆ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ತಿಳಿಯಾಯಿತು ಮತ್ತು ಕುಳಿತು-ಮಾತನಾಡಿ ಒಂದು ಒಪ್ಪಂದಕ್ಕೆ ಬರಲು ಕುಟುಂಬದವರು ಒಪ್ಪಿಕೊಂಡರು.
ಇದನ್ನೂ ಓದಿ: Anikha Sindya: ಖಳನಾಯಕಿ ಪಾತ್ರಗಳಿಂದಾಗಿ ಮದುವೆ ಪ್ರಸ್ತಾಪಗಳೇ ಬಂದಿಲ್ಲ: ನಟಿ ಅನಿಕಾ ಸಿಂಧ್ಯ
ಇನ್ನು ರಾಜೇಶ್ ತನ್ನ ಮತ್ತು ಪುತುಲ್ ಕತೆಯನ್ನು ಹೇಳಿಕೊಂಡ. ‘ಪುತುಲ್ ಛಪ್ರಾ ಕಾಲೇಜಿನಲ್ಲಿ ಓದುತ್ತಿದ್ದಾಗಿನಿಂದಲೂ ನಾವು ಪರಿಚಿತರು. ನಾವು ಆಗಾಗ ಭೇಟಿಯಾಗುತ್ತಿದ್ದೆವು. ಫೋನ್ನಲ್ಲಿ ತಾಸುಗಟ್ಟಲೆ ಮಾತಾನಾಡುತ್ತಿದ್ದೆವು. ನಮ್ಮಿಬ್ಬರಲ್ಲೂ ಪ್ರೀತಿಯಿತ್ತು. ಆದರೆ ಅದನ್ನು ನೇರವಾಗಿ-ಪರಸ್ಪರರಿಗೆ ಹೇಳಿಕೊಳ್ಳಲು ಆಗಿರಲಿಲ್ಲ. ಅಷ್ಟರಲ್ಲಿ ರಿಂಕು ಜತೆ ಮದುವೆ ಫಿಕ್ಸ್ ಆಯಿತು’ ಎಂದು ತಿಳಿಸಿದ. ಇನ್ನೊಂದೆಡೆ ರಾಜೇಶ್ ತನ್ನ ಅಕ್ಕ ರಿಂಕುವನ್ನು ಮದುವೆಯಾಗುತ್ತಿದ್ದಾನೆ ಎಂಬ ವಿಷಯ ಪುತುಲ್ಳನ್ನು ಕಂಗೆಡಿಸಿತ್ತು. ಮದುವೆಯನ್ನು ನಿಲ್ಲಿಸಲು ಅಥವಾ ತಾನೇ ಸಾಯಲು ನಿರ್ಧಾರ ಮಾಡಿದ್ದಳು. ಆದರೆ ನಂತರ ಈ ಕತೆ ಸುಖಾಂತ್ಯವಾಗಿದೆ. ಕುಟುಂಬದವರ ಒಪ್ಪಿಗೆ ಪಡೆದು ರಾಜೇಶ್ ಮತ್ತು ಪುತುಲ್ ವಿವಾಹವಾಗಿದ್ದಾರೆ.