ನವದೆಹಲಿ: ದೇಶದಲ್ಲಿ ದಿನೇದಿನೆ ರೂಪಾಯಿ ಮೌಲ್ಯ ಕುಸಿಯುತ್ತಿದ್ದರೂ ಜಿಡಿಪಿ ಬೆಳವಣಿಗೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಕಾರಾತ್ಮಕವಾಗಿದೆ. ಇದರ ಬೆನ್ನಲ್ಲೇ, ಅಕ್ಟೋಬರ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು (GST Collection) ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಳೆದ ತಿಂಗಲೂ 1.72 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ಸರಕು ಮತ್ತು ಸೇವಾ ತೆರಿಗೆ (Goods And Service Tax) ಜಾರಿಯಾದ ಬಳಿಕವೇ ಇದು ಎರಡನೇ ಗರಿಷ್ಠ ಸಂಗ್ರಹ ಎನಿಸಿದೆ.
“ದೇಶದಲ್ಲಿ ಕಳೆದ ತಿಂಗಳು ಜಿಎಸ್‌ಟಿ ಸಂಗ್ರಹ ಪ್ರಮಾಣವು ಎರಡನೇ ಗರಿಷ್ಠ ಕಲೆಕ್ಷನ್ ದಾಖಲೆ ಬರೆದಿದೆ. ಅಕ್ಟೋಬರ್‌ನಲ್ಲಿ 1.72 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. 2022ರ ಅಕ್ಟೋಬರ್‌ಗೆ ಹೋಲಿಸಿದರೆ ಇದು ಶೇ.13ರಷ್ಟು ಏರಿಕೆಯಾಗಿದೆ. 2022ರ ಅಕ್ಟೋಬರ್‌ನಲ್ಲಿ 1.52 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು” ಎಂದು ಕೇಂದ್ರ ಹಣಕಾಸು ಸಚಿವಾಲಯವು ಪ್ರಕಟಣೆ ತಿಳಿಸಿದೆ.
GST revenue collection for October 2023 is second highest ever, next only to April 2023, at ₹1.72 lakh crore; records increase of 13% Y-o-Y: Ministry of Finance pic.twitter.com/ggP4TK6dux
— ANI (@ANI) November 1, 2023
ಇದುವರೆಗಿನ ಗರಿಷ್ಠ ಸಂಗ್ರಹ ಎಷ್ಟು?
2023ರ ಏಪ್ರಿಲ್ ತಿಂಗಳಲ್ಲಿ 1.87 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ಜಿಎಸ್‌ಟಿ ಜಾರಿಯಾದ ಬಳಿಕವೇ ಒಂದು ತಿಂಗಳಲ್ಲಿ ಸಂಗ್ರಹವಾದ ಗರಿಷ್ಠ ಜಿಎಸ್‌ಟಿ ಇದಾಗಿದೆ. ಇದರ ನಂತರ ಅಕ್ಟೋಬರ್‌ನಲ್ಲಿ 1.72 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿರುವುದು ಎರಡನೇ ಗರಿಷ್ಠ ಎನಿಸಿದೆ. ಇದರೊಂದಿಗೆ 2023-24ನೇ ಹಣಕಾಸು ವರ್ಷದಲ್ಲಿ ಮಾಸಿಕ ಸರಾಸರಿ 1.66 ಲಕ್ಷ ಕೋಟಿ ರೂ. ಸಂಗ್ರಹವಾದಂತಾಗಿದೆ. ಇದು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ.11ರಷ್ಟು ಏರಿಕೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ: GST Evasion: ಜಿಎಸ್‌ಟಿ ವಂಚಕರಿಗೆ ಗುನ್ನ; 50 ಸಾವಿರ ಕೋಟಿ ರೂ. ವಸೂಲಿ ಮಾಡಲಿದೆ ಕೇಂದ್ರ
2023ರ ಸೆಪ್ಟೆಂಬರ್‌ನಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು 1,62,712 ಕೋಟಿ ರೂ. ಆಗಿತ್ತು. ಈ ಪೈಕಿ ಸಿಜಿಎಸ್‌ಟಿ 29,818 ಕೋಟಿ ರೂ., ಎಸ್‌ಜಿಎಸ್‌ಟಿ 37,657 ಕೋಟಿ ರೂ., ಐಜಿಎಸ್‌ಟಿ 83,623 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 41,145 ಕೋಟಿ ರೂ. ಸೇರಿದಂತೆ) ಮತ್ತು ಸೆಸ್ 11,613 ಕೋಟಿ ರೂ. (ಸಂಗ್ರಹಿಸಿದ ಸರಕುಗಳ ರೂ 881 ಕೋಟಿ ಸೇರಿದಂತೆ) ಸಂಗ್ರಹವಾಗಿತ್ತು ಎಂಬುದಾಗಿ ಕೇಂದ್ರ ಹಣಕಾಸು ಇಲಾಖೆ ಪ್ರಕಟಣೆ ತಿಳಿಸಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ