ನವದೆಹಲಿ: ದೇಶದ ಗಮನ ಸೆಳೆದಿರುವ ಹಾಗೂ ಲೋಕಸಭೆ ಚುನಾವಣೆಗೆ ಮುನ್ನುಡಿ ಎಂದೇ ಹೇಳಲಾಗುತ್ತಿರುವ ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದ್ದು, ಎಲ್ಲರ ಗಮನ ಈಗ ಚುನಾವಣೋತ್ತರ ಸಮೀಕ್ಷೆ ಮೇಲಿದೆ. ಹಾಗಾದರೆ, ಮತಗಟ್ಟೆ ಸಮೀಕ್ಷೆ (Exit Poll 2022) ಏನಿರಲಿದೆ? ಚುನಾವಣೆ ಪೂರ್ವ ಸಮೀಕ್ಷೆಗಳು ಏನು ಹೇಳಿದ್ದವು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಚುನಾವಣೆ ಪೂರ್ವ ಸಮೀಕ್ಷೆಯ ಸಾರ ಏನು?
ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ನಡೆದ ಚುನಾವಣೆಪೂರ್ವ ಸಮೀಕ್ಷೆಗಳಲ್ಲಿ ಜನ ಬಿಜೆಪಿ ಪರ ಒಲವು ತೋರಿಸಿದ್ದರು. ಸಮೀಕ್ಷೆಗಳ ವರದಿ ಪ್ರಕಾರ ಎರಡೂ ರಾಜ್ಯದಲ್ಲಿ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದ್ದವು. ಎಬಿಪಿ ನ್ಯೂಸ್ ಸಿ-ವೋಟರ್ ಸಮೀಕ್ಷೆ ಪ್ರಕಾರ ಗುಜರಾತ್‌ನಲ್ಲಿ ಬಿಜೆಪಿ ೧೩೧-೧೩೯, ಕಾಂಗ್ರೆಸ್ ೩೧-೩೯, ಆಪ್ ೭-೧೫ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿದೆ.
ಇದೇ ಎಬಿಪಿ ಸಿ-ವೋಟರ್ ಸಮೀಕ್ಷೆಯು ಹಿಮಾಚಲ ಪ್ರದೇಶದಲ್ಲೂ ಬಿಜೆಪಿಯೇ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದೆ. ಬಿಜೆಪಿ ೩೧-೩೯, ಕಾಂಗ್ರೆಸ್ ೨೦-೩೭ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಆಮ್ ಆದ್ಮಿ ಪಕ್ಷವು ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಮಾಹಿತಿ ನೀಡಿದೆ. ಇದೇ ರೀತಿ, ಪಿ-ಮಾರ್ಕ್, ಆಜ್ ತಕ್, ಟಿವಿ೯, ಜೀ ನ್ಯೂಸ್ ಸಮೀಕ್ಷೆಗಳು ಕೂಡ ಬಿಜೆಪಿಯೇ ಮತ್ತೆ ಗೆಲುವು ಸಾಧಿಸಲಿದೆ ಎಂದು ತಿಳಿಸಿವೆ.
ಎಕ್ಸಿಟ್ ಪೋಲ್ ಏನು ಹೇಳುತ್ತೆ?
ಯಾವುದೇ ಚುನಾವಣೆಯ ಒಪಿನಿಯನ್ ಪೋಲ್ ಹಾಗೂ ಎಕ್ಸಿಟ್ ಪೋಲ್ ಸಮೀಕ್ಷೆಗಳಿಗೂ ಅಂಥ ವ್ಯತ್ಯಾಸವಿರುವುದಿಲ್ಲ. ಹಾಗಂತ, ಎರಡೂ ಒಂದೇ ರೀತಿಯ ಫಲಿತಾಂಶವನ್ನಂತೂ ನೀಡುವುದಿಲ್ಲ. ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರದ ಕೊರತೆ, ಖ್ಯಾತನಾಮರು ಇಲ್ಲದೆ, ಸಾಮಾನ್ಯರನ್ನೇ ಹೊಂದಿರುವ ಆಪ್‌ಗೆ ಗೆಲುವು ಕಷ್ಟ ಎಂಬ ಮಾತುಗಳೇ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ಮಾತು ಕೇಳಿಬರಲು ಕಾರಣವಾಗಿದೆ. ಆದರೆ, ಕೊನೆಯ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದಾದ ಕಾರಣ ನಿರೀಕ್ಷೆ ಹೆಚ್ಚಾಗಿದೆ.
ಇದನ್ನೂ ಓದಿ | Exit Poll 2022 | ಹಿಮಾಚಲ ಪ್ರದೇಶ, ಗುಜರಾತ್‌ನಲ್ಲಿ ಯಾರಿಗೆ ‘ಸಮೀಕ್ಷೆ’ ಗೆಲುವು?