Site icon Vistara News

GST Evasion: ಜಿಎಸ್‌ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!

Vaidyanath Co-operative sugar factory

ಮುಂಬೈ: ಜಿಎಸ್‌ಟಿ ವಂಚನೆ (GST Evasion) ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಪಂಕಜಾ ಮುಂಡೆ (BJP national secretary Pankaja Munde) ಒಡೆತನದ, ಬೀಡ್ ಜಿಲ್ಲೆಯಲ್ಲಿರುವ (Beed District) ವೈದ್ಯನಾಥ್ ಸಹಕಾರಿ ಸಕ್ಕರೆ ಕಾರ್ಖಾನೆಗೆ (Vaidyanath Co-operative sugar factory) ಸೇರಿದ 19 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸರಕು ಮತ್ತು ಸೇವಾ ತೆರಿಗೆ ಕಮಿಷನರೇಟ್ (Goods and Services Tax Commissionerate) ಸೋಮವಾರ ವಶಪಡಿಸಿಕೊಂಡಿದೆ. ಸಕ್ಕರೆ ಮಾರಾಟಕ್ಕೆ ಸಂಬಂಧಿಸಿದಂತೆ ಜಿಎಸ್‌ಟಿ ವಂಚನೆ ಹಿನ್ನೆಲೆಯಲ್ಲಿ ಕಮಿಷನರೇಟ್ ಈ ಕ್ರಮ ಕೈಗೊಂಡಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ವೈದ್ಯನಾಥ್ ಸಹಕಾರಿ ಸಕ್ಕರೆ ಕಾರ್ಖಾನೆಯು ಜಿಎಸ್‌ಟಿ ಪಾವತಿಸಲು ವಿಫಲವಾಗಿತ್ತು. ವಶಪಡಿಸಿಕೊಂಡ ಸೊತ್ತುಗಳಲ್ಲಿ 19 ಕೋಟಿ ರೂ. ಮೌಲ್ಯದ ಕಾರ್ಖಾನೆಯ ಬಾಯ್ಲರ್ ಮತ್ತು ಇತರ ಸಂಬಂಧಿತ ಯಂತ್ರೋಪಕರಣಗಳು ಸೇರಿವೆ.

ಹಣದ ಕೊರತೆಯಿಂದಾಗಿ ನಮ್ಮ ಕಾರ್ಖಾನೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಾವು ಮೊದಲು ರೈತರ ಬಾಕಿ ಪಾವತಿಸಲು ನಿರ್ಧರಿಸಿದ್ದೇವೆ. ನಮಗೆ ಸರ್ಕಾರದಿಂದ ಆರ್ಥಿಕ ನೆರವು ಬೇಕಿತ್ತು. ಇನ್ನು ಕೆಲವು ಕಾರ್ಖಾನೆಗಳ ಜತೆಗೆ ನಮ್ಮ ಸಕ್ಕರೆ ಕಾರ್ಖಾನೆಯ ಹೆಸರೂ ಮೊದಲ ಪಟ್ಟಿಯಲ್ಲಿದ್ದು, ಸರ್ಕಾರದಿಂದ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ ನಮ್ಮ ಕಾರ್ಖಾನೆಯನ್ನು ಹೊರತುಪಡಿಸಿ ಉಳಿದೆಲ್ಲ ಕಾರ್ಖಾನೆಗಳು ಆರ್ಥಿಕ ನೆರವು ಪಡೆದಿವೆ. ಆ ಸಮಯದಲ್ಲಿ ನಮಗೆ ನೆರವು ಸಿಕ್ಕಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಪಂಕಜಾ ಮುಂಡೆ ಅವರು ಹೇಳಿದ್ದಾರೆ.

ಮುಂಡೆ ಅವರು ಜುಲೈ 7 ರಿಂದ ಎರಡು ತಿಂಗಳ ರಾಜಕೀಯ ವಿರಾಮ ತೆಗೆದುಕೊಂಡಿದ್ದರು. ಅದಾದ ಬಳಿಕ ಶಿವಶಕ್ತಿ ಯಾತ್ರೆಗಾಗಿ ಸುಮಾರು 10 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದರು. ಈ ಪ್ರವಾಸವನ್ನು ಅವರು ಬಿಜೆಪಿಯ ಬ್ಯಾನರ್‌ನ ಅಡಿ ಮಾಡಿರಲಿಲ್ಲ. ಸ್ವಂತ ರಾಜಕೀಯ ಪ್ರವಾಸ ಕೈಗೊಂಡಿದ್ದರು. ಈ ಹಂತದಲ್ಲಿ ಮುಂಡೆ ನೇತೃತ್ವದ ಸಕ್ಕರೆ ಕಾರ್ಖಾನೆಯ ಸೊತ್ತುಗಳನ್ನು ಜಫ್ತಿ ಮಾಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಈ ಸುದ್ದಿಯನ್ನೂ ಓದಿ: NCP Crisis: ಎನ್‌ಸಿಪಿ-ಬಿಜೆಪಿ ದೋಸ್ತಿ; ‘ಮಹಾ’ ಕಮಲ ಶಾಸಕರ ಅಸಮಾಧಾನ! ಪಂಕಜಾ ಮುಂಡೆ ಬಹಿರಂಗ ಆಕ್ರೋಶ

2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿಪಿಯ ತಮ್ಮ ಸೋದರಸಂಬಂಧಿ ಧನಂಜಯ್ ಮುಂಡೆ ವಿರುದ್ಧ ಪಂಕಾಜ ಮುಂಡೆ ಅವರು ಸೋಲು ಅನುಭವಿಸಿದ್ದರು. ಆ ಬಳಿಕ ಅವರನ್ನು ಬಿಜೆಪಿಯಲ್ಲಿ ಪೂರ್ತಿಯಾಗಿ ಪಕ್ಕಕ್ಕೆ ತಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪಂಕಜಾ ಮುಂಡೆ ಅವರು ಮಹಾರಾಷ್ಟ್ರದಲ್ಲಿ ಪಕ್ಷದ ನಾಯಕತ್ವದ ವಿರುದ್ಧ, ವಿಶೇಷವಾಗಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version