Site icon Vistara News

GST Collection: ನವೆಂಬರ್‌ನಲ್ಲಿ 1.67 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ; ಕರ್ನಾಟಕದ ಪಾಲೆಷ್ಟು?

GST Collection

GST Collections Jump 15% To Rs 1.67 Lakh Crore In November

ನವದೆಹಲಿ: ಕೊರೊನಾ ಬಿಕ್ಕಟ್ಟಿನ ಬಳಿಕ ದೇಶದ ಆರ್ಥಿಕತೆ ಏಳಿಗೆಯತ್ತ ಸಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸರಕು ಮತ್ತು ಸೇವಾ ತೆರಿಗೆಯ ಸಂಗ್ರಹವೂ (Goods And Service Tax) ಏರಿಕೆಯಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಕಳೆದ ನವೆಂಬರ್‌ ತಿಂಗಳಲ್ಲಿ 1.67 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ (GST Collection) ಆಗಿದೆ. ಇದು ಕಳೆದ ವರ್ಷದ ನವೆಂಬರ್‌ಗೆ ಹೋಲಿಸಿದರೆ ಶೇ.15ರಷ್ಟು ಏರಿಕೆ ಎಂದು ಕೇಂದ್ರ ಸರ್ಕಾರ (Central Government) ಮಾಹಿತಿ ನೀಡಿದೆ. ಕರ್ನಾಟಕದಿಂದ 11,970 ಕೋಟಿ ರೂ. ಸಂಗ್ರಹವಾಗಿದೆ.

1.67 ಲಕ್ಷ ಕೋಟಿ ರೂಪಾಯಿಯಲ್ಲಿ ಸಿಜಿಎಸ್‌ಟಿ 30,420 ಕೋಟಿ ರೂ., ಎಸ್‌ಜಿಎಸ್‌ಟಿ 38,336 ಕೋಟಿ ರೂ. ಹಾಗೂ ಐಜಿಎಸ್‌ಟಿ 87,009 ಕೋಟಿ ರೂ. (ಆಮದು ಸುಂಕದಿಂದ ಸಂಗ್ರಹವಾದ 39,198 ಕೋಟಿ ರೂ. ಸೇರಿ) ಇದೆ. 2023-24ನೇ ಹಣಕಾಸು ವರ್ಷದಲ್ಲಿ ಆರನೇ ಬಾರಿಗೆ ಜಿಎಸ್‌ಟಿ ಸಂಗ್ರಹ ಮೊತ್ತವು 1.60 ಲಕ್ಷ ಕೋಟಿ ರೂ. ದಾಟಿದೆ. ಕೊರೊನಾ ಹಿನ್ನೆಲೆಯಲ್ಲಿ ಜಿಎಸ್‌ಟಿ ಸಂಗ್ರಹವು ಭಾರಿ ಇಳಿಕೆಯಾಗಿತ್ತು. ಆದರೆ, ಇತ್ತೀಚೆಗೆ ಜಿಎಸ್‌ಟಿ ಸಂಗ್ರಹವು ಗಣನೀಯವಾಗಿ ಏರಿಕೆ ಕಂಡಿದ್ದು, ಕೇಂದ್ರ ಸರ್ಕಾರಕ್ಕೆ ಭರ್ಜರಿ ಆದಾಯವಾಗಿದೆ.

ದೇಶದಲ್ಲಿ ಅಕ್ಟೋಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ ಪ್ರಮಾಣವು ಎರಡನೇ ಗರಿಷ್ಠ ಕಲೆಕ್ಷನ್‌ ದಾಖಲೆ ಬರೆದಿತ್ತು. ಅಕ್ಟೋಬರ್‌ನಲ್ಲಿ 1.72 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. 2022ರ ಅಕ್ಟೋಬರ್‌ಗೆ ಹೋಲಿಸಿದರೆ ಇದು ಶೇ.13ರಷ್ಟು ಏರಿಕೆಯಾಗಿತ್ತು. 2022ರ ಅಕ್ಟೋಬರ್‌ನಲ್ಲಿ 1.52 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು.

ಸೆಪ್ಟೆಂಬರ್‌ನಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು 1,62,712 ಕೋಟಿ ರೂ. ಆಗಿತ್ತು. ಈ ಪೈಕಿ ಸಿಜಿಎಸ್‌ಟಿ 29,818 ಕೋಟಿ ರೂ., ಎಸ್‌ಜಿಎಸ್‌ಟಿ 37,657 ಕೋಟಿ ರೂ., ಐಜಿಎಸ್‌ಟಿ 83,623 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 41,145 ಕೋಟಿ ರೂ. ಸೇರಿದಂತೆ) ಮತ್ತು ಸೆಸ್ 11,613 ಕೋಟಿ ರೂ. (ಸಂಗ್ರಹಿಸಿದ ಸರಕುಗಳ ರೂ 881 ಕೋಟಿ ಸೇರಿದಂತೆ) ಸಂಗ್ರಹವಾಗಿತ್ತು.

ಇದನ್ನೂ ಓದಿ: GST Evasion: ಜಿಎಸ್‌ಟಿ ವಂಚಕರಿಗೆ ಗುನ್ನ; 50 ಸಾವಿರ ಕೋಟಿ ರೂ. ವಸೂಲಿ ಮಾಡಲಿದೆ ಕೇಂದ್ರ

ಇದುವರೆಗಿನ ಗರಿಷ್ಠ ಸಂಗ್ರಹ ಎಷ್ಟು?

2023ರ ಏಪ್ರಿಲ್‌ ತಿಂಗಳಲ್ಲಿ 1.87 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ಜಿಎಸ್‌ಟಿ ಜಾರಿಯಾದ ಬಳಿಕವೇ ಒಂದು ತಿಂಗಳಲ್ಲಿ ಸಂಗ್ರಹವಾದ ಗರಿಷ್ಠ ಜಿಎಸ್‌ಟಿ ಇದಾಗಿದೆ. ಇದರ ನಂತರ ಅಕ್ಟೋಬರ್‌ನಲ್ಲಿ 1.72 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿರುವುದು ಎರಡನೇ ಗರಿಷ್ಠ ಎನಿಸಿದೆ. ಇದರೊಂದಿಗೆ 2023-24ನೇ ಹಣಕಾಸು ವರ್ಷದಲ್ಲಿ ಮಾಸಿಕ ಸರಾಸರಿ 1.66 ಲಕ್ಷ ಕೋಟಿ ರೂ. ಸಂಗ್ರಹವಾದಂತಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version